ಶಿಕ್ಷಕರ ವರ್ಗಾವಣೆ: ಅವಧಿ ವಿಸ್ತರಣೆ: ಶಿಕ್ಷಣ ಇಲಾಖೆ
Team Udayavani, Jan 31, 2023, 6:45 AM IST
ಬೆಂಗಳೂರು: 2022-23ನೇ ಸಾಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಶಿಕ್ಷಣ ಇಲಾಖೆ ವಿಸ್ತರಿಸಿದೆ.
ಅರ್ಜಿ ಸಲ್ಲಿಸುವ ಅವಧಿಯು ಸೋಮವಾರ ಕೊನೆಯ ದಿನವಾಗಿತ್ತು. ಆಡಳಿತಾತ್ಮಕ ಹಿತದೃಷ್ಟಿಯಿಂದ ಅವಧಿ
ಯನ್ನು ಮಾ.4ರ ವರೆಗೆ ವಿಸ್ತರಿಸಿದೆ.
ಹೆಚ್ಚುವರಿ ಪ್ರಕ್ರಿಯೆ ಹಾಗೂ ಕೋರಿಕೆ/ಪರಸ್ಪರ ವರ್ಗಾವಣೆ ಕುರಿತು ವಿಸ್ತೃತವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಉಳಿದಂತೆ ಡಿ.26ರಂದು ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಮಾಡಲು ಅಗತ್ಯ ಪೂರ್ವಭಾವಿ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರು ತಮ್ಮ ಮಾಹಿತಿಯನ್ನು ಶಿಕ್ಷಕ ಮಿತ್ರ ತಂತ್ರಾಂಶದಲ್ಲಿ ಫೆ.4ರ ವರೆಗೆ ಅಪ್‌ಲೋಡ್ ಮಾಡಬಹುದು.
ಶಿಕ್ಷಕರ ಆದ್ಯತೆ ಅಥವಾ ವಿನಾಯಿತಿಗೆ ನಿಗದಿಪಡಿಸಿರುವ ದಾಖಲೆಗಳನ್ನು ವರ್ಗಾವಣ ತಂತ್ರಾಂ‚ಶದಲ್ಲಿ ಅಪ್‌ಲೋಡ್ ಮಾಡಲು ಅಥವಾ ಸರಿಪಡಿಸಲು ಫೆ.8 ಕೊನೆಯ ದಿನವಾಗಿದೆ. ಶಿಕ್ಷಕರು ಸಲ್ಲಿಸಿರುವ ವೈದ್ಯಕೀಯ ಪ್ರಮಾಣಪತ್ರಗಳ ನೈಜತೆ ಮರು ಪರಿಶೀಲನೆ ಸೇರಿ ಶಿಕ್ಷಕರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ದೃಢೀಕರಿಸಿ ಅನುಮೋದಿಸಲು ಫೆ.10 ಕೊನೆಯ ದಿನವಾಗಿದೆ.