ಸುಳ್ಯ: ಶೌಚಾಲಯದ ಗೋಡೆ ಕುಸಿದು ಮಹಿಳೆಯರಿಬ್ಬರ ದುರ್ಮರಣ
Team Udayavani, Dec 19, 2021, 11:15 AM IST
ಸುಳ್ಯ: ಶೌಚಾಲಯದ ಹಳೆಯ ಗೋಡೆಯನ್ನು ಕೆಡವುತ್ತಿದ್ದ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಮೈಮೇಲೆ ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಭಾನುವಾರ ಎಣ್ಮೂರು ಗ್ರಾಮದ ನರ್ಲಡ್ಕದಲ್ಲಿ ನಡೆದಿದೆ.
ನರ್ಲಡ್ಕ ನಿವಾಸಿ ಹರೀಶ ನಾಯ್ಕ ಎಂಬವರ ಮನೆಯ ಹಳೆಯ ಶೌಚಾಲಯದ ಗೋಡೆ ಕೆಡಹುವ ವೇಳೆ ಈ ದುರ್ಘಟನೆ ನಡೆದಿದ್ದು, ಗೋಡೆಯನ್ನು ತೆಗೆದು ಹೊಸ ಕಟ್ಟಡ ಕಟ್ಟುವುದಕ್ಕಾಗಿ ಕೆಲಸ ಮಾಡಲಾಗುತ್ತಿತ್ತು. ಇತರ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ ಮತ್ತು ನೆಬಿಸಾರವರು ಕಾಮಗಾರಿ ಕೆಲಸದಲ್ಲಿ ತೊಡಗಿದ್ದರು. ಆ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಇವರ ಮೇಲೆ ಕುಸಿದು ಬಿದ್ದಿದೆ. ತತ್‍ಕ್ಷಣ ಅಲ್ಲಿದ್ದವರು ಇವರನ್ನು ಮಣ್ಣಿನ ರಾಶಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಆದರೆ ಕಾಣಿಯೂರು ತಲುಪುವಾಗ ಬೀಪಾತುಮ್ಮ(6೦ ) ರವರು ಕೊನೆಯುಸಿರೆಳೆದುದರಿಂದ ಅವರ ಮೃತ ದೇಹವನ್ನು ಹಿಂತಿರುಗಿ ನರ್ಲಡ್ಕಕ್ಕೆ ತರಲಾಗಿದೆ.
ನೆಬಿಸ (45) ರವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರೂ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ದುರಂತ ಸ್ಥಳಕ್ಕೆ ಬೆಳ್ಳಾರೆ ಎಸ್ ಐ ಆಂಜನೇಯರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ ಮತ್ತಿತರರು ತೆರಳಿ ಪರಿಶೀಲನೆ ನಡೆಸಿದ್ದಾರೆ.