ಎಚ್‌ಐವಿ ಸೋಂಕಿತರ ಪ್ರಮಾಣ ಗಣನೀಯ ಇಳಿಕೆ
Team Udayavani, Dec 1, 2022, 10:24 AM IST
ಉಡುಪಿ: ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ. 2008-09ನೇ ಸಾಲಿನಲ್ಲಿ ಶೇ.7.90ರಷ್ಟಿದ್ದ ಪಾಸಿಟಿವಿಟಿ ದರ 2022-23ನೇ ಸಾಲಿನಲ್ಲಿ ಶೇ.0.23ಕ್ಕೆ ಇಳಿಕೆ ಕಂಡಿದೆ.
ಯಾವ ಗರ್ಭಿಣಿಯರಿಗೂ ಈ ವರ್ಷ ಸೋಂಕು ತಗಲಿಲ್ಲ. 3 ತಿಂಗಳಿಗೊಮ್ಮೆ ಪರೀಕ್ಷೆ ನಡೆಸುವುದರಿಂದ ತಾಯಿಯಿಂದ ಮಕ್ಕಳಿಗೆ ಸೋಂಕು ಹರಡುವುದು ಕಡಿಮೆಯಾಗಿದೆ. ಸೋಂಕಿತರಿಗೆ ಎಆರ್‌ಟಿ ಕೇಂದ್ರಗಳ ಮೂಲಕ ಸೇವೆ ಒದಗಿಸಲಾಗುತ್ತಿದೆ. ಜಿಲ್ಲೆಯ ಉಡುಪಿ, ಕುಂದಾಪುರ, ಕೆಎಂಸಿ ಮಣಿಪಾಲದಲ್ಲಿ ಎಆರ್‌ಟಿ ಕೇಂದ್ರಗಳಿವೆ. ಇದರಲ್ಲಿ ಒಟ್ಟು 3,981 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಪಾಸಣೆ ಹೆಚ್ಚಳ
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಚ್‌ಐವಿ ತಪಾಸಣೆ ನಡೆಸಲಾಗುತ್ತಿದೆ. ಮುಖ್ಯವಾಗಿ ರಕ್ತದಾನದ ಸಂದರ್ಭ ರಕ್ತವನ್ನು ಪರೀಕ್ಷೆಗೊಳಪಡಿಸುವಾಗ ಈ ವರ್ಷ ಒಟ್ಟು 9 ಮಂದಿಗೆ ಪಾಸಿಟಿವ್ ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲಿ 56,064 ತಪಾಸಣೆಗೆ ಗುರಿ ನಿಗದಿಪಡಿಸಲಾಗಿತ್ತು. 58,801 ಮಂದಿಯನ್ನು ತಪಾಸಣೆ ಮಾಡುವ ಮೂಲಕ ಶೇ.104 ಪ್ರಗತಿ ಸಾಧಿಸಲಾಗಿದೆ. ದಾಖಲಾದ ಪಾಸಿಟಿವಿಟಿ ಪ್ರಮಾಣ ಶೇ.0.23ರಷ್ಟು ದಾಖಲಾಗಿದೆ.
ಸೋಂಕಿತರಿಗೆ ಸರಕಾರದ ಸೌಲಭ್ಯಗಳು
ಎಚ್‌ಐವಿ ಸೋಂಕಿತರಿಗೆ ಸರಕಾರದ ಮೂಲಕ ಹಲವಾರು ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಮುಖ್ಯವಾಗಿ ಅಂತ್ಯೋದಯ ಯೋಜನೆ, ಬಿಪಿಎಲ್ ಪಡಿತರ ಚೀಟಿ, ವಿಶೇಷ ಪಾಲನ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ, ಎಆರ್‌ಟಿ ಚಿಕಿತ್ಸೆಗಾಗಿ ಪ್ರಯಾಣ ಭತ್ತೆ, ಉಚಿತ ರಕ್ತಪರೀಕ್ಷೆ ಪತ್ತು ಚಿಕಿತ್ಸೆ, ಮಾಹಿತಿ ಹಕ್ಕಿನಡಿ ವಿದ್ಯಾಭ್ಯಾಸ, ಉನ್ನತ ವಿದ್ಯಾಭ್ಯಾಸ ಹಾಗೂ ವಿದ್ಯಾರ್ಥಿವೇತನ, ಧನಶ್ರೀ ಯೋಜನೆ, ತಾಂತ್ರಿಕ ಶಿಕ್ಷಣ ಸೌಲಭ್ಯ, ಉಚಿತ ಕಾನೂನು ಹಾಗೂ ರಕ್ತದ ಸೇವೆಗಳನ್ನು ನೀಡಲಾಗುತ್ತದೆ.
ವಿವಿಧ ಜಾಗೃತಿ ಕಾರ್ಯಕ್ರಮ
ಎಚ್‌ಐವಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಡಿಸೆಂಬರ್ ತಿಂಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಅರಿವು ಮೂಡಿಸ ಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 45 ರೆಡ್ ರಿಬ್ಬನ್ ಕಾಲೇಜುಗಳಿದ್ದು ಅಲ್ಲಿ ಮಾಹಿತಿ ಶಿಬಿರ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಕುಂದಾಪುರ, ಕಾರ್ಕಳದಲ್ಲಿಯೂ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. 215 ಶಾಲೆಯ ಮಕ್ಕಳಿಗೆ ಎಚ್‌ಐವಿ ಏಡ್ಸ್ ಜಾಗೃತಿ ಬಗ್ಗೆ ತರಬೇತಿ ನೀಡಲಾಗು ತ್ತಿದೆ ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು ಎಸ್.ವಿ.
48 ಮಂದಿ ಸಾವು
ಎಚ್‌ಐವಿ ಏಡ್ಸ್‌ನಿಂದ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 48 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ 90 ಮಂದಿ ಸಾವನ್ನಪ್ಪಿದ್ದರು. ಬೆಂಗಳೂರು, ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಸೋಂಕು ಕಂಡುಬರುತ್ತಿವೆ. 8 ಜಿಲ್ಲೆಗಳು ಮಧ್ಯಮ ಸ್ಥಾನದಲ್ಲಿವೆ. ಉಡುಪಿ ಸಹಿತ 17 ಜಿಲ್ಲೆಗಳು ತಳಮಟ್ಟದ (ಲೋ) ಹಂತದಲ್ಲಿವೆ. ಜಿಲ್ಲೆಯಲ್ಲಿ ಈ ವರ್ಷ ಕಂಡುಬಂದ 137 ಪಾಸಿಟಿವ್ ಪ್ರಕರಣದಲ್ಲಿ 49 ಮಂದಿ ಹೊರಜಿಲ್ಲೆಯವರು. 3 ಮಂದಿ ಹೊರರಾಜ್ಯದವರಾಗಿದ್ದಾರೆ.
ಜಿಲ್ಲಾದ್ಯಂತ ಜಾಗೃತಿ: ಎಚ್‌ಐವಿ ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಲಸೆ ಕಾರ್ಮಿಕರು ಇರುವ ಪ್ರದೇಶಗಳನ್ನು ಗುರುತಿಸಿ ಆ ಭಾಗದಲ್ಲಿ ಹೆಚ್ಚು ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ ಸೋಂಕಿತರ ಪ್ರಮಾಣ ಇಳಿಮುಖವಾಗಿದೆ. ಇದೇ ರೀತಿ ಮುಂದುವರಿಸಲು ಆರೋಗ್ಯ ಇಲಾಖೆ ಎಲ್ಲ ರೀತಿಯ ಸಿದ್ಧತೆ ನಡೆಸಿದೆ. –ಡಾ| ಎಚ್. ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ
ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಪಠಣ
ಮೊಬೈಲ್ ಬಳಸಿ ದೃಷ್ಟಿ ಕಳೆದುಕೊಂಡ ಮಹಿಳೆ:ಏನಿದು ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್
ಕ್ಯಾಂಪ್ಕೋ ಲಿಮಿಟೆಡ್; ರೈತರ, ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಸಹಕಾರಿ ಸಂಸ್ಥೆ…
ಶಿವಾಜಿ, ಬಸವೇಶ್ವರ, ಬುದ್ಧ, ಗಾಂಧೀಜಿಯನ್ನೇ ಬಿಡದವರು ನನ್ನನ್ನು ಬಿಡುತ್ತಾರಾ: ಕುಮಾರಸ್ವಾಮಿ
ಪ್ರಕಾಶ್ ರಾಜ್ ಹೇಳಿಕೆಗೆ ʻದಿ ಕಾಶ್ಮೀರ್ ಫೈಲ್ಸ್ʼ ನಿರ್ದೇಶಕ ಕಿಡಿ