ಹೆಬ್ರಿ ಆಶ್ರಮ ಶಾಲೆ ಹಾಸ್ಟೆಲ್ ನಲ್ಲಿ ಅಗ್ನಿ ಅವಘಡ; 4 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
Team Udayavani, Nov 11, 2022, 10:12 AM IST
ಹೆಬ್ರಿ: ಇಲ್ಲಿನ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ನ.9 ರಂದು ಸಂಜೆ ಅಗ್ನಿ ಅವಘಡ ಸಂಭವಿಸಿ ನಾಲ್ವರು ವಿದ್ಯಾರ್ಥಿಗಳು ತೀವ್ರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಾಸ್ಟೆಲ್ ನ ಹಿಂಭಾಗದಲ್ಲಿ ಕಸ ಕಡ್ಡಿಗಳಿಗೆ ಸ್ಯಾನಿಟೈಸರ್ ಮೂಲಕ ಬೆಂಕಿ ಹಚ್ಚುವ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ. ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀನಿವಾಸ್, ಅಮರೇಶ್ ಹಾಗೂ ಐದನೇ ತರಗತಿಯ ವಿದ್ಯಾರ್ಥಿಗಳಾದ ವಿನೋದ್ ಮತ್ತು ಮನೋಜ್ ಗಾಯಗೊಂಡವರು.
ಮೂವರು ವಿದ್ಯಾರ್ಥಿಗಳು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮರುದಿನ ಹೆಬ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಗುರುವಾರ ಸಂಜೆ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಭೇಟಿ ನೀಡಿ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಲ್ಲ: ನ. 9ರ ಸಂಜೆ ನಡೆದ ಘಟನೆಯ ಬಗ್ಗೆ ಮರುದಿನ ಮಧ್ಯಾಹ್ನ ತನಕವೂ ಸ್ಥಳೀಯ ಪಂಚಾಯತ್ ಸೇರಿದಂತೆ ಯಾರಿಗೂ ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೆಬ್ರಿ ಗ್ರಾ.ಪಂ. ಅಧ್ಯಕ್ಷೆ ಮಾಲತಿ ತಿಳಿಸಿದ್ದಾರೆ. ಘಟನೆಗೆ ವಾಡ೯ನ್ ನೇರ ಹೊಣೆಯಾಗುತ್ತಾರೆ. ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಘಟನೆ ಆದ ಸಂದರ್ಭದಲ್ಲೂ ಅವರು ಸ್ಥಳದಲ್ಲಿ ಇಲ್ಲ. ಅದಲ್ಲದೇ ಘಟನೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದು, ಮರುದಿನ ಮಾಹಿತಿ ತಿಳಿದಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇಲಾಖೆ ನಿರ್ಲಕ್ಷ್ಯ: ರಾಜ್ಯದೆಲ್ಲೆಡೆಯ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅವರ ಬಗ್ಗೆ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ರಾತ್ರಿ ಹೊತ್ತು ನೋಡಿಕೊಳ್ಳಲು ಯಾರೂ ವಾರ್ಡನ್ ಇಲ್ಲಿಲ್ಲ. ಏನಾದ್ರೂ ಹೆಚ್ಚು ಕಮ್ಮಿ ಆದರೆ ಯಾರು ಹೊಣೆ ಎಂದು ಹೆಬ್ರಿ ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದ್ದಾರೆ.
ಮಕ್ಕಳು ಕ್ಷೇಮ: ಹಾಸ್ಟೆಲ್ ಸಮೀಪ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಕಸದ ರಾಶಿಗೆ ಸ್ಯಾನಿಟೈಸರ್ ಬಳಸಿ ಬೆಂಕಿ ಹಚ್ಚಲು ಮುಂದಾದಾಗ ಸ್ಫೋಟಗೊಂಡು ಬೆಂಕಿ ತಗಲಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಡೆಯುತ್ತಿದೆ. ಮಕ್ಕಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ತಿಳಿಸಿದ್ದಾರೆ.