ನಾಗಪುರವನ್ನು ಹಾವಿನಪುರ ಎಂದ ಹರಿಪ್ರಸಾದ್ : ಪರಿಷತ್ತಿನಲ್ಲಿ ಗದ್ದಲ
Team Udayavani, Feb 16, 2022, 12:43 PM IST
ಬೆಂಗಳೂರು : ತಾಯಿ ಎದೆ ಹಾಲು ಕುಡಿದಿದ್ದರೆ ಐವತ್ತು ವರ್ಷಗಳ ಕಾಲ ಹಾವಿನಪುರದಲ್ಲಿ ಬಿಜೆಪಿಯವರು ಏಕೆ ತ್ರಿವರ್ಣ ಧ್ವಜ ಹಾರಿಸಲಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿರುವುದು ಪರಿಷತ್ ನಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ.
ನಾಗಪುರವನ್ನು ಹಾವಿನಪುರ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದು ಬಿಜೆಪಿ ಶಾಸಕರನ್ನು ಕೆರಳಿಸಿತು. ಉಭಯ ಪಕ್ಷದ ಸದಸ್ಯರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದರು.
ಇದರಿಂದ ಸಿಟ್ಟಿಗೆದ್ದ ಸಭಾಪತಿ ಹೊರಟ್ಟಿ ಸಭಾಪತಿ ಪೀಠಕ್ಕೆ ಕಿಮ್ಮತ್ತಿಲ್ಲವೇ ? ಇದೇನು ಮುನ್ಸಿಪಾಲಿಟಿನಾ ಎಂದು ಪ್ರಶ್ನಿಸಿದರು.
ಆದರೆ ಹರಿಪ್ರಸಾದ್ ಪದೇ ಪದೇ ಬಿಜೆಪಿಯವರನ್ನು ಕೆರಳಿಸುತ್ತಿರುವುದನ್ನು ಮುಂದುವರಿಸಿದರು.ತಾಯಿ ಎದೆ ಹಾಲು ಕುಡಿದಿದ್ದರೆ ಯಾಕೆ ೫೦ ವರ್ಷ ಹಾವಿನಪುರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿಲ್ಲ ಎಂದರು.
ಇದಕ್ಕೆ ಮತ್ತೆ ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಹರಿಪ್ರಸಾದ್ ವಿರುದ್ಧ ಆರೋಪ ನಡೆಸಿದರು.ನಾಗಪುರವನ್ನ ಅವಹೇಳನಕಾರಿಯಾಗಿ ಹಾವಿನಪುರ ಅಂತಾ ಹೇಳಿದ್ದಾರೆ.ಇದು ಸರಿಯಲ್ಲ ಎಂದ ಕೋಟಾ ಶ್ರೀನಿವಾಸ್ ಪೂಜಾರಿ ಎಂದಾಗ ಉತ್ತರಿಸಿದ ಪ್ರಕಾಶ್ ರಾಥೋಡ್, ನಮ್ಮ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು ಕನ್ನಡ ಅಭಿಮಾನಿ.ಅವರು ನಾಗಪುರವನ್ನ ಕನ್ನಡದಲ್ಲಿ ಹಾವಿನಪುರ ಎಂದಿದ್ದಾರೆ. ತಪ್ಪೇನಿದೆ ಎಂದು ಪ್ರಶ್ನಿಸಿದರು.