
ಮ್ಯಾಡ್ರಿಡ್ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಕ್ವಾರ್ಟರ್‌ಗೆ
Team Udayavani, Mar 31, 2023, 7:04 AM IST

ಮ್ಯಾಡ್ರಿಡ್: ಭಾರತೀಯ ಶಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ ಬ್ಯಾಡ್ಮಿಂಟನ್ ಕೂಟದ ಸಿಂಗಲ್ಸ್‌ನಲ್ಲಿ ನೇರ ಗೇಮ್‌ಗಳ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಇಂಡೋನೇಷ್ಯಾದ ಪುತ್ರಿ ಕುಸುಮಾ ವರ್ದನಿ ಅವರನ್ನು 21-16, 21-14 ಗೇಮ್‌ಗಳಿಂದ ಉರುಳಿಸಿದರು. ಅರ್ಧತಾಸಿನ ಒಳಗೆ ಮುಗಿದ ಈ ಹೋರಾಟದಲ್ಲಿ ಜಯ ಸಾಧಿಸಿದ ಸಿಂದು 2023ರಲ್ಲಿ ಮೊದಲ ಬಾರಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದರು.
ಇದೇ ವೇಳೆ ವಿಶ್ವದ 21ನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್ ತನ್ನ ದೇಶದವರೇ ಆದ ಬಿ.ಸಾಯಿ ಪ್ರಣೀತ್ ಅವರನ್ನು 21-15, 21-12 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್ ಫೈನಲ್ ಹಂತಕ್ಕೇರಿದರು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಅವರಿಗೆ ಕಠಿಣ ಎದುರಾಳಿ ಸಿಕ್ಕಿದ್ದಾರೆ. ಅಗ್ರ ಶ್ರೇಯಾಂಕದ ಜಪಾನಿನ ಕೆಂಟ ನಿಶಿಮೊಟೊ ಅವರ ಸವಾಲಿಗೆ ಶ್ರೀಕಾಂತ್ ಉತ್ತರಿಸಬೇಕಾಗಿದೆ. ನಿಶಿಮೊಟೊ ಅವರಿಗೆ ದ್ವಿತೀಯ ಸುತ್ತಿನಲ್ಲಿ ವಾಕ್‌ಓವರ್ ಸಿಕ್ಕಿದೆ.
ಇನ್ನುಳಿದ ಪಂದ್ಯಗಳಲ್ಲಿ ಕಿರಣ್ ಜಾರ್ಜ್ ಮತ್ತು ಪ್ರಿಯಾಂಶು ರಾಜವತ್ ಅವರು ಸಿಂಗಲ್ಸ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಜಾರ್ಜ್ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನ್ಸೆನ್ ಅವರ ಕೈಯಲ್ಲಿ 17-21, 12-21 ಗೇಮ್‌ಗಳಿಂದ ಸೋತರೆ ಪ್ರಿಯಾಂಶು ಫ್ರಾನ್ಸ್‌ನ ಎಂಟನೇ ಶ್ರೇಯಾಂಕದ ತೋಮ ಜೂನಿಯರ್ ಪೊಪೋವ್ ಕೈಯಲ್ಲಿ 14-21, 15-21 ಗೇಮ್‌ಗಳಿಂದ ಶರಣಾದರು.
ಟಾಪ್ ನ್ಯೂಸ್
