
ಐಪಿಎಲ್ ಉದ್ಘಾಟನೆ: ರಶ್ಮಿಕಾ, ತಮನ್ನಾ ರಂಜನೆ
Team Udayavani, Mar 29, 2023, 6:57 AM IST

ಅಹ್ಮದಾಬಾದ್: ಹದಿನಾರನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿ ಫುಲ್ ಜೋಶ್‌ನೊಂದಿಗೆ ಆರಂಭವಾಗಲಿದೆ. ಶುಕ್ರವಾರ ರಾತ್ರಿ. 7.30ಕ್ಕೆ ವಿಶ್ವದ ದೈತ್ಯ ಕ್ರೀಡಾಂಗಣವಾದ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ”ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದೊಂದಿಗೆ ಐಪಿಎಲ್ ಕಾವು ಏರುತ್ತ ಹೋಗಲಿದೆ.
ಇದಕ್ಕೂ ಮುನ್ನ ಒಂದು ಗಂಟೆಯ ಕಾಲ ರಂಗುರಂಗಿನ ಉದ್ಘಾಟನ ಸಮಾರಂಭ ನಡೆಯಲಿದೆ. ಇದರಲ್ಲಿ ಯಾವೆಲ್ಲ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಆದರೆ ಮೂಲವೊಂದರ ಪ್ರಕಾರ ಕನ್ನಡದ ತಾರೆ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಂದಿನಂತೆ ಬಾಲಿವುಡ್ ಆಕರ್ಷಣೆ ಇದ್ದೇ ಇರಲಿದೆ. ತಮನ್ನಾ ಭಾಟಿಯಾ, ಕತ್ರಿನಾ ಕೈಫ್, ಟೈಗರ್ ಶ್ರಾಫ್, ಗಾಯಕ ಹಾಗೂ ಸಂಗೀತ ನಿರ್ದೇಶಕ ಅರ್ಜಿತ್ ಸಿಂಗ್ ಕೂಡ ವೇದಿಕೆಯನ್ನು ಅಲಂಕರಿಸಲಿದ್ದಾರೆ.
ಉದ್ಘಾಟನ ಸಮಾರಂಭದ ಟಿಕೆಟ್‌ಗಳು ಪೇಟಿಎಂ ಇನ್‌ಸೈಡರ್ ಮತ್ತು ಬುಕ್ ಮೈ ಶೋ ಆ್ಯಪ್‌ಗ್ಳಲ್ಲಿ ಲಭ್ಯವಿವೆ. ಸ್ಟಾರ್ ನ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರ ಪ್ರಸಾರವಿದೆ. ಜಿಯೋ ಸಿನೆಮಾ ಆ್ಯಪ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಇಲ್ಲಿ 7, ಅಲ್ಲಿ 7 ಪಂದ್ಯ
ಕೊರೊನಾ ಬಳಿಕ ಸೊರಗಿದ್ದ ಐಪಿಎಲ್ ಪಂದ್ಯಾವಳಿಗೆ 2022ರಲ್ಲಿ ಮೆಗಾ ಹರಾಜಿನೊಂದಿಗೆ ಮರುಹುಟ್ಟು ಲಭಿಸಿತ್ತು. ಈ ಬಾರಿ ಮತ್ತೆ ತವರಿನ ಹಾಗೂ ತವರಿನಾಚೆಯ ಮಾದರಿಯನ್ನು (ಹೋಮ್ ಆ್ಯಂಡ್ ಅವೇ) ಅಳವಡಿಸುತ್ತಿರುವುದರಿಂದ ಎಲ್ಲ ಕಡೆಯ ಅಭಿಮಾನಿಗಳಿಗೆ ಸಮಾನ ರಂಜನೆ ಲಭಿಸಲಿದೆ.
10 ತಂಡಗಳನ್ನು 2 ಗ್ರೂಪ್‌ಗ್ಳಾಗಿ ವಿಂಗಡಿಸಲಾಗಿದೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡ 14 ಪಂದ್ಯಗಳನ್ನು ಆಡಲಿದೆ. ಇದರಲ್ಲಿ 7 ಪಂದ್ಯಗಳು ತವರಲ್ಲಿ, ಉಳಿದ 7 ಪಂದ್ಯಗಳು ತವರಿನಾಚೆಯ ಅಂಗಳದಲ್ಲಿ ನಡೆಯಲಿದೆ.
12 ತಾಣ, 52 ಪಂದ್ಯ
ಪಂದ್ಯಾವಳಿ ಒಟ್ಟು 52 ದಿನಗಳ ಕಾಲ 12 ತಾಣಗಳಲ್ಲಿ ಸಾಗಲಿದೆ. ಈ ತಾಣಗಳೆಂದರೆ ಮುಂಬಯಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಗುವಾಹಟಿ, ಜೈಪುರ, ಕೋಲ್ಕತಾ, ಹೊಸದಿಲ್ಲಿ, ಮೊಹಾಲಿ, ಲಕ್ನೊ, ಧರ್ಮಶಾಲಾ ಮತ್ತು ಅಹ್ಮದಾಬಾದ್.
ಇವುಗಳಲ್ಲಿ ಮುಂಬೈ, ಚೆನ್ನೈ, ಬೆಂಗಳೂರು, ಅಹ್ಮದಾಬಾದ್, ಲಕ್ನೊ, ಹೈದರಾಬಾದ್, ಕೋಲ್ಕತಾದಲ್ಲಿ ತವರಿನ ಏಳೂ ಪಂದ್ಯಗಳು ನಡೆಯಲಿವೆ. ಮೊಹಾಲಿ ಮತ್ತು ಜೈಪುರ ಕೇವಲ 5 ಪಂದ್ಯಗಳ ಆತಿಥ್ಯ ವಹಿಸಲಿವೆ. ಗುವಾಹಟಿ ಮತ್ತು ಧರ್ಮಶಾಲಾದಲ್ಲಿ ತಲಾ 2 ಪಂದ್ಯಗಳನ್ನು ಆಡಲಾಗುವುದು.
ಟಾಸ್ ಬಳಿಕ ಲಿಸ್ಟ್
ಸಾಮಾನ್ಯವಾಗಿ ಟಾಸ್ ಹಾರಿಸುವ ಮೊದಲೇ ಇತ್ತಂಡಗಳ ಆಟಗಾರರು ತಮ್ಮ ಆಡುವ ಬಳಗದ ಯಾದಿನ್ನು ರೆಫ್ರಿಗೆ ನೀಡುವುದು ಕ್ರಿಕೆಟ್ ಸಂಪ್ರದಾಯ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಟಾಸ್ ಬಳಿಕ ಆಟಗಾರರ ಪಟ್ಟಿಯನ್ನು ರೆಫ್ರಿಗೆ ಸಲ್ಲಿಸುವ ನಿಯಮವನ್ನು ಅಳವಡಿಸಲಾಗಿದೆ. ಇದರಿಂದ ಬ್ಯಾಟಿಂಗ್, ಬೌಲಿಂಗ್ ಆಯ್ಕೆಯನ್ನು ಪರಿಗಣಿಸಿ ಹನ್ನೊಂದರ ಬಳಗವನ್ನು ಅಂತಿಮಗೊಳಿಸಬಹುದಾಗಿದೆ. ಜತೆಗೆ ಐವರು ಬದಲಿ ಫೀಲ್ಡರ್‌ಗಳ ಹೆಸರೂ ಇರಲಿದೆ.
ಡಿಆರ್‌ಎಸ್ ಮೂಲಕ ಅಂಪಾಯರ್‌ಗಳ ವೈಡ್ ಹಾಗೂ ನೋಬಾಲ್ ಕರೆಗಳನ್ನೂ ಚಾಲೆಂಜ್ ಮಾಡಬಹುದಾಗಿದೆ. ಕಳೆದ ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ಇದನ್ನು ಅಳವಡಿಸಲಾಗಿತ್ತು. ಇದರಿಂದ ಪಂದ್ಯದ ಅವಧಿ ಇನ್ನಷ್ಟು ವಿಳಂಬಗೊಳ್ಳಲಿದೆ. ಪರಿಣಾಮ, ಜಾಹೀರಾತು ಆದಾಯದಲ್ಲಿ ಹೆಚ್ಚಳ!
ಟಾಪ್ ನ್ಯೂಸ್
