
ಉಡುಪಿಯಲ್ಲಿ ಪೈಲಟ್ ಯೋಜನೆ; ತಂಬಾಕು ಮುಕ್ತ ಅಪಾರ್ಟ್‌ಮೆಂಟ್
Team Udayavani, Sep 13, 2022, 3:43 PM IST

ಉಡುಪಿ: ನಗರದ ಅಪಾರ್ಟ್‌ಮೆಂಟ್ ಗಳಲ್ಲಿ ತಂಬಾಕು ಉತ್ಪನ್ನ ಬಳಸುವುದನ್ನು ಅಪಾರ್ಟ್ ಮೆಂಟ್ ನಿವಾಸಿಗಳೇ ಸ್ವಯಂ ಪ್ರೇರಣೆಯಿಂದ ನಿರ್ಬಂಧಿಸಿ, ತಂಬಾಕು ಮುಕ್ತ ವಸತಿ ಸಮುಚ್ಚಯವನ್ನಾಗಿ ನಿರ್ಮಿಸಬಹುದಾದ ಪ್ರಾಯೋಗಿಕ ಯೋಜನೆಯನ್ನು ಜಿಲ್ಲೆಯಲ್ಲಿ ಪೈಲೆಟ್ ಯೋಜನೆಯಾಗಿ ರಾಜ್ಯ ಸರಕಾರ ಕೈಗೊಂಡಿದೆ.
ತಂಬಾಕು ಉತ್ಪನ್ನಗಳನ್ನು ಪ್ರತ್ಯಕ್ಷವಾಗಿ ಬಳಸುವ ಜನರು ಅದರ ಪ್ರಾಥಮಿಕ ಬಳಕೆದಾರರಾದರೆ ಅವರ ಸಮೀಪದವರು ಪರೋಕ್ಷವಾಗಿ ಎರಡನೇ ಬಳಕೆದಾರರಾಗಿತ್ತಾರೆ. ಪ್ರತೀ ವರ್ಷ ವಿಶ್ವದ ಪ್ರಮುಖ ನಗರಗಳಲ್ಲಿ ಸಂಭವಿಸುವ ತಡೆಯಬಹುದಾದ ಸಾವುಗಳ ಪ್ರಮಾಣದಲ್ಲಿ ಇವರಿಗೆ 2ನೇ ಸ್ಥಾನವಾಗಿದೆ. ಬಳಕೆದಾರರಿಗಿಂತಲೂ ಹೆಚ್ಚಿನ ಕಾಯಿಲೆಗಳು ಇವರಲ್ಲಿ ಕಾಣಿಸಿಕೊಳ್ಳುತ್ತವೆ. ಧೂಮಪಾನದಿಂದ 10 ಲಕ್ಷ ಸಾವುಗಳು ಸಂಭವಿಸಿದರೆ ಅದರಲ್ಲಿ 2 ಲಕ್ಷ ಮಂದಿ ಎರಡನೇ ಬಳಕೆದಾರರು ಆಗಿರುತ್ತಾರೆ. ಭಾರತದಲ್ಲಿ ಕಂಡುಬರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 27 ರಷ್ಟು ತಂಬಾಕು ಬಳಕೆ ಕಾರಣವಾಗಿದೆ. ತಂಬಾಕು ಮತ್ತು ಧೂಮಪಾನ ಉತ್ಪನ್ನಗಳ ನೇರ ಸೇವನೆಯಿಂದ ಮೃತಪಡುವವರಿಗಿಂತ, ಇವುಗಳನ್ನು ಬಳಸುವ ಬಳಕೆದಾರರ ಕುಟುಂಬದವರು ಮತ್ತು ಸಮೀಪವರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದನ್ನು ತಪ್ಪಿಸಲು ತಂಬಾಕು ಮತ್ತು ಧೂಮಪಾನ ಬಳಕೆ ವಿರುದ್ಧ ಹಲವು ನಿರ್ಬಂಧಗಳನ್ನು ವಿಧಿಸಿದ್ದರೂ ಸಹ ಇದರ ನಿರೀಕ್ಷಿತ ಪ್ರಮಾಣ ಕಡಿಮೆಯಾಗಿಲ್ಲ.
ಪ್ರಾಯೋಗಿಕ ಅನುಷ್ಠಾನ
ಉಡುಪಿ- ಮಣಿಪಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದ ಕುಟುಂಬಗಳು, ವಿದ್ಯಾರ್ಥಿಗಳು, ನೌಕರರು ವಾಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಸಮುಚ್ಚಯಗಳಲ್ಲಿ ತಂಬಾಕು ಮತ್ತು ಧೂಮಪಾನ ಮುಕ್ತ ಗೊಳಿಸುವಂತಹ ಚಟುವಟಿಕೆಗಳು ನಡೆದಿರುವುದು ಕಂಡುಬಂದಿಲ್ಲ. ಆದ್ದರಿಂದ ಇಲ್ಲಿನ ವಸತಿ ಸಮುಚ್ಚಯಗಳನ್ನು ತಂಬಾಕು ಮುಕ್ತ ಸಮುಚ್ಚಯಗಳನ್ನಾಗಿ ಮಾರ್ಪಡಿಸುವುದರ ಬಗ್ಗೆ ಪೈಲಟ್ ಯೋಜನೆ ರೂಪಿಸಿ ಯಶಸ್ವಿಯಾದಲ್ಲಿ ಈ ಯೋಜನೆಯನ್ನು ರಾಜ್ಯಕ್ಕೆ ವಿಸ್ತರಿಸುವ ಉದ್ದೇಶವಿದೆ. ಜಿಲ್ಲಾ ಸರ್ವೇಕ್ಷಣ ಘಟಕದಿಂದ ಜಿಲ್ಲೆಯಲ್ಲಿ ಈ ಪ್ರಾಯೋಗಿಕ ಯೋಜನೆ ಅನುಷ್ಠಾನಗೊಳ್ಳಲಿದ್ದು, ವಸತಿ ಸಮುಚ್ಚಯಗಳ ಸಮೀಕ್ಷಾ ಕಾರ್ಯ ಮತ್ತು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಅಪಾರ್ಟ್‌ಮೆಂಟ್ ಧೂಮಪಾನಿಗಳ ಸಮೀಕ್ಷೆ
ತಂಬಾಕು ಮುಕ್ತ ಅಪಾರ್ಟ್ ಮೆಂಟ್ ಯೋಜನೆಯಿಂದ ವಸತಿ ಸಮುಚ್ಚಯ ಗಳಲ್ಲಿನ ನಾಗರಿಕರಿಗೆ ಧೂಮಪಾನ ರಹಿತ ಶುದ್ಧಗಾಳಿಯ ಸೇವನೆ ಜತೆಗೆ ತಂಬಾಕು ಉತ್ಪನ್ನಗಳ ಎರಡನೇ ಬಳಕೆ ದಾರರುಗಳನ್ನಾಗುವುದನ್ನು ತಪ್ಪಿಸ ಬಹುದಾಗಿದೆ. ಅವರಿಗೆ ಆರೋಗ್ಯವಂತ ಜೀವನ ನಡೆಸಲು ಅನುವು ಮಾಡಿಕೊಡಲು ತಂಬಾಕು ಮುಕ್ತ ವಸತಿ ಸಮುಚ್ಚಯದ ನಿರ್ಮಾಣವಾಗಲಿದೆ. ಸಮುಚ್ಚಯದಲ್ಲಿರುವ ನಿವಾಸಿಗಳ ಸಮೀಕ್ಷೆ ನಡೆಸಿ ಅವರಲ್ಲಿ ಧೂಮಪಾನ ಮತ್ತು ತಂಬಾಕು ಬಳಸುವವರ ಮತ್ತು ಬಳಸದೆ ಇರುವವರ ಪಟ್ಟಿ ಮಾಡಿ, ಅವರಿಗೆ ತಮ್ಮ ಮನೆಗಳಲ್ಲಿ ಧೂಮಪಾನ ಮುಕ್ತಗೊಳಿಸುವ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ.
ಯಶಸ್ವಿ ಅನುಷ್ಠಾನಕ್ಕೆ ಸಿದ್ಧತೆ: ಜಿಲ್ಲೆಯಲ್ಲಿ ಈಗಾಗಲೇ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದೆ. ಕಾರ್ಕಳದ ರೆಂಜಾಳ ಮತ್ತು ಕುಂದಾಪುರದ ಕೊರ್ಗಿ ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳನ್ನು ಸಹ ತಂಬಾಕು ಮುಕ್ತ ಕಚೇರಿಗಳೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಂಡು ದೃಢೀಕರಣ ಪತ್ರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾಜ್ಯ ಸರಕಾರ ಸೂಚಿಸಿರುವ ತಂಬಾಕು ಮುಕ್ತ ವಸತಿ ಸಮುಚ್ಚಯದ ಪೈಲಟ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯನಿರ್ವಹಿಸಲಾಗುವುದು. –ಡಾ| ನಾಗರತ್ನಾ, ಸರ್ವೇಕ್ಷಣಾಧಿಕಾರಿ, ಉಡುಪಿ ಜಿಲ್ಲೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಮಹಾದಾಯಿ ವಿವಾದ: “ದುರ್ಯೋಧನನಂತೆ ಕರ್ನಾಟದ ಧೋರಣೆ’

ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಪಿಎಫ್ಐ ಹೇಗೆ ಪ್ಲ್ಯಾನ್ ಮಾಡಿತ್ತು?: ಎನ್ಐಎ ವರದಿಯಲ್ಲೇನಿದೆ?

ಮಧುಗಿರಿ: ಲೋಕೋಪಯೋಗಿ ಇಲಾಖೆ ಅಧಿಕಾರಿ ನೇಣಿಗೆ ಶರಣು

ಸೆಲ್ಫಿ ತೆಗೆಯಲು ಪ್ರಯತ್ನಿಸಿದ ಅಭಿಮಾನಿಯ ಮೊಬೈಲ್ ಫೋನ್ ಎಸೆದ ರಣಬೀರ್ ಕಪೂರ್ ವಿಡಿಯೋ ವೈರಲ್!

ಬಿಬಿಸಿ ಡಾಕ್ಯುಮೆಂಟರಿ ಪ್ರದರ್ಶಿಸಲು ಮುಂದಾದ ಯೂನಿರ್ವಸಿಟಿಗಳ ವಿದ್ಯುತ್ ಸರಬರಾಜು ಸ್ಥಗಿತ…