

Team Udayavani, May 27, 2024, 12:46 AM IST
ಮಂಗಳೂರು/ಉಡುಪಿ: ಎರಡು ದಿನಗಳ ಸರಣಿ ರಜೆ ಹಾಗೂ ಶಾಲಾ ಮಕ್ಕಳ ಬೇಸಗೆ ರಜೆ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ತೀರ್ಥಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ಸೋಮೇಶ್ವರ, ಪಣಂಬೂರು, ಸುರತ್ಕಲ್, ಮಲ್ಪೆ ಬೀಚ್‌ಗಳಲ್ಲೂ ಜನಸಂದಣಿ ಹೆಚ್ಚಾಗಿತ್ತು.
ಕೊಲ್ಲೂರು ದೇವಸ್ಥಾನ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಶನಿವಾರ ಮತ್ತು ರವಿವಾರ ತಲಾ 30,000ದಷ್ಟು ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು. ಬೆಳಗ್ಗಿನ ಜಾವದಿಂದ ಸಂಜೆಯ ತನಕವೂ ಭಕ್ತರ ಸರದಿ ಸಾಲು ಮುಖ್ಯ ರಸ್ತೆ ವರೆಗೆ ಇತ್ತು. ನೂಕುನುಗ್ಗಲು ತಪ್ಪಿಸಲು ಸಿಬಂದಿ ಹರ ಸಾಹಸ ಪಡಬೇಕಾಯಿತು.
ವಸತಿಗೃಹಗಳು ಭರ್ತಿ: ಶನಿವಾರ ಹಾಗೂ ರವಿವಾರ ಕ್ಷೇತ್ರದ ಪರಿಸರದ ಎಲ್ಲ ವಸತಿಗೃಹಗಳು ಭರ್ತಿಯಾಗಿ ದ್ದವು. ಭಕ್ತರು ವಾಸ್ತವ್ಯಕ್ಕೆ ಪರದಾಡ ಬೇಕಾಯಿತು.
ಕುಂಭಾಶಿ ದೇವಸ್ಥಾನ
ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ ಮತ್ತು ಸಹಸ್ರನಾಳಿಕೇರ ಗಣಪತಿ ಯಾಗವು ರವಿವಾರ ಜರಗಿದ್ದು, 30 ಸಾವಿರಕ್ಕೂ ಅಧಿಕ ಭಕ್ತರು ಶ್ರೀದೇವರ ದರ್ಶನ ಪಡೆದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ಸುಬ್ರಹ್ಮಣ್ಯ: ಶನಿವಾರ, ರವಿವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು, ಪ್ರಸಾದ ಸ್ವೀಕರಿಸಿದರು. ಕುಮಾರಧಾರಾ ಸ್ನಾನಘಟ್ಟ, ಸುಬ್ರಹ್ಮಣ್ಯ ಪೇಟೆ, ದೇವಸ್ಥಾನದ ಹೊರಾಂಗಣದಲ್ಲಿ ಭಕ್ತರ ದಟ್ಟಣೆ ಕಂಡುಬಂದಿದ್ದು, ದೇವಸ್ಥಾನದ ವತಿಯಿಂದ ಪೂರಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು, ಉಡುಪಿ ಶ್ರೀಕೃಷ್ಣ ಮಠ ಮೊದಲಾದ ಕ್ಷೇತ್ರಗಳಲ್ಲೂ ಸಾಮಾನ್ಯ ದಿನಕ್ಕಿಂತ ದುಪ್ಪಟ್ಟು ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ.
Ad
You seem to have an Ad Blocker on.
To continue reading, please turn it off or whitelist Udayavani.