ನನ್ನ ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ: ಪಿ.ಟಿ.ಉಷಾ ಗಂಭೀರ ಆರೋಪ
ಅಲ್ಲಿ ಓದುತ್ತಿರುವ ಹುಡುಗಿಯರ ಸುರಕ್ಷತೆ ನಮ್ಮ ಪ್ರಮುಖ ಕಾಳಜಿ....
Team Udayavani, Feb 4, 2023, 7:01 PM IST
ನವದೆಹಲಿ : ಲೆಜೆಂಡರಿ ಅಥ್ಲೀಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಶನಿವಾರ, ಫೆ4 ರಂದು ಕೇರಳದ ಬಾಲುಸ್ಸೆರಿಯಲ್ಲಿರುವ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ ಮತ್ತು ಗೂಂಡಾಗಿರಿ ನಡೆದಿದೆ ಎಂದು ಆರೋಪಿಸಿದ್ದು, ಮುಂದುವರಿದ ತೊಂದರೆಯನ್ನು ಕೊನೆಗೊಳಿಸಲು ಸಹಾಯ ಮಾಡುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.
ಕೆಲವರು ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ಕಾಂಪೌಂಡ್‌ಗೆ ನುಗ್ಗಿ ನಿರ್ಮಾಣ ಕಾರ್ಯ ಆರಂಭಿಸಿದರು. ಮ್ಯಾನೇಜ್‌ಮೆಂಟ್ ಅವರನ್ನು ಎದುರಿಸಿದಾಗ, ಅವರು ಅನುಚಿತವಾಗಿ ವರ್ತಿಸಿದರು. ಅವರು ಪಣಂಗಾಡ್ ಪಂಚಾಯತ್‌ನಿಂದ ಅನುಮತಿ ಪಡೆದಿದ್ದಾರೆ ಎಂದು ಅವರು ಹೇಳಿಕೊಂಡರು, ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಮತ್ತು ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಪಿಟಿ ಉಷಾ ಹೇಳಿದ್ದಾರೆ.
ಇದು ಬೆಳೆಯುತ್ತಿರುವ ಸಂಸ್ಥೆಯಾಗಿದ್ದು, ಹಲವು ಕ್ರೀಡಾಪಟುಗಳಿಗೆ ಅಲ್ಲಿ ತರಬೇತಿ ನೀಡಲಾಗುತ್ತಿದ್ದು, ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಅಲ್ಲಿ ಓದುತ್ತಿರುವ ಹುಡುಗಿಯರ ಸುರಕ್ಷತೆ ನಮ್ಮ ಪ್ರಮುಖ ಕಾಳಜಿಯಾಗಿದೆ, ನಾವು ಇನ್ನೂ ಪ್ರದೇಶದ ಸುತ್ತಲೂ ಬೇಲಿ ಅಥವಾ ಗಡಿಯನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಮಾದಕ ವ್ಯಸನಿಗಳು ಸೇರಿದಂತೆ ಜನರು ರಾತ್ರಿಯಲ್ಲಿ ಕಾಂಪೌಂಡ್‌ಗೆ ನುಗ್ಗುತ್ತಾರೆ ಮತ್ತು ಕೆಲವರು ತ್ಯಾಜ್ಯವನ್ನು ಒಳಚರಂಡಿಗೆ ಸುರಿಯುತ್ತಾರೆ. ನಮ್ಮನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ನಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ನಾವು ಖಚಿತಪಡಿಸಿಕೊಳ್ಳಬೇಕು. ಕೇರಳ ಸಿಎಂ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ.