
ವಿಜಯ್ ಹಜಾರೆ ಸೆಮಿಫೈನಲ್ : ಇಂದು ಪಡಿಕ್ಕಲ್ V/S ಪೃಥ್ವಿ ಶಾ ಶೋ
Team Udayavani, Mar 11, 2021, 6:40 AM IST

ಹೊಸದಿಲ್ಲಿ: “ಬ್ಯಾಟಲ್ ಆಫ್ ಬಿಗ್ ಹಿಟ್ಟರ್’ ಎಂದೇ ಗುರುತಿಸಲ್ಪಡುವ ಕರ್ನಾಟಕ- ಮುಂಬಯಿ ನಡುವಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಸೆಮಿಫೈನಲ್ ಸ್ಪರ್ಧೆಗೆ ಹೊಸದಿಲ್ಲಿಯ “ಪಾಲಂ ಏರ್ ಫೋರ್ಸ್ ಗ್ರೌಂಡ್’ ಸಜ್ಜಾಗಿದೆ. ಪ್ರಸಕ್ತ ಮುಖಾಮುಖೀಯಲ್ಲಿ ಸಾಲು ಸಾಲು ಶತಕಗಳ ಜತೆಗೆ ರನ್ ಸುರಿಮಳೆಯನ್ನೇ ಹರಿಸುತ್ತಿರುವ ರಾಜ್ಯದ ಯುವ ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್ ಮತ್ತು ಟೀಮ್ ಇಂಡಿಯಾದಿಂದ ದೂರವಾಗಿರುವ ಮುಂಬಯಿಯ ಓಪನರ್ ಪೃಥ್ವಿ ಶಾ ಗುರುವಾರ ಇಲ್ಲಿ ಬ್ಯಾಟಿಂಗ್ ಸಮರಕ್ಕೆ ಇಳಿಯಲಿದ್ದಾರೆ.
ಇವರಿಬ್ಬರ ಜತೆಗೆ ಕರ್ನಾಟಕದ ನಾಯಕ ರವಿಕುಮಾರ್ ಸಮರ್ಥ್ ಕೂಡ ಪ್ರಚಂಡ ಫಾರ್ಮ್ನಲ್ಲಿದ್ದು, ಎದುರಾಳಿ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸುವ ಎಲ್ಲ ಸಾಧ್ಯತೆ ಇದೆ.
ಕಳೆದ ಐಪಿಎಲ್‌ನಿಂದ ಏಕಾಏಕಿ ರನ್ ಯಂತ್ರವಾಗಿ ಮಾರ್ಪಟ್ಟಿರುವ ದೇವದತ್ತ ಪಡಿಕ್ಕಲ್ ಈಗಾಗಲೇ ಸತತ 4 ಶತಕ ಬಾರಿಸಿ ತನ್ನ ತಾಕತ್ತೇನೆಂಬುದನ್ನು ಪರಿಚಯಿಸಿದ್ದಾರೆ. ಜತೆಗೆ 2 ಅರ್ಧ ಶತಕಗಳನ್ನೂ ದಾಖಲಿಸಿದ್ದಾರೆ. 6 ಪಂದ್ಯಗಳಿಂದ ಪಡಿಕ್ಕಲ್ ರನ್ ಗಳಿಕೆ 673ಕ್ಕೆ ಏರಿದೆ. ಕೂಟದ ಸರ್ವಾಧಿಕ ಸ್ಕೋರರ್ ಆಗಿ ಮೂಡಿಬಂದಿದ್ದಾರೆ. ಆರ್. ಸಮರ್ಥ್ ಕೂಡ 600 ರನ್ ಗಡಿ ದಾಟಿ ಮುನ್ನುಗ್ಗಿದ್ದಾರೆ. ಇವರ ಬ್ಯಾಟಿಂಗ್ ಸಾಧನೆಯ ತಾಜಾ ನಿದರ್ಶನವೆಂದರೆ ಕೇರಳ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ 192 ರನ್ ಸೂರೆಗೈದದ್ದು.
ಪೃಥ್ವಿ ಶಾ ತೀರಾ ಹಿಂದೇನೂ ಉಳಿದಿಲ್ಲ. ಕೂಟದ ಸರ್ವಾಧಿಕ ವೈಯಕ್ತಿಕ ಮೊತ್ತದ ಸಾಧನೆಯೊಂದಿಗೆ ಒಟ್ಟು 589 ರನ್ ಗಳಿಸಿ 3ನೇ ಸ್ಥಾನಿಯಾಗಿದ್ದಾರೆ. ಇವರು ಪುದುಚೇರಿ ವಿರುದ್ಧ 227 ರನ್ ಬಾರಿಸಿದ್ದು ವಿಜಯ್ ಹಜಾರೆ ಪಂದ್ಯಾವಳಿಯ ದಾಖಲೆಯಾಗಿದೆ. ಇವರ ಜತೆಗಾರ ಯಶಸ್ವಿ ಜೈಸ್ವಾಲ್ ಕೂಡ ಉತ್ತಮ ಲಯದಲ್ಲಿದ್ದಾರೆ.
ಕರ್ನಾಟಕ ಹೆಚ್ಚು ಬಲಿಷ್ಠ
ಪಡಿಕ್ಕಲ್-ಸಮರ್ಥ್ ಜೋಡಿಯ ಹೊರತಾಗಿಯೂ ಕರ್ನಾಟಕ ತಂಡ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತದೆ. ಅನುಭವಿ ಬ್ಯಾಟ್ಸ್ ಮನ್ ಮನೀಷ್ ಪಾಂಡೆ, ಸಿದ್ಧಾರ್ಥ್, ಶರತ್, ನಾಯರ್, ಪೇಸ್ ಬೌಲರ್‌ಗಳಾದ ರೋನಿತ್ ಮೋರೆ, ಪ್ರಸಿದ್ಧ್ ಕೃಷ್ಣ, ಆಲ್‌ರೌಂಡರ್‌ಗಳಾದ ಶ್ರೇಯಸ್ ಗೋಪಾಲ್, ಕೆ. ಗೌತಮ್ ಅವರಿಂದ ತಂಡದ ಸಾಮರ್ಥ್ಯ ಸಹಜವಾಗಿಯೇ ಉನ್ನತ ಮಟ್ಟದಲ್ಲಿದೆ.
ಮುಂಬಯಿ ತಂಡ ಯುವ ಆಟಗಾರರನ್ನೇ ಹೆಚ್ಚು ನೆಚ್ಚಿಕೊಂಡಿದೆ. ನಾಯಕ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್ ಸೇವೆ ಲಭಿಸದಿರುವುದು ಮುಂಬಯಿ ಪಾಲಿಗೊಂದು ಹಿನ್ನಡೆಯೇ ಆಗಿದೆ. ಇವರೆಲ್ಲ ಟೀಮ್ ಇಂಡಿಯಾ ಡ್ನೂಟಿಯಲ್ಲಿದ್ದಾರೆ.
ಶಮ್ಸ್ ಮುಲಾನಿ, ಪ್ರಶಾಂತ್ ಸೋಲಂಕಿ, ತನುಷ್ ಕೋಟ್ಯಾನ್, ಆಲ್‌ರೌಂಡರ್ ಶಿವಂ ದುಬೆ ಅವರಿಂದ ಕರ್ನಾಟಕದ ಬ್ಯಾಟಿಂಗ್ ಸರದಿಗೆ ಕಡಿವಾಣ ಹಾಕಲು ಸಾಧ್ಯವೇ ಎಂಬುದೊಂದು ಪ್ರಶ್ನೆ.
ಮುಂಬಯಿ 2018-19ರಲ್ಲಿ ಕೊನೆಯ ಸಲ ಚಾಂಪಿಯನ್ ಆಗಿತ್ತು. ಆದರೆ ಕರ್ನಾಟಕ ಹಾಲಿ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ.
ಗುಜರಾತ್ ಮತ್ತು ಯುಪಿ
ಗುಜರಾತ್-ಉತ್ತರ ಪ್ರದೇಶ ನಡುವಿನ ಇನ್ನೊಂದು ಸೆಮಿಫೈನಲ್ “ಅರುಣ್ ಜೇಟ್ಲಿ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಇದನ್ನು ಸಮಬಲದ ಸ್ಪರ್ಧೆ ಎಂದು ಭಾವಿಸಲಾಗಿದ್ದು, ನಾಯಕರಾದ ಪ್ರಿಯಾಂಕ್ ಪಾಂಚಾಲ್ ಮತ್ತು ಕರಣ್ ಶರ್ಮ ಉತ್ತಮ ಫಾರ್ಮ್ ನಲ್ಲಿದ್ದಾರೆ. ಎರಡೂ ಪಂದ್ಯಗಳು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿವೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

IPL Final: ಮೋಹಿತ್ ಜತೆ ಮಾತನಾಡಿದ್ದು ಹಾರ್ದಿಕ್ ಮಾಡಿದ ತಪ್ಪು: ಸೆಹವಾಗ್ ಕಿಡಿ

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್- ಟೀಮ್ ಇಂಡಿಯಾ ಕಠಿನ ಅಭ್ಯಾಸ

Namibia ತಂಡದೊಂದಿಗೆ ಕರ್ನಾಟಕ ತಂಡದ ಐದು ಪಂದ್ಯಗಳ ಏಕದಿನ ಸರಣಿ

Thailand Open Badminton: ಕಿರಣ್ ಜಾರ್ಜ್ ಜಬರ್ದಸ್ತ್ ಗೆಲುವು