
ಇಡ್ಕಿದು ಗ್ರಾ.ಪಂ.ನಲ್ಲಿ ರೇಬಿಸ್ ಲಸಿಕೆ ಕ್ರಾಂತಿ! ಒಂದೇ ದಿನ 500ರಷ್ಟು ಚುಚ್ಚುಮದ್ದು
27 ವರ್ಷಗಳಿಂದ ಗ್ರಾಮದ ಬಹುತೇಕ ನಾಯಿಗಳಿಗೆ ಲಸಿಕೆ
Team Udayavani, Mar 19, 2023, 6:50 AM IST

ಬಂಟ್ವಾಳ: ನಾಯಿಗಳಿಗೆ ರೇಬಿಸ್ ಬರದಂತೆ ಲಸಿಕೆ ನೀಡುವ ಪ್ರಕ್ರಿಯೆ ಅಲ್ಲಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಯಾವುದೇ ಊರಿನ ಶಿಬಿರದಲ್ಲಿ ಹತ್ತಿಪ್ಪತ್ತು ನಾಯಿಗಳಿಗೆ ನೀಡಲಾಗುತ್ತದೆ. ಆದರೆ ಇಲ್ಲಿನ ಹಳ್ಳಿಯೊಂದರಲ್ಲಿ 27 ವರ್ಷಗಳಿಂದ ಸತತವಾಗಿ ನಿರ್ದಿಷ್ಟ ಸಮಯಕ್ಕೆ ಶಿಬಿರ ನಡೆಯುತ್ತಿದ್ದು, ಊರಿನ ಶೇ. 80ರಷ್ಟು ನಾಯಿಗಳಿಗೂ ಲಸಿಕೆ ನೀಡುತ್ತಿರುವುದು ವಿಶೇಷವಾಗಿದೆ.
ಇಂತಹ ಮಾದರಿ ಕಾರ್ಯ ನಡೆ ಯುತ್ತಿರುವುದು ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಇಡ್ಕಿದು ಮತ್ತು ಕುಳ ಗ್ರಾಮಗಳಲ್ಲಿ. ಶಿಬಿರದ ಮೂಲಕ ಶೇ. 60ರಿಂದ 70ರಷ್ಟು ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಶೇ. 10ರಷ್ಟು ನಾಯಿಗಳ ಮಾಲಕರು ತಾವೇ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳುತ್ತಾರೆ. ಹೀಗಿರುವಾಗ ಗ್ರಾಮಕ್ಕೆ ಹೊರಗಿನಿಂದ ರೇಬಿಸ್ ಪೀಡಿತ ನಾಯಿ ಬಂದು ಕಚ್ಚಿದರೂ ಯಾವುದೇ ಆತಂಕವಿರದು ಎನ್ನುತ್ತಾರೆ ವೈದ್ಯರು.
ವಾರ್ಷಿಕ 500ರಷ್ಟು ಲಸಿಕೆ
ಊರಿನ ಪಶು ವೈದ್ಯ ಡಾ| ಕೆ.ಎಂ. ಕೃಷ್ಣ ಭಟ್ಟರು 1997ರಲ್ಲಿ ಗ್ರಾಮದಲ್ಲಿ ಈ ಲಸಿಕೆ ಶಿಬಿರ ಆರಂಭಿಸಿದ್ದು, ಪ್ರತೀ ವರ್ಷ ಒಂದೇ ದಿನಾಂಕದಂದು ನಡೆಯುವುದು ವಿಶೇಷ. ಈ ವರ್ಷದ ಶಿಬಿರ ಮಾ. 14ರಂದು ನಡೆದಿದೆ. ಸುಮಾರು 25 ಕೇಂದ್ರಗಳಲ್ಲಿ ಶಿಬಿರ ಆಯೋಜಿಸುತ್ತಿದ್ದು, ಒಟ್ಟು 5 ತಂಡಗಳು ತಲಾ 5 ಶಿಬಿರಗಳನ್ನು ನಡೆಸುತ್ತವೆ. ಪ್ರತೀ ವರ್ಷ ಸುಮಾರು 500 ನಾಯಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಇಡ್ಕಿದು ಪಂಚಾಯತ್ ಪಿಡಿಒ ಗೋಕುಲದಾಸ್ ಭಕ್ತ ತಿಳಿಸಿದ್ದಾರೆ.
ಶಿಬಿರಕ್ಕೆ ಸುಮಾರು 40 ಸಾವಿರ ರೂ. ಖರ್ಚಾಗುತ್ತದೆ. 500 ಲಸಿಕೆಗಳಿಗೆ 22 ಸಾವಿರ ರೂ. ಬೇಕಾಗುತ್ತದೆ. ಪಶು ಇಲಾಖೆಯ ಸಹಕಾರವಿದ್ದು, ಗ್ರಾ.ಪಂ. ನೇತೃತ್ವ ವಹಿಸಿಕೊಳ್ಳುತ್ತಿದೆ. ಇಡ್ಕಿದು ಸಿಎ ಬ್ಯಾಂಕ್, ಹಾಲು ಸೊಸೈಟಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ನೆರವಾಗುತ್ತವೆ. ಗ್ರಾಮದ ಸೇಸಪ್ಪ ಕೆರ್ದೇಲ್ ಅವರು ತನ್ನ ನಾಯಿಗೆ 12 ವರ್ಷಗಳಿಂದ ನಿರಂತರವಾಗಿ ಲಸಿಕೆ ಹಾಕಿಸುತ್ತಿದ್ದು, ಅದೂ ಒಂದು ದಾಖಲೆಯಾಗಿದೆ ಎಂದು ಪಂಚಾಯತ್ ಅಧಿಕಾರಿಗಳು ಹೇಳುತ್ತಾರೆ.
27 ವರ್ಷಗಳ ಹಿಂದೆ ಆರಂಭ
ವೃತ್ತಿನಿರತ ಪಶುವೈದ್ಯರ ವೇದಿಕೆಯ ಮೂಲಕ 1996ರಲ್ಲಿ ಜಿಲ್ಲೆಯ ಪಶು ವೈದ್ಯರ ತಂಡ ಲಸಿಕೆ ಕಾರ್ಯವನ್ನು ಆರಂಭಿಸಿದ್ದು, ಡಾ| ಕೆ.ಎಂ. ಕೃಷ್ಣ ಭಟ್ಟರು ವೇದಿಕೆಯ ಅಧ್ಯಕ್ಷರಾಗಿದ್ದರು. ಪಶುವೈದ್ಯದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಕೃಷ್ಣ ಭಟ್ಟರು ಪ್ರಾರಂಭದಲ್ಲಿ ಸರಕಾರಿ ಸೇವೆಯಲ್ಲಿದ್ದು, ಪ್ರಸ್ತುತ ಉಪ್ಪಿನಂಗಡಿಯಲ್ಲಿ ಕ್ಲಿನಿಕ್ ಹೊಂದಿದ್ದಾರೆ.
ಪಶುವೈದ್ಯರ ವೇದಿಕೆಯ ಮೂಲಕ ಪ್ರಾರಂಭದ ಕೆಲವು ವರ್ಷ ನಿಡ್ಲೆ, ಏತಡ್ಕ, ಕೊಣಾಜೆ ಭಾಗದಲ್ಲಿ ಲಸಿಕೆ ಶಿಬಿರ ನಡೆದಿತ್ತು. ಇಡ್ಕಿದುವಲ್ಲಿ ಈಗಲೂ ಮುಂದುವರಿದಿದೆ.
– ಡಾ| ಕೆ.ಎಂ. ಕೃಷ್ಣ ಭಟ್, ಪಶು ವೈದ್ಯ
-ಕಿರಣ್ ಸರಪಾಡಿ
ಟಾಪ್ ನ್ಯೂಸ್
