
ಟಿಕೆಟ್ ಆಕಾಂಕ್ಷಿಗಳಿಗೆ ಗ್ರಾಮ ವಾಸ್ತವ್ಯ ಟಾಸ್ಕ್
ಜೆಡಿಎಸ್‌ನಿಂದ ಮೂರು ತಿಂಗಳ ಪರೀಕ್ಷೆ; ಹಾಲಿ ಶಾಸಕರಿಗೆ ಕೂಡ ಇದು ಅನ್ವಯ
Team Udayavani, Jan 30, 2023, 7:20 AM IST

ಬೆಂಗಳೂರು: ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ-ಕಾಂಗ್ರೆಸ್‌ಗೆ ಟಕ್ಕರ್ ನೀಡಲು “ಪಂಚರತ್ನ ಯಾತ್ರೆ’ ನಡೆಸುತ್ತಿರುವ ಜೆಡಿಎಸ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರೀತಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವಂತೆ ತನ್ನ ಹಾಲಿ ಶಾಸಕರು, ಅಭ್ಯರ್ಥಿಗಳು ಮತ್ತು ಆಕಾಂಕ್ಷಿಗಳಿಗೆ ಮೂರು ತಿಂಗಳ “ಚುನಾವಣಾ ಟಾಸ್ಕ್’ ನೀಡಿದೆ.
ಹಾಲಿ ಜೆಡಿಎಸ್ ಶಾಸಕರು ಸೇರಿದಂತೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿರುವ 93 ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಇನ್ನೂ ಟಿಕೆಟ್ ಘೋಷಣೆಯಾಗಬೇಕಿರುವ ಕ್ಷೇತ್ರಗಳ ಆಕಾಂಕ್ಷಿಗಳಿಗೆ ತಮ್ಮ ಕ್ಷೇತ್ರದಲ್ಲಿ ಗ್ರಾಮ ಪಾದಯಾತ್ರೆ, ಗ್ರಾಮ ಸಭೆ ಮತ್ತು ಗ್ರಾಮ ವಾಸ್ತವ್ಯ ಮಾಡುವಂತೆ ಸೂಚನೆ ನೀಡಲಾಗಿದ್ದು, ಈ ವಿಚಾರವಾಗಿ ಎಲ್ಲಾ ಶಾಸಕರು, ಅಭ್ಯರ್ಥಿ ಮತ್ತು ಆಕಾಂಕ್ಷಿಗಳಿಗೆ ಖುದ್ದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹೀಂ ಜಂಟಿ ಪತ್ರ ಬರೆದಿದ್ದಾರೆ.
“ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಏನೇ ಅಬ್ಬರ, ಎಷ್ಟೇ ಅರ್ಭಟ ಮಾಡಿದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಯತ್ತಿನಿಂದ ನಿಮ್ಮ ಕೆಲಸ ನೀಡುವ ಮಾಡಿಕೊಂಡು ಹೋಗಿ. ಕ್ಷೇತ್ರದಲ್ಲಿ ಪಕ್ಷಕ್ಕಿರುವ ಪ್ರಾಬಲ್ಯ ಮತ್ತು ನಿಮ್ಮ ಹಿಡಿತವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ. ಪಂಚರತ್ನ ಯಾತ್ರೆ ಆಧಾರವಾಗಿಟ್ಟುಕೊಂಡು ಕ್ಷೇತ್ರದಲ್ಲಿ ಸಂಚಾರ ನಡೆಸಿ ಜೆಡಿಎಸ್ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಅಧಿಕಾರಕ್ಕೆ ಬಂದರೆ ಮಾಡುವ ಕೆಲಸಗಳ ಬಗ್ಗೆ ನೀಡಿರುವ ಭರವಸೆಗಳನ್ನು ಜನರ ಮುಂದಿಡಿ’ ಎಂದು ಸೂಚಿಸಲಾಗಿದೆ.
ಪ್ರತ್ಯೇಕ ವಾರ್ ರೂಂ
ಮೂರು ತಿಂಗಳ ಚುನಾವಣಾ ಟಾಸ್ಕ್ ಬಗ್ಗೆ ಮೇಲ್ವಿಚಾರಣೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಲು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಟಾಸ್ಕ್ ರೂಂ ಸ್ಥಾಪಿಸಲಾಗಿದೆ. ಈ ಚುನಾವಣಾ ಟಾಸ್ಕ್ ನಿರ್ವಹಿಸಲು ಎರಡು ಖಾಸಗಿ ಏಜೆನ್ಸಿಗಳನ್ನು ನೇಮಿಸಲಾಗಿದ್ದು, ಇದರ ಮೇಲ್ವಿಚಾರಣೆಯನ್ನು ಖುದ್ದು ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಎಂ. ಇಬ್ರಾಹಿಂ ಅವರೇ ವಹಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಈ ಮೊದಲೇ ಈ ಟಾಸ್ಕ್ ಪೂರ್ಣಗೊಳಿಸುವ ಗುರಿಯನ್ನು ಶಾಸಕರು, ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕನಿಷ್ಠ 2 ದಿನಗಳ ಗ್ರಾಮ ವಾಸ್ತವ್ಯ
ಕ್ಷೇತ್ರದ ಮತದಾರರಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಮೂಡಿರುವ ಅಭಿಪ್ರಾಯ, ಅಭಿಲಾಷೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ, ನೀವು ನಿಮ್ಮ ವಿಧಾನಸಭಾ ಕ್ಷೇತ್ರದ ಉದ್ದಗಲಕ್ಕೂ ಪಾದಯಾತ್ರೆ ಕೈಗೊಂಡು ಪ್ರತಿ ಗ್ರಾ.ಪಂ.ನಲ್ಲಿ ಕನಿಷ್ಠ 2 ದಿನಗಳ ಗ್ರಾಮ ವಾಸ್ತವ್ಯ ಹೂಡಿ, ಗ್ರಾಮ ಸಭೆಗಳನ್ನು ನಡೆಸಿ ಪಂಚರತ್ನ ಯೋಜನೆಯ ರೂಪ-ರೇಷೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ಹೋಬಳಿವಾರು, ಗ್ರಾಮ ಪಂಚಾಯಿತಿವಾರು ಹಳ್ಳಿಗಳಲ್ಲಿ ಮುಂದಿನ 2-3 ತಿಂಗಳ ಮಟ್ಟಿಗೆ ವಿವರವಾದ ಕಾರ್ಯಕ್ರಮವನ್ನು ತಯಾರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು ಸಹಕಾರ ನೀಡುವಂತೆ ಸೂಚನೆ ಕೊಡಲಾಗಿದೆ.
ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ
ಶಾಸಕರು, ಭಾವಿ ಅಭ್ಯರ್ಥಿಗಳು ಮತ್ತು ಆಕಾಂಕ್ಷಿಗಳು ಎಲ್ಲಾ ಜಿಲ್ಲಾಧ್ಯಕ್ಷರು, ತಾಲೂಕಾಧ್ಯಕ್ಷರು ಮತ್ತು ಇತರ ಮುಖಂಡರು, ಕಾರ್ಯಕರ್ತರು ಎಲ್ಲಾ ವರ್ಗದ ಪ್ರಮುಖರೊಂದಿಗೆ ಬೆರೆತು ಅವರ ವಿಶ್ವಾಸ, ಸಹಕಾರ, ಬೆಂಬಲ ಪಡೆದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು. ವಿಶೇಷವಾಗಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಬಗ್ಗೆ ಗಮನಹರಿಸಬೇಕು. ಈ ವರ್ಗಗಳು ಜೆಡಿಎಸ್ ಬಗ್ಗೆ ಹೊಂದಿರುವ ಅಭಿಪ್ರಾಯಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಅಪನಂಬಿಕೆಗಳು ಇದ್ದರೆ ಅವುಗಳನ್ನು ನಿವಾರಿಸುವ ಕೆಲಸ ಆಗಬೇಕು ಎಂದು ತಾಕೀತು ಮಾಡಲಾಗಿದೆ.
ಶಾಸಕರು, ಅಭ್ಯರ್ಥಿಗಳು ಮತ್ತು ಆಕಾಂಕ್ಷಿಗಳಿಗೆ ಮೂರು ತಿಂಗಳ ಚುನಾವಣಾ ಟಾಸ್ಕ್ ನೀಡಲಾಗಿದೆ. ಈಗಾಗಲೇ ಪ್ರಾಥಮಿಕ ಹಂತದ ಕೆಲಸ ಆರಂಭವಾಗಿದೆ. ಕುಮಾರಸ್ವಾಮಿಯವರು ಪಂಚರತ್ನ ಯಾತ್ರೆ ಮುಗಿಸಿಕೊಂಡ ಬಂದ ಮೇಲೆ ಅದಕ್ಕೆ ಇನ್ನಷ್ಟು ವೇಗ ನೀಡಲಾಗುತ್ತದೆ.
– ಕೆ.ಎ. ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯ.
-ರಫೀಕ್ ಅಹ್ಮದ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಜಯಪುರ: ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ 6 ಲಕ್ಷ ರೂ.,480 ಗ್ರಾಂ ಚಿನ್ನ ವಶ

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ 2ನೇ ಬಾರಿ ಅಧಿಕಾರಿಗಳ ದಾಳಿ: ಲಕ್ಷಾಂತರ ಮೌಲ್ಯದ ಸೊತ್ತು ವಶ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ