
ಯಾರಿಗಾದರೂ ಸರಿ, ನೀವು ತಪ್ಪದೇ ಮತದಾನ ಮಾಡಿ:ಬಂಟ್ವಾಳ ಮಕ್ಕಳ ತಂಡದಿಂದ ಮತದಾನ ಜಾಗೃತಿ ಅಭಿಯಾನ
Team Udayavani, May 7, 2023, 8:08 AM IST

ಬಂಟ್ವಾಳ: ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳು ವಂತಿಲ್ಲ. ಅದು ಬಾಲಕಾರ್ಮಿಕ ಕಾಯ್ದೆಯ ಉಲ್ಲಂಘನೆ. ಆದರೆ ಮಕ್ಕಳೇ ಮತದಾನ ಮಾಡದೆ ಇರ ಬೇಡಿ ಎಂದು ಮತದಾನದ ಪರ ಪ್ರಚಾರಕ್ಕೆ ಇಳಿದರೆ ಅದು ಪ್ರಜಾ ಪ್ರಭು ತ್ವದ ಹೊಣೆ ನಿರ್ವಹಿಸುವ ಬಗೆ.
ಬಾಳ್ತಿಲ ಗ್ರಾಮದ ಕಶೆಕೋಡಿಯ ಪುಟ್ಟ ಮಕ್ಕಳ ತಂಡ ಇಂಥದೊಂದು ವಿಶಿಷ್ಟವಾದ ಮತ ಜಾಗೃತಿಗೆ ಮುಂದಾ ಗಿದ್ದಾರೆ. ಹತ್ತರ ಬಾಲೆ ಸನ್ನಿಧಿಯ ಜತೆಗೆ ಅವಳ ಅಕ್ಕ ಸಮೃದ್ಧಿ, ಸಂಬಂಧಿಕರಾದ ಪ್ರಣಮ್ಯಾ, ನಿರೀಕ್ಷಾ, ಕೀರ್ತಿ ಮನೆ ಮನೆಗೂ ತೆರಳಿ “ಮೇ 10 ರಂದು ಮತದಾನವಿದೆ. ತಪ್ಪದೇ ಮಾಡಿ’ ಎಂದು ಮನವಿ ಮಾಡುತ್ತಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
ನಮ್ಮ ನಡೆ ಮತದಾನದ ಕಡೆ
ಈ ಮಕ್ಕಳ ತಂಡ ಒಂದು ವಾರದಿಂದ ಜಾಗೃತಿ ಕಾರ್ಯ ನಡೆಸುತ್ತಿದ್ದು, ಚುನಾವಣೆಯ ಮುಂಚಿನ ದಿನದವರೆಗೂ ಮುಂದು ವರಿಸುವುದಾಗಿ ಹೇಳುತ್ತಿದ್ದಾರೆ. ನಮ್ಮ ನಡೆ ಮತದಾನದ ಕಡೆ ಎಂಬ ಘೋಷಣೆಯೊಂದಿಗೆ ಜಾಗೃತಿ ಮೂಡಿಸುತ್ತಿದ್ದು, ಬಾಳ್ತಿಲ ಭಾಗದ ಕಶೆಕೋಡಿ, ಕಂಠಿಕ, ದಾಸಕೋಡಿ, ಸೂರಿಕುಮೇರು ಭಾಗದಲ್ಲಿ ಈಗಾಗಲೇ 150 ಕ್ಕೂ ಹೆಚ್ಚು ಮನೆ, ಅಂಗಡಿಗಳಿಗೆ ಭೇಟಿ ನೀಡಿದ್ದಾರೆ.
ಕೆಲವು ಮನೆಯವರು ಅಚ್ಚರಿ ವ್ಯಕ್ತಪಡಿಸಿ ಯಾವುದೋ ಪಕ್ಷಕ್ಕೆ ಮತ ಕೇಳುತ್ತಿದ್ದಾರೋ ಎಂದು ಸಂಶಯಪಟ್ಟದ್ದೂ ಇದೆ.
ಆದರೆ ನೀವು ಯಾವುದೇ ಪಕ್ಷಕ್ಕೆ ಮತ ಹಾಕಿ. ನಾವು ಯಾವ ಪಕ್ಷದ ಪರವೂ ಇಲ್ಲ. ಆದರೆ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ ಎಂದು ತಂಡ ವಿವರಿಸುವಾಗ ಎಲ್ಲರೂ ಮಕ್ಕಳ ಕಾಳಜಿ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರಂತೆ.
ಸನ್ನಿಧಿ ತನ್ನ ಅಜ್ಜಿ ಮನೆ ಬೆಳ್ತಂಗಡಿಯ ಕೊಯ್ಯೂರು ಭಾಗಕ್ಕೆ ಕೆಲ ದಿನಗಳ ಹಿಂದೆ ತೆರಳಿದ್ದಳು. ಅಲ್ಲಿಯೂ ಜಾಗೃತಿಯ ಕಾರ್ಯ ಮಾಡಿದ್ದಾಳೆ. ಈ ಹಿಂದೆ ಸನ್ನಿಧಿಯ ಕುಟುಂಬ ಮಂಗಳೂರಿನ ಕೊಂಚಾಡಿಯಲ್ಲಿ ಬಾಡಿಗೆ ಮನೆಯಲ್ಲಿತ್ತು. ಅಲ್ಲಿಯೂ ಈ ಕಾರ್ಯ ಮಾಡಿರುವುದು ವಿಶೇಷ. ಜತೆಗೆ ಕೆಲವೊಂದು ಸಮಾರಂಭಗಳಿಗೆ ಹೋದ ಸಂದರ್ಭದಲ್ಲೂ ಎಲ್ಲರಲ್ಲೂ ತಪ್ಪದೇ ಮತದಾನ ಮಾಡುವಂತೆ ಹೇಳುತ್ತಿದ್ದಾಳೆ.
ನಮ್ಮಿಂದಲೂ ಪ್ರೇರಣೆ
ಸನ್ನಿಧಿಯ ನೇತೃತ್ವದಲ್ಲಿ 5 ಮಕ್ಕಳ ತಂಡ ಮತದಾನ ಜಾಗೃತಿ ಮೂಡಿಸುತ್ತಿದೆ. ಅವರ ಸಾಮಾಜಿಕ ಕಳಕಳಿಗೆ ಅನನ್ಯ. ಅದನ್ನು ಕಂಡು ಖುಷಿಯಾಗಿ ಪೂರ್ಣ ಸಹಕಾರ ನೀಡಿದ್ದೇವೆ ಎನ್ನುತ್ತಾರೆ ಸನ್ನಿಧಿಯ ತಂದೆ ಲೋಕೇಶ್ ಕಶೆಕೋಡಿ.
ಕಿರಣ್ ಸರಪಾಡಿ
ಟಾಪ್ ನ್ಯೂಸ್
