ಡಂಪಿಂಗ್ ಯಾರ್ಡ್ ಆಗಿರುವ ಕರಾವಳಿ ಉತ್ಸವ ಮೈದಾನ !
ಮಣ್ಣು, ಡಾಮರು ತ್ಯಾಜ್ಯ ರಾಶಿ
Team Udayavani, Dec 28, 2020, 12:09 PM IST
ಮಹಾನಗರ, ಡಿ. 27: ಮಂಗಳೂರಿನ ರಸ್ತೆ ಬದಿಗಳಲ್ಲಿ ಕಸ, ತ್ಯಾಜ್ಯ ಹಾಕಿದರೆ ದಂಡ ವಿಧಿಸುವ ಮಹಾನಗರ ಪಾಲಿಕೆ ಇದೀಗ ನಗರದ ಮೈದಾನವನ್ನು ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸುತ್ತಿದೆ.
ಕ್ರೀಡಾಕೂಟಗಳು ಸಹಿತ ಉತ್ಸವ ಸಮಾರಂಭ ಗಳಿಗೆ ವಿನಿಯೋಗವಾಗಬೇಕಾಗಿದ್ದ ಮಂಗಳೂರಿನ ಲಾಲ್‌ಬಾಗ್ ಬಳಿ ಇರುವ ಕರಾವಳಿ ಉತ್ಸವ ಮೈದಾನ ಇದೀಗ ಡಂಪಿಂಗ್ ಯಾರ್ಡ್ ಆಗಿ ಬದಲಾಗುತ್ತಿದೆ. ಕೆಲವು ಸಮಯಗಳ ಹಿಂದೆ ಕರಾವಳಿ ಉತ್ಸವ ಮೈದಾನವನ್ನು ಎರಡು ಭಾಗವಾಗಿ ವಿಂಗಡಿಸಿ ಅದಕ್ಕೆ ತಂತಿ ಬೇಲಿ ಅಳವಡಿಸಲಾಗಿತ್ತು. ಇದರ ಒಂದು ಭಾಗವನ್ನು ಸದ್ಯ ಸಾರ್ವಜನಿಕರು ಆಟವಾಡಲು ಉಪಯೋಗಿಸುತ್ತಿದ್ದಾರೆ. ಮತ್ತೂಂದು ಭಾಗದಲ್ಲಿ ಮಣ್ಣು, ಡಾಮರು ತ್ಯಾಜ್ಯಗಳನ್ನು ರಾಶಿ ಹಾಕಲಾಗಿದೆ.
ಜಾಗಿಂಗ್ ಮಾಡುವವರಿಗೆ ತೊಂದರೆ :
ನಗರದ ಅನೇಕ ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ವತಿಯಿಂದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಅಭಿವೃದ್ಧಿ ಉದ್ದೇಶ ದಿಂದ ಹಲವು ರಸ್ತೆ ಅಗೆಯಲಾಗುತ್ತಿದೆ. ಮತ್ತೂಂದೆಡೆ ಇಲ್ಲೇ ಪಕ್ಕದಲ್ಲಿ ಮಂಗಳಾ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ಕೂಡ ನಡೆಯುತ್ತಿದೆ. ಅಗೆದ ಮಣ್ಣನ್ನು ಕರಾವಳಿ ಉತ್ಸವ ಮೈದಾನದಲ್ಲಿ ರಾಶಿ ಹಾಕಲಾಗಿದೆ. ವಿವಿಧ ಕಾಮಗಾರಿಗೆ ಸಂಬಂಧಿಸಿದಂತೆ ತ್ಯಾಜ್ಯ ವಿಲೇವಾರಿ ಮಾಡಲು ಪಾಲಿಕೆಯಲ್ಲಿ ಜಾಗದ ಕೊರತೆ ಇದೆ. ಈ ಹಿಂದೆ ಕರಾವಳಿ ಉತ್ಸವ ಮೈದಾನವನ್ನು ಅನೇಕ ಮಂದಿ ಜಾಗಿಂಗ್‌ಗೆ ವಿನಿಯೋಗಿಸುತ್ತಿದ್ದರು. ಇದೀಗ ಅವರಿಗೆ ತೊಂದರೆ ಉಂಟಾಗಿದೆ. ಅದೇ ರೀತಿ ಲಘು ವಾಹನ ಕಲಿಯುವವರಿಗೂ ಈ ಮೈದಾನ ಉಪಯೋಗವಾಗುತ್ತಿತ್ತು.
ನೈರ್ಮಲ್ಯ ಇಲ್ಲದ ಮೈದಾನ :
ಕರಾವಳಿ ಉತ್ಸವ ಮೈದಾನದಲ್ಲಿ ಸದ್ಯ ಯಾವುದೇ ರೀತಿಯ ನೈರ್ಮಲ್ಯ ಪಾಲನೆ ಮಾಡಲಾಗುತ್ತಿಲ್ಲ. ಕಟ್ಟಡ ತ್ಯಾಜ್ಯ, ಡಾಮರು, ಕಾಂಕ್ರೀಟ್ ಸಹಿತ ಮಣ್ಣು ರಾಶಿ ಹಾಕಲಾಗಿದೆ. ಇದೇ ಮೈದಾನಲ್ಲಿ ಸ್ವತ್ಛ ಮಂಗಳೂರು ಕಸದ ವಾಹನಗಳು ಕೂಡ ನಿಲ್ಲುತ್ತಿದೆ. ಟಯರ್‌ಗಳು ಮೈದಾನದಲ್ಲಿ ಹೂತ ಕಾರಣ ಯಾವುದೇ ಸಮಾರಂಭ ನಡೆಯುವುದಾದರೆ ಮೈದಾನ ಹದಗೊಳಿಸಲು ಕೆಲವು ದಿನಗಳ ಸಮಯಬೇಕು. ಇನ್ನು ಮೈದಾನದಲ್ಲಿ ಹುಲ್ಲು ಬೆಳೆದುಕೊಂಡಿದ್ದು, ಕಟಾವು ಮಾಡಲಾಗಿಲ್ಲ. ತಂತಿ ಬೇಲಿಗೆ ತ್ಯಾಜ್ಯಗಳನ್ನು ಹಾಕಲಾಗಿದ್ದು, ಪ್ಲಾಸ್ಟಿಕ್, ಚಾಕೋಲೆಟ್ ರ್ಯಾಪರ್, ಹಾಸಿಗೆ, ಬಾಟಲಿಗಳು, ಬಳಕೆಯಾಗದ ಚಪ್ಪಲಿಗಳೆಲ್ಲ ಮೈದಾನದಲ್ಲೇ ಬಿದ್ದುಕೊಂಡಿವೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎನ್ನುತ್ತಾರೆ ಸಾರ್ವಜನಿಕರು.
ಮಂಗಳಾ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಅಗೆಯಲಾಗುತ್ತಿದೆ. ಅಲ್ಲಿನ ಕೆಂಪು ಮಣ್ಣನ್ನು ಸದ್ಯ ಕರಾವಳಿ ಉತ್ಸವ ಮೈದಾನದಲ್ಲಿ ರಾಶಿ ಹಾಕಲಾಗಿದೆ. ಸದ್ಯ ಯಾವುದೇ ಕಾರ್ಯಕ್ರಮ ಇಲ್ಲದ ಕಾರಣ ತೊಂದರೆ ಇಲ್ಲ. ಇದೇ ಮೈದಾನದಲ್ಲಿ ರಾಶಿ ಹಾಕಲಾದ ಬೇರೆಡೆಯ ಮಣ್ಣನ್ನು ಸ್ಥಳಾಂತರಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸದ್ಯದಲ್ಲೇ ಮಣ್ಣನ್ನು ವಿಲೇವಾರಿ ಮಾಡಲಾಗುತ್ತದೆ. –ಪ್ರದೀಪ್ ಡಿ’ಸೋಜಾ, ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444