ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು
ವಿಪಕ್ಷಗಳು ತೀವ್ರ ಕೋಲಾಹಲ ನಡೆಸಿದ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಲಾಯಿತು.
Team Udayavani, Feb 2, 2023, 12:22 PM IST
ನವದೆಹಲಿ: ಅದಾನಿ ಗ್ರೂಪ್ ಕುರಿತು ಅಮೆರಿಕದ ಹಿಂಡನ್ ಬರ್ಗ್ ಸಂಸ್ಥೆ ಬಿಡುಗಡೆಗೊಳಿಸಿದ ವಂಚನೆ ಆರೋಪದ ಸಂಶೋಧನಾ ವರದಿಗೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ಅಥವಾ ಸುಪ್ರೀಂಕೋರ್ಟ್ ನೇತೃತ್ವದ ಸಮಿತಿಯ ಮೂಲಕ ತನಿಖೆ ನಡೆಸಬೇಕೆಂದು ವಿಪಕ್ಷಗಳು ಲೋಕಸಭೆ ಕಲಾಪದಲ್ಲಿ ಗದ್ದಲ ನಡೆಸಿದ ಘಟನೆ ಗುರುವಾರ (ಫೆ.02) ನಡೆದಿದೆ.
ಇದನ್ನೂ ಓದಿ:ಮಂಗಳೂರು: ಪಾಲಿಕೆ ಆಯುಕ್ತ ವರ್ಗಾವಣೆ; ನೂತನ ಆಯುಕ್ತರಾಗಿ ಚನ್ನಬಸಪ್ಪ ಕೆ. ನೇಮಕ
ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡನ್ ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಗ್ರೂಪ್ ವಂಚನೆ ಮಾಡಿರುವುದಾಗಿ ಆರೋಪಿಸಿದ ಹಿನ್ನೆಲೆಯಲ್ಲಿ ಭಾರತೀಯ ಷೇರು ಹೂಡಿಕೆದಾರಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಈ ಬಗ್ಗೆ ಚರ್ಚಿಸಲು ಸಂಸತ್ ನ ರೆಗ್ಯುಲರ್ ಕಲಾಪವನ್ನು ಅಮಾನತುಗೊಳಿಸಬೇಕು ಎಂದು ವಿರೋಧ ಪಕ್ಷಗಳು ಬೇಡಿಕೆ ಇಟ್ಟಿರುವುದಾಗಿ ವರದಿ ತಿಳಿಸಿದೆ.
ಹಿಂಡನ್ ಬರ್ಗ್ ವರದಿ ಕುರಿತು ಚರ್ಚಿಸಲು ಅವಕಾಶ ನೀಡಬೇಕು ಎಂದು ವಿಪಕ್ಷಗಳು ತೀವ್ರ ಕೋಲಾಹಲ ನಡೆಸಿದ ಹಿನ್ನೆಲೆಯಲ್ಲಿ ಸಂಸತ್ ಕಲಾಪವನ್ನು ಮುಂದೂಡಲಾಯಿತು.
ಗೌತಮ್ ಅದಾನಿ ವಹಿವಾಟಿನಲ್ಲಿ ಲೈಫ್ ಇನ್ಸೂರೆನ್ಸ್ ಕಾರ್ಪೋರೇಶನ್ (ಎಲ್ ಐಸಿ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಪ್ರಮುಖ ಹೂಡಿಕೆದಾರರಿದ್ದು, ಹಿಂಡನ್ ಬರ್ಗ್ ವರದಿ ಬಹಿರಂಗದ ನಂತರ 100 ಬಿಲಿಯನ್ ಡಾಲರ್ ಗಿಂತಲೂ ಅಧಿಕ ನಷ್ಟ ಕಂಡಿರುವುದಾಗಿ ವರದಿ ವಿವರಿಸಿದೆ.