ಸೋಂಕಿತರ ಮಾದರಿ ಪುಣೆಗೆ: ಗೋವಾದಲ್ಲಿಯೂ ಒಮಿಕ್ರಾನ್ ಆತಂಕ
Team Udayavani, Dec 3, 2021, 3:40 PM IST
ಪಣಜಿ: ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಒಮಿಕ್ರಾನ್ ಹೊಸ ರೂಪಾಂತರಿ ಸೋಂಕು ಬೆಂಗಳೂರಿನ ಇಬ್ಬರಿಗೆ ದೃಢಪಟ್ಟಿರುವುದು ಗೋವಾದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ.
ಗೋವಾ ರಾಜ್ಯ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಕರೋನಾ ಹೆಚ್ಚಿರುವ ಸ್ಥಳಗಳಲ್ಲಿ ಕೆಲ ಸೋಂಕಿತರ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಿದ್ದು ವರದಿ ಬರಬೇಕಾಗಿದೆ.
ಗೋವಾಕ್ಕೆ ಆಗಮಿಸುವ ವಿಮಾನ ಪ್ರಯಾಣಿಕರು ಮತ್ತು ರೈಲ್ವೆ ಪ್ರಯಾಣಿಕರ ಮೇಲೆ ಸರ್ಕಾರ ಹೆಚ್ಚಿನ ನಿಗಾ ಇಟ್ಟಿದೆ. ವಿದೇಶಗಳಿಂದ ಗೋವಾಕ್ಕೆ ಬಂದಿಳಿಯುವ ಪ್ರಯಾಣಿಕರಿಗೆ RTPCR ವರದಿ ಖಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಗೋವಾದ ಗಡಿಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು ನೆರೆಯ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಡಬಲ್ ಡೋಸ್ ಅಥವಾ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಖಡ್ಡಾಯಗೊಳಿಸಲಾಗಿದೆ. ರಾಜ್ಯಕ್ಕೆ ಕರೋನಾ ರೂಪಾಂತರಿ ಅಪ್ಪಳಿಸದಂತೆ ಸರ್ಕಾರ ಕಟ್ಟೆಚ್ಚರ ವಹಿಸಿದೆ.