ಆರ್ಥಿಕ ಪುನಶ್ಚೇತನದತ್ತ ಜನಜೀವನ
ಮಳೆಗಾಲದ ಸಿದ್ಧತೆಗೆ ಚುರುಕು, ನಿರ್ಮಾಣ ಹಂತದ ಕಾಮಗಾರಿಗೆ ಚಾಲನೆ
Team Udayavani, May 1, 2020, 5:17 AM IST
ಕಟ್ಟಡ ಕಾಮಗಾರಿ ನಡೆಯುತ್ತಿರುವುದು.
ಉಡುಪಿ: ಮಹಾಮಾರಿ ಕೋವಿಡ್-19 ನಿಯಂತ್ರಿಸುವುದಕ್ಕಾಗಿ ಕಳೆದ ಹಲವು ಸಮಯ ಗಳಿಂದ ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿತ್ತು. ಇದರಿಂದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಲಾಕ್‌ಡೌನ್ ಸಡಿಲಿಕೆಯಿಂದ ಕೆಲ ಆರ್ಥಿಕ ಚಟುವಟಿಕೆಗಳು ಪುನಶ್ಚೇತನದತ್ತ ದೃಷ್ಟಿ ಹಾಯಿಸಿವೆ.
ಎ.29ರಿಂದ ಜಿಲ್ಲೆಯಲ್ಲಿ ಭಾಗಶಃ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಆರ್ಥಿಕ ಚಟುವಟಿಕೆಗಳು ಮತ್ತೆ ಪುನರಾರಂಭಗೊಂಡಿವೆ. ಹೊಸ ಮಾರ್ಗಸೂಚಿ ಪ್ರಕಾರ ಗ್ರಾಮೀಣ ಭಾಗದ ಸಣ್ಣಪುಟ್ಟ ಕಾರ್ಖಾನೆಗಳು ಕೆಲಸ ಆರಂಭಿಸಿವೆ.
ಸ್ಪೆಶಲ್ ಎಕನಾಮಿಕ್ ಝೋನ್ ನಲ್ಲಿ ಬರುವ ಏಕೈಕ ಕಾರ್ಖಾನೆ ನಂದಿಕೂರು ಪವರ್ ಉತ್ಪತ್ತಿ ಕೇಂದ್ರ ಕಾರ್ಯಾರಂಭ ಮಾಡಿದೆ. ಎಷ್ಟಾಬ್ಲಿಶ್‌ಮೆಂಟ್‌ನಲ್ಲಿ ನೋಂದಣಿಯಾಗಿರುವ ಎಲ್ಲ ರೆಸಿಡೆನ್ಸಿ ಅಂಗಡಿ ಗಳು (ಸಿಂಗಲ್ ಬ್ರಾಂಡ್ ಮಲ್ಟಿ ಬ್ರಾಂಡ್‌ಮಾಲ್ ಹೊರತುಪಡಿಸಿ) ಶೇ. 50ರಷ್ಟು ಉದ್ಯೋಗಿಗಳನ್ನುಕೆಲಸಕ್ಕೆ ಬಳಸಿಕೊಂಡು ನಿರ್ವಹಿಸುತ್ತಿವೆ.
ಮಳೆಗಾಲದ ಸಿದ್ಧತೆಗೆ ಚುರುಕು
ಗ್ರಾಮೀಣ ಭಾಗಗಳಲ್ಲಿ ಕೆಲಸ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ರಸ್ತೆ ಅಭಿವೃದ್ಧಿ ಕೆಲಸಗಳು ಆರಂಭ ಗೊಂಡಿವೆ. ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಕೆಲಸಗಳಿಗೆ ಕಾರ್ಮಿಕರ ಕೊರತೆ ಎದುರಾಗಿದೆ.
ಕಾಮಗಾರಿಗಳಿಗೆ ಆರಂಭದಲ್ಲಿ ಈಗ ಕಚ್ಚಾ ಸಾಮಗ್ರಿ ಕೊರತೆ ಎದುರಾಗು ತ್ತಿದ್ದು, ಕೆಲವೊಂದು ಕಚ್ಚಾವಸ್ತುಗಳ ದಾಸ್ತಾನು ಮತ್ತು ಸರಬರಾಜು ಇಲ್ಲದಿರುವುದು ಕಟ್ಟಡ, ಮನೆಗಳ ನಿರ್ಮಾಣಕ್ಕೆ ಆರಂಭದಲ್ಲಿ ತುಸು ಹೊಡೆತ ಬಿದ್ದಿದೆ. ಇಲ್ಲಿ ತನಕ ಮನೆಗಳಲ್ಲಿ ಉಳಿದುಕೊಂಡಿದ್ದ ನಾಗರಿಕರು ಅಂಗಡಿಗಳು ತೆರೆಯುತ್ತಲೇ ಮಳೆಗಾಲಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿ ಕೊಳ್ಳಲು ಆರಂಭಿಸಿದ್ದಾರೆ. ಮನೆ ದುರಸ್ತಿ ಇನ್ನಿತರ ಚಟುವಟಿಕೆಗಳು ನಡೆಯುತ್ತಿವೆ.
ರಾಸಾಯನಿಕ ರಸಗೊಬ್ಬರ, ಎಪಿಎಂಸಿ ಮಾರ್ಕೆಟ್ ಸಂಪೂರ್ಣ ತೆರೆದಿರುವುದರಿಂದ ಕೃಷಿಕರು ಕೃಷಿ ಚಟುವಟಿಕೆಗಳಿಗೆ ಬೇಕಿರುವ ಕಚ್ಚಾ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಕೃಷಿ ಕ್ಷೇತ್ರ ನಿಧಾನಗತಿಯಲ್ಲಿ ಸುಧಾರಿಸುತ್ತಿದೆ. ಕೃಷಿ ನೀರಾವರಿ, ಕೀಟನಾಶಕ ಸಿಂಪಡಣೆಯಂತಹ ಚಟುವಟಿಕೆಗಳು ಆರಂಭವಾಗಿವೆ.
ಮೀನುಗಾರಿಕಾ ವಲಯಕ್ಕೆ ಅನುಮತಿ ದೊರೆತು ನಾಡದೋಣಿ ಮೀನುಗಾರಿಕೆ ಪುನಾರರಂಭಗೊಂಡಿವೆ. ಯಾಂತ್ರಿಕ ಮೀನುಗಾರಿಕೆಗೆ ಅವಕಾಶ ಸಿಗದೆ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಾರಿಕೆಗೆ ವೇಗ ಸಿಕ್ಕಿಲ್ಲ. ಈ ಉದ್ಯಮಕ್ಕೆ ಅನುಕೂಲವಾಗುವ ವಾತಾವರಣ ಕಲ್ಪಿಸಿಕೊಡಬೇಕೆಂದು ಮೀನುಗಾರ ಫೆಡರೇಶನ್ ಒತ್ತಾಯಿಸಿದೆ.
ಕಚೇರಿ ಕೆಲಸಕ್ಕೆ ತಾಂತ್ರಿಕ ಸಮಸ್ಯೆ ಅಡ್ಡಿ
ಸರಕಾರಿ ಕಚೇರಿ, ಪಶುಸಂಗೋಪನೆ, ಬ್ಯಾಂಕ್ ಗಳಲ್ಲಿ ಶೇ.35ರಷ್ಟು ಪ್ರಮಾಣದ ಸಿಬಂದಿ ಕೆಲಸ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಪ್ರಮುಖ ಪಾತ್ರ ವಹಿಸುವ ಕಂದಾಯ, ಲೋಕೋಪಯೋಗಿ. ಮೆಸ್ಕಾಂ ಇಲಾಖೆ ಮತ್ತಿತರ ಮೂಲಸೌಕರ್ಯಕ್ಕೆ ಸಂಬಂಧಿಸಿ ಕೆಲಸ ನಿರ್ವಹಿಸುವ ಇಲಾಖೆಗಳು ಮುಂಗಾರು ಪೂರ್ವಸಿದ್ಧತೆಗಳ ಕಡೆಗೆ ಗಮನಹರಿಸುತ್ತಿವೆ. ಸರಕಾರಿ ಕಚೇರಿಗಳಲ್ಲಿ ಇಂಟರ್‌ನೆಟ್, ಸರ್ವರ್ ಇತ್ಯಾದಿ ತಾಂತ್ರಿಕ ತೊಂದರೆಗಳು ನಿಗದಿತ ವೇಗ ಮಿತಿಯಲ್ಲಿ ಸಾಗುವುದಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಿಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ತೆರೆದುಕೊಂಡ ರಿಪೇರಿ ಅಂಗಡಿ
ಲಾರಿ, ದ್ವಿಚಕ್ರ ವಾಹನ ರಿಪೇರಿ ಮಾಡುವ ಗ್ಯಾರೇಜ್‌ಗಳು, ಇಲೆಕ್ಟ್ರಿಕ್ ಅಂಗಡಿಗಳು ಕಾರ್ಯಾರಂಭಿಸಿವೆ. ಬೆಳಗ್ಗೆ 7ರಿಂದ 11 ಗಂಟೆ ತನಕ ಮಾತ್ರ ದಿನಸಿ ಹಾಗೂ ಸಣ್ಣಪುಟ್ಟ ಆವಶ್ಯಕ ಸಾಮಗ್ರಿ ಅಂಗಡಿಗಳು ತೆರೆದುಕೊಂಡಿದ್ದವು. ಈ ಅವಧಿಯಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ಬೆಳಗ್ಗಿನ ಹೊತ್ತು ಜನಸಂಖ್ಯೆ ಜಾಸ್ತಿ ಇತ್ತು. ವಾಹನ ದಟ್ಟಣೆಯೂ ಇತ್ತು.
ಮೇ 2ಕ್ಕೆ ನಿರ್ಧಾರ
ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದ್ದರೂ, ಲಾಕ್‌ಡೌನ್ ನಿಗದಿಪಡಿಸಿರುವ ಮೇ 3ರ ಗಡುವು ತನಕ ಇದೇ ರೀತಿ ಮುಂದುವರಿಯಲಿದೆ. ಅಲ್ಲಿ ತನಕ ಯಾವುದೇ ವಿನಾಯಿತಿ ಇರುವುದಿಲ್ಲ. ಮೇ 2ರಂದು ಸರಕಾರ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಅದರ ಆಧಾರದಲ್ಲಿ ಮುಂದಿನ ನಿರ್ಧಾರಗಳನ್ನು ತೆಗೆದು ಕೊಳ್ಳಲಾಗುತ್ತದೆ.
-ಜಿ. ಜಗದೀಶ್,
ಜಿಲ್ಲಾಧಿಕಾರಿಗಳು, ಉಡುಪಿ