
ಮಂಗಳೂರು ಕುಕ್ಕರ್ ಕೇಸ್; ರೂವಾರಿ ಶಾರಿಕ್ ಚಿಕಿತ್ಸೆ ಪೂರ್ಣ: NIA ವಶಕ್ಕೆ
Team Udayavani, Mar 6, 2023, 8:21 PM IST

ಬೆಂಗಳೂರು : ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಪ್ರಕರಣದ ರೂವಾರಿ ಶಂಕಿತ ಉಗ್ರ ಶಾರಿಕ್ನನ್ನು ಮಾರ್ಚ್ 15ರವರೆಗೆ ಎನ್ ಐಎ ಅಧಿಕಾರಿಗಳು ಸೋಮವಾರ ಕಸ್ಟಡಿಗೆ ಪಡೆದಿದ್ದಾರೆ. ಘಟನೆ ನಡೆದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶಾರಿಕ್ ನ ಚಿಕಿತ್ಸೆ ಪೂರ್ಣಗೊಂಡಿದ್ದು, ಸಂಪೂರ್ಣ ಗುಣಮುಖನಾದ ಬಳಿಕ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೂರ್ಣವಾಗಿದ್ದು, ಎನ್‌ಐಎ ಅಧಿಕಾರಿಗಳು ಆತನನ್ನು ಸಿಟಿ ಸಿವಿಲ್ ನ್ಯಾಯಾಲಯದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 10 ದಿನಗಳ ಕಾಲ ವಶಕ್ಕೆ ನೀಡಿದೆ.
ಘಟನೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಪೂರ್ಣ ಪ್ರಮಾಣದ ವಿಚಾರಣೆ ನಡೆಸಲು ಕಷ್ಟವಾಗಿತ್ತು ಎನ್‌ಐಎ ತಂಡವು ಪೂರ್ಣ ಪ್ರಮಾಣದ ವಿಚಾರಣೆಗೆ ಸಿದ್ಧತೆ ನಡೆಸಿದೆ. ಮೊದಲು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಡಿ.17ರಂದು ಬೆಂಗಳೂರಿನಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎನ್‌ಐಎ ಮತ್ತು ಪೊಲೀಸರ ಬಿಗಿ ಕಣ್ಗಾವಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ನಡೆದ ದಾಳಿಯ ಹೊಣೆ ಐಎಸ್‌ಐಎಸ್ ಉಗ್ರ ಸಂಘಟನೆ ಹೊತ್ತಿದೆ. ಘಟನೆ ವೇಳೆ ಗಾಯಗೊಂಡಿದ್ದ ರಿಕ್ಷಾ ಚಾಲಕ ಈಗಾಗಲೇ ಸಂಪೂರ್ಣ ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
