ಪ್ರೊ ಕಬಡ್ಡಿ: ಭರತ್ ಬೊಂಬಾಟ್ ಆಟ; ಬೆಂಗಳೂರು ಬುಲ್ಸ್ ಗೆಲುವು
Team Udayavani, Dec 7, 2022, 10:58 PM IST
ಹೈದರಾಬಾದ್: ರೈಡರ್ ಭರತ್ ಅವರ ಮತ್ತೊಂದು ಬೊಂಬಾಟ್ ಆಟದ ನೆರವು ಪಡೆದ ಬೆಂಗಳೂರು ಬುಲ್ಸ್ 13ನೇ ಜಯ ದೊಂದಿಗೆ ತನ್ನ ತೃತೀಯ ಸ್ಥಾನವನ್ನು ಗಟ್ಟಿಗೊಳಿಸಿದೆ. ಬುಧವಾರದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಬುಲ್ಸ್ 57-44 ಅಂತರದಿಂದ ಪಾಟ್ನಾ ಪೈರೇಟ್ಸ್ಗೆ ಸೋಲುಣಿಸಿತು.
ಭರತ್ ಪಂದ್ಯದಲ್ಲೇ ಸರ್ವಾಧಿಕ 20 ಅಂಕ ಗಳಿಸಿದರು. ಮತ್ತೋರ್ವ ರೈಡರ್ ನೀರಜ್ ನರ್ವಾಲ್ 10 ಅಂಕ ತಂದುಕೊಟ್ಟರು. ಪಾಟ್ನಾದ ಆಲ್ರೌಂಡರ್ ರೋಹಿತ್ ಗುಲಿಯ ಅವರ ಆಟ ಗಮನಾರ್ಹ ಮಟ್ಟದಲ್ಲಿತ್ತು. ಅವರ ಗಳಿಕೆ 10 ಅಂಕ.
ಇದು ಬೆಂಗಳೂರು ಬುಲ್ಸ್ ತಂಡದ 21ನೇ ಪಂದ್ಯ. ಅದು ತನ್ನ ಅಂಕವನ್ನು 73ಕ್ಕೆ ಏರಿಸಿಕೊಂಡಿದೆ. ಪಾಟ್ನಾ ಇಷ್ಟೇ ಪಂದ್ಯಗಳಿಂದ 11ನೇ ಸೋಲನುಭವಿಸಿತು. ತಲಾ 79 ಅಂಕ ಹೊಂದಿರುವ ಜೈಪುರ್ ಮತ್ತು ಪುನೇರಿ ಮೊದಲೆರಡು ಸ್ಥಾನದಲ್ಲಿವೆ.