
ಸರಕಾರಿ ಬಸ್‌ಗಳನ್ನೇ ಕಾಣದ ಕಾರ್ಕಳದ ಹಳ್ಳಿಗಳು!
ಇನ್ನೂ ಈಡೇರದ ಗ್ರಾಮೀಣರ ಬೇಡಿಕೆ
Team Udayavani, Sep 17, 2020, 6:37 AM IST

ಸಾಂದರ್ಭಿಕ ಚಿತ್ರ
ಕಾರ್ಕಳ: ಸಂಪರ್ಕ ವ್ಯವಸ್ಥೆಯಲ್ಲಿ ದೇಶ ನಾಗಾಲೋಟದಲ್ಲಿ ಓಡುತ್ತಿದ್ದರೂ ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶಗಳು ಇನ್ನೂ ಸರಕಾರಿ ಬಸ್‌ಗಳನ್ನೇ ಕಂಡಿಲ್ಲ! ಇದು ಅಚ್ಚರಿ ಎನಿಸಿದರೂ ನಿಜ. ಈ ಭಾಗದ 55 ಹಳ್ಳಿಗಳಿಗೆ ಉತ್ತಮ ರಸ್ತೆ ಇದ್ದರೂ ಸರಕಾರಿ ಬಸ್ ಸಂಚಾರವಿಲ್ಲ.
1912ರಲ್ಲಿ ಕಾರ್ಕಳ ತಾ| ಆಗಿ ಅಸ್ತಿತ್ವಕ್ಕೆ ಬಂದಿದ್ದು, ನೂರು ವರ್ಷವೂ ತುಂಬಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರ 1952ರ ಮದ್ರಾಸ್ ಸರಕಾರದಿಂದ ನಾಮ ನಿರ್ದೇಶನಗೊಂಡ ಅನಂತರದಲ್ಲಿ 14 ಚುನಾಯಿತ ಶಾಸಕರನ್ನು ಕಂಡಿದೆ. 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ ವೀರಪ್ಪ ಮೊಲಿ ರಾಜ್ಯದ ಮುಖ್ಯಮಂತ್ರಿ ಕೂಡ ಆಗಿದ್ದರು. ಆದರೂ ಗ್ರಾಮೀಣ ಸರಕಾರಿ ಬಸ್ ಮಾತ್ರ ಇಲ್ಲಿಗೆ ಬಂದಿಲ್ಲ.
ಖಾಸಗಿ ಬಸ್, ಬಾಡಿಗೆ ವಾಹನಗಳು
ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದ ಅವಧಿಯಲ್ಲಿ ಉಡುಪಿ-ಕಾರ್ಕಳ ನಡುವೆ ಕೆಲ ನರ್ಮ್ ಬಸ್ ಓಡಾಟ, ಹೆದ್ದಾರಿಯಲ್ಲಿ ಓಡಾಡುವ ಬಸ್‌ಗಳನ್ನು ಬಿಟ್ಟರೆ ಬೇರೆ ಸರಕಾರಿ ಬಸ್ ವ್ಯವಸ್ಥೆ ತಾಲೂಕಿನಲ್ಲಿಲ್ಲ. ದ.ಕ. ಮತ್ತು ಉಡುಪಿ ಜಿಲ್ಲೆ ಗಡಿಭಾಗ ಕಾರ್ಕಳ-ಮಂಗಳೂರು ನಡುವೆ ಮೂಡುಬಿದಿರೆ, ಪಡುಬಿದ್ರಿ ಎಂಬ ಉಪಯುಕ್ತ ಮಾರ್ಗದಲ್ಲೂ ಸರಕಾರಿ ಬಸ್‌ಗಳು ಸಂಚರಿಸಲಿಲ್ಲ. ನಗರದಿಂದ 1.5 ಕಿ.ಮೀ. ದೂರದಲ್ಲಿರುವ ಬಂಡಿಮಠ ಬಸ್ ನಿಲ್ದಾಣದಲ್ಲಿ ಅಂತರ್‌ಜಿಲ್ಲೆ, ನಗರ ಪ್ರದೇಶಗಳಿಗೆ ತೆರಳುವ ಬಸ್‌ಗಳು ನಿಲ್ಲುತ್ತವೆ. ಜನ ಅಲ್ಲೇ ಹತ್ತಿ ಇಳಿಯಬೇಕು. ಇಲ್ಲಿ ಎಲ್ಲದಕ್ಕೂ ಖಾಸಗಿ ಬಸ್, ಬಾಡಿಗೆ ವಾಹನಗಳ ಬಳಕೆಯೇ ರೂಢಿಯಲ್ಲಿದೆ.
ರಸ್ತೆ ಇದ್ದರೇನು, ಬಸ್ ಬರಬೇಕಲ್ಲ
ಹಲವು ಗ್ರಾಮಗಳಲ್ಲಿ ಉತ್ತಮ ರಸ್ತೆಗಳಿದ್ದರೂ ಸರಕಾರಿ ಬಸ್ ಇಲ್ಲದಿರುವುದು ಜನರನ್ನು ಭ್ರಮ ನಿರಸನಗೊಳಿಸಿದೆ. ಕೆಲವು ಗ್ರಾಮೀಣ ಭಾಗದಲ್ಲಿ ಬಸ್ ಸೌಕರ್ಯವೆಂಬುದು ಗಗನಕುಸುಮ. ನೂರಾರು ಕೋಟಿ ರೂ.ಗಳ ಉದ್ಯಮ ನಡೆಸುತ್ತಿರುವ ಕೆಎಸ್‌ಆರ್‌ಟಿಸಿ ಇಲಾಖೆ ಮುಖ್ಯ ಉದ್ದೇಶ ಸೇವೆ ಮತ್ತು ಸೌಲಭ್ಯ. ಆದರೆ ಗ್ರಾಮೀಣ ಸಾರಿಗೆ ಸೇವೆಯನ್ನು ನಿರ್ಲಕ್ಷಿಸಲಾಗಿದೆ. ಕಾರ್ಕಳ ಎಲ್ಲ ಕ್ಷೇತ್ರಗಳಲ್ಲಿ ಮುಂದಿ ದ್ದರೂ ಗ್ರಾಮೀಣ ಸಾರಿಗೆ ವ್ಯವಸ್ಥೆಯಲ್ಲಿ ಹಿಂದುಳಿ ದಿದೆ ಎನ್ನುವ ಅಸಮಾಧಾನ ಇಲ್ಲಿನವರದ್ದು.
ಈಗ 20 ಬಸ್ ಮಾತ್ರ
ಲಾಕ್‌ಡೌನ್‌ಗಿಂತ ಹಿಂದೆ ಗ್ರಾಮಾಂತರಕ್ಕೆ 70 ಬಸ್‌ಗಳು ಸಂಚಾರ ಬೆಳೆಸುತ್ತಿದ್ದವು. ಈಗ 20 ಮಾತ್ರವಿದೆ. ಖಾಸಗಿ ಬಸ್‌ಗಳಿದ್ದರೂ ಅವುಗಳು ಎಲ್ಲ ಮಾರ್ಗಗಳಲ್ಲಿ ಎಲ್ಲ ಸಂದರ್ಭಗಳಲ್ಲೂ ಸಂಚರಿಸುವುದಿಲ್ಲ. ಸಂಜೆ 6 ಗಂಟೆ ಬಳಿಕವಂತೂ ಅಪರೂಪವೇ. ಶನಿವಾರ ಮತ್ತು ರವಿವಾರ ರಜಾ ದಿನಗಳಲ್ಲಿ ಕೆಲವು ಕಡೆಗಳಿಗೆ ಬಸ್‌ಗಳು ಇರುವುದಿಲ್ಲ. ಕಾರ್ಯಕ್ರಮಗಳು ಹೆಚ್ಚಿದ್ದ ದಿನಗಳಲ್ಲಿ ಜನರೂ ತೊಂದರೆ ಅನುಭವಿಸುತ್ತಾರೆ.
ಪೊಲೀಸರನ್ನು ಇಳಿಸಲು ಬಸ್ ಬರುತ್ತದೆ!
ಗ್ರಾಮದ ಜನತೆ ಗ್ರಾಮೀಣ ಬಸ್ ಮುಖ ನೋಡುವುದೇ ಅಪರೂಪ. ನಗರಕ್ಕೆ ಹೋದಾಗೊಮ್ಮೆ ಬಿಟ್ಟರೆ, ಗ್ರಾಮದಲ್ಲಿ ಚುನಾವಣೆ ಇದ್ದಾಗ ಪೊಲೀಸರನ್ನು ಇಳಿಸಲು ಮಾತ್ರ ಬಸ್ ಬರುತ್ತದೆ ಎನ್ನುತ್ತಾರೆ ನಕ್ರೆಯ ಸಿದ್ಧಪ್ಪ ಅವರು. ನೂರಾರು ಕೋ.ರೂ. ಉದ್ಯಮ ನಡೆಸುತ್ತಿರುವ ಕೆಎಸ್‌ಆರ್‌ಟಿಸಿ ಇನ್ನೂ ಗ್ರಾಮೀಣ ಭಾಗದ ಜನರಿಗೆ ಬಸ್ ಒದಗಿಸುವಲ್ಲಿ ವಿಫಲವಾಗಿದೆ.
ಎಲ್ಲಿಗೆಲ್ಲ ಬಸ್ ಅಗತ್ಯ?
ನಕ್ಸಲ್ ಪೀಡಿತ ಪ್ರದೇಶಗಳಾದ ಕಬ್ಬಿನಾಲೆ, ಸೀತಾನದಿ, ಮುಟ್ಲುಪ್ಪಾಡಿ, ಎಳ್ಳಾರೆ, ಕೆರ್ವಾಶೆ, ಶಿರ್ಲಾಲು, ಅಂಡಾರು, ದುರ್ಗಾ, ಮಲೆಬೆಟ್ಟು,, ಮಾಳ, ನಕ್ರೆ, ಕುಂಟಾಡಿ, ಪಳ್ಳಿ, ಬೋಳ, ಸೂಡ, ರೆಂಜಾಳ, ಇರ್ವತ್ತೂರು, ಕಾಂತಾವರ, ನಿಟ್ಟೆ, ಪರಪ್ಪಾಡಿ, ಈದು, ಕಡ್ತಲ, ಕುಕ್ಕುಜೆ, ಚಿಕ್ಕಲ್‌ಬೆಟ್ಟು, ಯರ್ಲಪ್ಪಾಡಿ ಈ ಹಳ್ಳಿಗಳಿಗೆ ಪ್ರಮುಖವಾಗಿ ಗ್ರಾಮೀಣ ಸರಕಾರಿ ಬಸ್ ವ್ಯವಸ್ಥೆ ಅಗತ್ಯವಾಗಿದ್ದು ಬೇಡಿಕೆಯೂ ಇದೆ.
55 ಹಳ್ಳಿಗಳಿಗೆ ಬೇಕಿದೆ ಸರಕಾರಿ ಬಸ್ ಸಂಪರ್ಕ
20 ಸದ್ಯ ಗ್ರಾಮಾಂತರಕ್ಕೆ ಸಂಚರಿಸುವ ಬಸ್‌ಗಳ ಸಂಖ್ಯೆ
ಪ್ರಸ್ತಾವ ಸಲ್ಲಿಸಿದ್ದೇವೆ
ಗ್ರಾಮೀಣ ಭಾಗಕ್ಕೆ ಬಸ್ ಆರಂಭಿಸುವಂತೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಖಾಸಗಿ ಬಸ್ ಸಮಯಕ್ಕೆ ಹೊಂದಿಸಿಕೊಂಡು ಸರಕಾರಿ ಬಸ್ ಕೂಡ ಓಡಿಸಬೇಕಿದೆ. ಅಧಿಕಾರಿಗಳು, ಇಲಾಖೆ ಈ ಬಗ್ಗೆ ಆಸಕ್ತಿವಹಿಸಬೇಕು.
-ವಿ. ಸುನಿಲ್‌ಕುಮಾರ್, ಶಾಸಕರು ಕಾರ್ಕಳ
ಜಿಲ್ಲಾಮಟ್ಟದಲ್ಲಿ ನಿರ್ಧಾರ
ಗ್ರಾಮಾಂತರ ಬಸ್ ಓಡಾಟ ಬೇಡಿಕೆಗಳು ಆಯಾ ಜಿಲ್ಲಾಮಟ್ಟದಲ್ಲಿ ನಿರ್ಧಾರವಾಗುತ್ತದೆ. ಪ್ರಸ್ತಾವ ಸಲ್ಲಿಕೆಯಾಗಿದ್ದರೆ ಜಿಲ್ಲಾವಾರು ಸಾರಿಗೆ ಅಧಿಕಾರಿಗಳು ಈ ಬಗ್ಗೆ ಸಾಧಕ ಬಾಧಕ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತಾರೆ.
– ಹೇಮಂತ್ ಕುಮಾರ್, ಅಪರ ಸಾರಿಗೆ ಆಯುಕ್ತರು, ಕೆಎಸ್‌ಆರ್‌ಟಿಸಿ, ಬೆಂಗಳೂರು
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
