
ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ನಿಧನ
Team Udayavani, Mar 28, 2023, 5:39 PM IST

ಉಡುಪಿ: ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿ, ಕೋಟ ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಅಧ್ಯಕ್ಷೆಯಾಗಿದ್ದ ಮಾಲಿನಿ ಮಲ್ಯ (72 ವರ್ಷ) ಅವರು ಇಂದು ನಿಧನರಾಗಿದ್ದಾರೆ.
ಸಾಲಿಗ್ರಾಮದಲ್ಲಿದ್ದ ಮಾಲಿನಿ ಮಲ್ಯ ಅವರನ್ನು ಇತ್ತೀಚಿಗಷ್ಟೆ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ದೀರ್ಘ ಕಾಲದಿಂದಲೂ ಪಾರ್ಕಿನ್ಸನ್ ರೋಗ ದಿಂದ ಬಳಲುತ್ತಿದ್ದ ಮಾಲಿನಿ ಮಲ್ಯ ಅವರು ಬೆಂಗಳೂರು ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾಗಿದ್ದಾರೆ.
ಶಿವರಾಮ ಕಾರಂತರ ಕೊನೆಯ ದಿನಗಳವರೆಗೆ ಜೊತೆಗಿದ್ದ ಆಪ್ತ ಸಹಾಯಕಿ ಮಾಲಿನಿ ಮಲ್ಯ ಅವರು ಸಾಲಿಗ್ರಾಮದಲ್ಲಿ ಕಾರಂತ ಸ್ಮೃತಿ ಭವನ ನಿರ್ಮಿಸಿ ಕಾರಂತ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು. ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿದ ಅವರು, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು.
ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಉದ್ಯೋಗಿಯಾಗಿದ್ದ ಮಾಲಿನಿ ಅವರು, ಸ್ವತಃ ಕಾದಂಬರಿಗಾರ್ತಿಯಾಗಿದ್ದರು. ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ಲೋಕ, ಬಾಲಪ್ರಪಂಚ-3’ ಕೃತಿಗಳನ್ನು ಅವರು ರಚಿಸಿದ್ದಾರೆ.
ಟಾಪ್ ನ್ಯೂಸ್
