
ತೆಂಕು ತಿಟ್ಟಿನ ಪ್ರಸಿದ್ಧ, ಹಿರಿಯ ಯಕ್ಷಗಾನ ಕಲಾವಿದ ಮುಳಿಯಾಲ ಭೀಮ ಭಟ್ ವಿಧಿವಶ
Team Udayavani, Jan 25, 2022, 10:56 AM IST

ಉಡುಪಿ : ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ, ಹಿರಿಯ ಕಲಾವಿದ ಮುಳಿಯಾಲ ಭೀಮ ಭಟ್ ಅವರು ಮಂಗಳವಾರ ಮುಂಜಾನೆ ಕಾಂತಾವರ ದಲ್ಲಿ ನಿಧನ ಹೊಂದಿದ್ದಾರೆ. 85 ವರ್ಷ ಪ್ರಾಯದವರಾಗಿದ್ದ ಅವರು ವಯೋಸಜಹ ಆರೋಗ್ಯ ಸಮಸ್ಯೆಯಿಂದ ಕಳೆದ ಕೆಲ ದಿನಗಳಿಂದ ಬಳಲುತ್ತಿದ್ದರು.
ಕಾಂತಾವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರ ಅಂತ್ಯ ಕ್ರಿಯೆ ಬೆಳುವಾಯಿ ಸ್ಮಶಾನದಲ್ಲಿ ನಡೆಸಲಾಗುತ್ತಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಕಾಂತಾವರ ದೇವಸ್ಥಾನದಲ್ಲಿ ಸೇವೆ ಮಾಡಿದ ಭೀಮ ಭಟ್ಟರ ಆರೋಗ್ಯ ಕಳೆದ ನಾಲ್ಕು ತಿಂಗಳಿಂದ ಹದಗೆಟ್ಟಿತ್ತು.
ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಜೀವಂಧರ ಬಲ್ಳಾಳರ ಉಪಸ್ಥಿತಿಯಲ್ಲಿ ಅಂತ್ಯ ಕ್ರಿಯೆ ನಡೆಸಲಾಗುತ್ತಿದೆ.
ಭೀಮ ಭಟ್ಟರ ತಂದೆ ಕೇಚಣ್ಣ (ಕೇಶವ) ಭಟ್ಟರೂ ಯಕ್ಷಗಾನ ವೇಷಧಾರಿಯಾಗಿದ್ದರು. ಕುರಿಯ ಶಾಸ್ತ್ರಿಗಳ ನೆಚ್ಚಿನ ಶಿಷ್ಯರಲ್ಲೊಬ್ಬರಾದ ಇವರು
1951ರಲ್ಲಿ ಕುರಿಯ ಶಾಸ್ತ್ರಿಗಳ ಸಂಚಾಲಕತ್ವದ ಶ್ರೀ ಧರ್ಮಸ್ಥಳ ಮೇಳದಿಂದ ಕಲಾ ಜೇವನ ಆರಂಭಿಸಿದ್ದರು.
ಕೋಡಂಗಿ, ಬಾಲಗೋಪಾಲ, ಮುಖ್ಯಸ್ತ್ರೀವೇಷ, ಪೀಠಿಕೆ ವೇಷ.. ಹೀಗೆ ಹಂತಹಂತವಾಗಿ ಮೇಲೇರಿದ ಅವರು ಪ್ರಸಿದ್ಧ ಕಲಾವಿದರಾಗಿದ್ದರು.
ಏಳು ವರುಷ ಧರ್ಮಸ್ಥಳ ಮೇಳದ ತಿರುಗಾಟ ಮಾಡಿ 1958ರಿಂದ ಕಟೀಲು ಮೇಳಕ್ಕೆ ಸೇರಿದರು . ಶ್ರೀ ದೇವಿ ಮಹಾತ್ಮೆ ಪ್ರಸಂಗದ ‘ಶ್ರೀದೇವಿ’ಯ ಪಾತ್ರವನ್ನು ‘ಒಲಿಸಿಕೊಂಡ’ ಮುಳಿಯಾಲದವರು ಕಲಾಭಿಮಾನಿಗಳಿಗೆ ‘ದೇವಿ ಭಟ್ರು’ ಎಂದೇ ಪರಿಚಿತರಾಗಿದ್ದರು.
ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿಯಂತಹ ಗಂಡುಗತ್ತಿನ ಪಾತ್ರಗಳ ಮೂಲಕ ಜನರ ಮೆಚ್ಚುಗೆಗೆ ಭಾಜನರಾಗಿದ್ದರು.
ಸ್ತ್ರೀ ಪಾತ್ರವಲ್ಲದೆ ಪುರುಷ ಪಾತ್ರಗಳಾದ ‘ಅತಿಕಾಯ, ತಾಮ್ರಧ್ವಜ, ಕರ್ಣ, ದ್ರುಪದ, ಕೃಷ್ಣ, ಹನುಮಂತ’ ಹೀಗೆ ರಂಗದ ಬಹುತೇಕ ಪಾತ್ರಗಳಿಗೆ ತನ್ನದೇ ಆದ ಮೆರುಗು ನೀಡಿದ್ದರು. ಸೀತೆ, ದಮಯಂತಿ, ಚಂದ್ರಮತಿ, ದ್ರೌಪದಿ..ಯಂತಹ ಗರತಿ ಪಾತ್ರಗಳಲ್ಲಿಯೂ ಕಲಾ ಪ್ರೌಢಿಮೆ ಮೆರೆದಿದ್ದರು.
ಭಟ್ ಅವರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
