ಜೇನು ಸಾಕಾಣಿಕೆ ಕೃಷಿಗೆ ಸಹಕಾರಿ: ಪ್ರದೀಪ್‌ಕುಮಾರ್
Team Udayavani, Feb 10, 2021, 3:22 PM IST
ಪಡುಪಣಂಬೂರು: ಕೃಷಿಗೆ ಪರೋಕ್ಷವಾಗಿ ಜೇನು ಕೃಷಿಯನ್ನು ಮಾಡಿಕೊಂಡು ರೈತರು ತಮ್ಮ ತೋಟದಲ್ಲಿಯೇ ಇರುವ ಅವಕಾಶವನ್ನು ಬಳಸಿಕೊಳ್ಳಲು ಇಲಾಖೆ ಸೂಕ್ತವಾದ ತರಬೇತಿ ನೀಡುತ್ತಿದೆ. ಸ್ವಾವಲಂಬಿ ಕೃಷಿಕ ಇಂತಹ ಯೋಜನೆಗಳಲ್ಲಿ ಉತ್ತಮ ಲಾಭಾಂಶ ಪಡೆಯಲು ಸಾಧ್ಯವಿದೆ ಎಂದು ಮಂಗಳೂರು ಕೃಷಿ ಇಲಾಖೆಯ ಕೃಷಿ ಅಧಿಕಾರಿ ಪ್ರದೀಪ್ ಕುಮಾರ್ ಹೇಳಿದರು.
ಕೆರೆಕಾಡು ಸರಕಾರಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಡುಪಣಂಬೂರು ಕಾರ್ಯಕ್ಷೇತ್ರದ ಸದಸ್ಯರಿಗೆ ನಡೆದ ತೋಟಗಾರಿಕೆ ಬೆಳೆಯಲ್ಲಿ ಸಮಗ್ರ ಕೃಷಿ ಪದ್ಧತಿ ಹಾಗೂ ಜೇನು ಕೃಷಿ ಸಾಕಾಣಿಕೆ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಆಧಿಕಾರಿ ಷಣ್ಮುಖ ಮಾತನಾಡಿ, ಗ್ರಾಮೀಣ ಭಾಗದ ಕೃಷಿಕರು ತಮ್ಮದೇ ನೆಲದಲ್ಲಿ ಉತ್ತಮ ತೋಟವನ್ನು ಕಾಯ್ದುಕೊಳ್ಳುವ ಜತೆಗೆ ಸೂಕ್ತ ಇಳುವರಿ, ಅದಕ್ಕೆ ಬೇಕಾದ ಗೊಬ್ಬರ, ನಿರ್ವಹಣೆಯನ್ನು ಕಾಲಕ್ಕ ತಕ್ಕಂತೆ ಮಾಡಿಕೊಂಡು ಬಂದಲ್ಲಿ ಉತ್ತಮ ಫಸಲು ಅವರದ್ದಾಗುತ್ತದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು.
ಸ್ವ-ಸಹಾಯ ಸಂಘದ ಸದಸ್ಯರು ಜೇನು ಕೃಷಿ ಮತ್ತು ತೋಟಗಾರಿಕೆ ಕೃಷಿಯ ಬಗ್ಗೆ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಸಂವಾದ ನಡೆಸಿದರು. ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯೋಜನಾ ಮೇಲ್ವಿಚಾರಕ ಚಂದ್ರಶೇಖರ್ ಸ್ವಾಗತಿಸಿದರು. ಪಡುಪಣಂಬೂರು ಸೇವಾ ಪ್ರತಿನಿಧಿ ಸವಿತಾ ಶರತ್ ಬೆಳ್ಳಾಯರು ನಿರೂಪಿಸಿದರು.