
ತಾಂತ್ರಿಕ ವರದಿ ಆಧಾರದಲ್ಲಿ ಬಾಡಿಗೆ ಕಟ್ಟಡಕ್ಕೆ ಶಾಲೆ ಸ್ಥಳಾಂತರ
ಬಿ.ಸಿ.ರೋಡ್‌ನ ಅಂಬೇಡ್ಕರ್ ವಸತಿ ಶಾಲಾ ಕಟ್ಟಡ ಸುರಕ್ಷಿತವಲ್ಲ
Team Udayavani, May 31, 2023, 3:29 PM IST

ಬಂಟ್ವಾಳ: ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಕಾರ್ಯಾಚರಿಸು ತ್ತಿರುವ ಬಿ.ಸಿ.ರೋಡ್‌ನ ಭಾರತರತ್ನ ಡಾ| ಬಿ.ಆರ್.ಅಂಬೇಡ್ಕರ್ ವಸತಿ(ಆಶ್ರಮ) ಶಾಲಾ ಕಟ್ಟಡ ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ ಎಂಬ ತಾಂತ್ರಿಕ ವರದಿ ಇಲಾಖೆ ಕೈ ಸೇರಿದ್ದು, ಇದೀಗ 2023-24ನೇ ಶೈಕ್ಷಣಿಕ ವರ್ಷದಿಂದ ಶಾಲೆಯನ್ನು ಬೆಂಜನಪದವಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ.
ಕಳೆದ ಸುಮಾರು 4 ದಶಕಗಳಿಂದ ಈ ಕಟ್ಟಡದಲ್ಲಿ ವಸತಿ ಶಾಲೆ ಕಾರ್ಯಾಚರಿಸು ತ್ತಿದ್ದು, 1ರಿಂದ 5ನೇ ತರಗತಿಯವರೆಗೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಆಗಮಿಸಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಕಳೆದ ವರ್ಷವೇ ಈ ಕಟ್ಟಡದ ಸುರಕ್ಷತೆಯ ಕುರಿತು ಸಾಕಷ್ಟು ಆರೋಪಗಳು ಕೇಳಿಬಂದಿದ್ದು, ಹೊಸ ಕಟ್ಟಡ ನಿರ್ಮಾಣಕ್ಕಾಗಿ ಬೇಡಿಕೆಯೂ ಇತ್ತು.
ಎನ್‌ಐಟಿಕೆಯ ತಂತ್ರಜ್ಞರ ವರದಿ
ಕಟ್ಟಡದ ಬಣ್ಣ ಸಂಪೂರ್ಣ ಮಾಸಿ ಹೋಗಿದ್ದು, ಮೇಲ್ಛಾವಣಿ ಸೇರಿದಂತೆ ಅಲ್ಲಲ್ಲಿ ಕಾಂಕ್ರೀಟ್ ಪುಡಿ ಬಿದ್ದು, ತುಕ್ಕು ಹಿಡಿದ ಕಬ್ಬಿಣಗಳು ಕಾಣಿಸುತ್ತಿತ್ತು. ಹೀಗಾಗಿ ಕಟ್ಟಡವು ವಾಸ್ತವ್ಯಕ್ಕೆ ಯೋಗ್ಯವೇ ಎಂಬುದರ ಕುರಿತು ಸಂಬಂಧಪಟ್ಟ ಎಂಜಿನಿಯರ್‌ಗಳು ಪರಿಶೀಲಿಸಿ ಯೋಗ್ಯವಲ್ಲ ಎಂಬ ವರದಿಯನ್ನೂ ನೀಡಿದ್ದರು. ಆದರೆ ಹೆಚ್ಚಿನ ನಿಖರತೆಯ ದೃಷ್ಟಿಯಿಂದ ಸುರತ್ಕಲ್ ಎನ್‌ಐಟಿಕೆಯ ತಂತ್ರಜ್ಞರ ತಂಡ ತಮ್ಮ ಪರಿಕರ(ಇನ್‌ಸ್ಟ್ರೆಮೆಂಟ್)ಗಳ ಮೂಲಕ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಸ್ತುತ ಅದರ ವರದಿಯನ್ನು ಪಡೆಯಲಾಗಿದ್ದು, ಕಟ್ಟಡವು ಯಾವುದೇ ದೃಷ್ಟಿಯಿಂದ ವಾಸ್ತವ್ಯಕ್ಕೆ ಯೋಗ್ಯವಲ್ಲ ಎಂದು ದಾಖಲಾಗಿರುವುದರಿಂದ ಶಾಲೆಯ ಸ್ಥಳಾಂತರದ ಅನುಮತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಬಂಟ್ವಾಳ ಸಹಾಯಕ ನಿರ್ದೇಶಕರು ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆದಿದ್ದರು.
ಅದರಂತೆ ಇಲಾಖೆಯು ಪ್ರಸ್ತುತ ಸ್ಥಳಾಂತರಕ್ಕೆ ಅನುಮತಿ ನೀಡಿದೆ. ಆದರೆ ಕಟ್ಟಡವನ್ನು ತೆರವು ಮಾಡುವುದಕ್ಕೂ ಅನುಮತಿ ಅಗತ್ಯವಾಗಿದ್ದು, ಅದರ ಪ್ರಕ್ರಿಯೆಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಹೀಗೆ ತೆರವು ಮಾಡಿದ ಬಳಿಕ ಹೊಸ ಕಟ್ಟಡದ ಕ್ರಿಯಾಯೋಜನೆ ಸಿದ್ಧಗೊಂಡು ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.
ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಾಮರ್ಥ್ಯ 125 ಆಗಿದ್ದರೂ, ಕಳೆದ ಶೈಕ್ಷಣಿಕ ವರ್ಷದಲ್ಲಿ ಬರೀ 35 ಮಂದಿ ಮಕ್ಕಳು ವ್ಯಾಸಂಗ ಮಾಡಿದ್ದರು. ಈ ವರ್ಷ ಅದು ಕೊಂಚ ಹೆಚ್ಚಾಗುವ ಸಾಧ್ಯತೆ ಇದ್ದು, ಒಟ್ಟು ಸಾಮರ್ಥ್ಯದಷ್ಟು ವಿದ್ಯಾರ್ಥಿಗಳು ಬಂದರೆ ಬಾಡಿಗೆ ಕಟ್ಟಡವೂ ಸಾಲುವುದು ಕಷ್ಟ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಶಾಲೆಯ ಕಚೇರಿ ಬಿ.ಸಿ.ರೋಡ್‌ನ ಹಳೆ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದ್ದು, ದಾಖಲಾದ ಮಕ್ಕಳನ್ನು ಬೆಂಜನಪದವಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಜತೆಗೆ ಹಿಂದಿನ ವಿದ್ಯಾರ್ಥಿಗಳು ಕೂಡ ಆಗಮಿಸಿ ಬಾಡಿಗೆ ಕಟ್ಟಡದಲ್ಲಿ ಉಳಿದುಕೊಳ್ಳುತ್ತಿದ್ದು, ಜೂನ್ 1ರ ಬಳಿಕ ಅಧಿಕೃತವಾಗಿ ಶಾಲೆಗಳು ಆರಂಭಗೊಳ್ಳಲಿದೆ.
ಬಾಡಿಗೆ ಕಟ್ಟಡಕ್ಕಾಗಿ ಹುಡುಕಾಟ
ವಸತಿ ಶಾಲೆಯನ್ನು ಸ್ಥಳಾಂತರ ಮಾಡಲು ಇಲಾಖೆಯು ಮಾಸಿಕ ಬಾಡಿಗೆ ನಿಗದಿ ಮಾಡಿ ಅನುಮತಿ ನೀಡಿದರೂ, ಶಾಲೆ ನಡೆಸುವುದಕ್ಕೆ ಯೋಗ್ಯ ಕಟ್ಟಡಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿದೆ. ಆದರೆ ಕೊನೆಗೆ ಬೆಂಜನಪದವಿನಲ್ಲಿ ಬಾಡಿಗೆ ಕಟ್ಟಡವೊಂದು ಲಭಿಸಿದ್ದು, ಜೂನ್ 1ರ ಬಳಿಕ ಆ ಕಟ್ಟಡದಲ್ಲಿ ವಸತಿ ಶಾಲೆ ಆರಂಭಗೊಳ್ಳಲಿದೆ.
ಶಾಲೆ ಸ್ಥಳಾಂತರಕ್ಕೆ ಅನುಮತಿ
ಎನ್‌ಐಟಿಕೆಯ ವರದಿಯ ಆಧಾರದಲ್ಲಿ ಉಪನಿರ್ದೇಶಕರ ಕಚೇರಿಯಿಂದ ಶಾಲೆಯ ಸ್ಥಳಾಂತರಕ್ಕೆ ಅನುಮತಿ ಸಿಕ್ಕಿದ್ದು, ಮುಂದೆ ಬೆಂಜನಪದವಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸಲಿದೆ. ಹಳೆ ಕಟ್ಟಡ ತೆರವು, ಹೊಸ ಕಟ್ಟಡ ನಿರ್ಮಾಣದ ಕುರಿತು ಮೇಲಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
-ಸುನೀತಾ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಬಂಟ್ವಾಳ
-ಕಿರಣ್ ಸರಪಾಡಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Nikki Haley: ಅಮೆರಿಕದ ಮೇಲೆ ಯುದ್ಧ ಸಾರಲು ಚೀನಾ ಸಿದ್ಧತೆ ನಡೆಸುತ್ತಿದೆ: ನಿಕ್ಕಿ ಹ್ಯಾಲೆ

Dighvijaya Movie review; ರೈತಪರ ಹೋರಾಟಕ್ಕೆ ದಿಗ್ವಿಜಯ

Rashmika Mandanna: ‘ಅನಿಮಲ್’ ನಲ್ಲಿ ‘ಗೀತಾಂಜಲಿ’ ಆದ ರಶ್ಮಿಕಾ; ಫಸ್ಟ್ ಲುಕ್ ಔಟ್

Road Mishap: ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು, ಮಹಿಳೆಗೆ ಗಂಭೀರ ಗಾಯ

Cauvery Issue; ಸುಪ್ರೀಂ ಆದೇಶ ವಿರೋಧಿಸಿ ಮಂಡ್ಯ ಬಂದ್; ವ್ಯಾಪಕ ಬೆಂಬಲ