ಕುಂದಾಪುರ: ಕನ್ನಡಿಗನ ಪರ ತೀರ್ಪಿತ್ತ ಗೋವಾ ಆಯೋಗ
Team Udayavani, Dec 9, 2022, 6:46 AM IST
ಕುಂದಾಪುರ: ಮೀನು ಮರಿ ಖರೀದಿಸಿ ಸಾಗಾಣಿಕೆ ವೇಳೆ ಮೃತಪಟ್ಟಿದೆ ಎಂದು ಪರಿಹಾರ ಪಡೆಯುವ ವ್ಯಾಜ್ಯದಲ್ಲಿ ಮೀನು ಮರಿ ನೀಡಿದ ವ್ಯಕ್ತಿಯ ಪರವಾಗಿ ಗೋವಾ ಆಯೋಗ ತೀರ್ಪು ನೀಡಿದೆ.
ಬ್ರಹ್ಮಾವರ ತಾಲೂಕು ಕೋಡಿ ಗ್ರಾಮದ ಮೀನು ಸಾಕಾಣಿಕೆ ಉದ್ಯಮಿಯಿಂದ ಗೋವಾದ ಮಡಗಾಂವ್‌ನ ನಿವಾಸಿ ಸುಮಾರು 2.40 ಲಕ್ಷ ರೂ.ಮೌಲ್ಯದ 2 ಸಾವಿರ ಕೆಂಬೇರಿ ಮೀನಿನ ಮರಿಗಳನ್ನು ಖರೀದಿಸಿ ಹಣ ಪಾವತಿಸಿದ್ದರು. ಮೀನಿನ ಮರಿಗಳನ್ನು ಕುಂದಾಪುರದಿಂದ ಮಡಗಾಂವ್‌ಗೆ ತಲುಪಿಸುವಾಗ ದಾರಿಯಲ್ಲಿ ಮೃತಪಟ್ಟಿದ್ದವು. ತನ್ನ ಹಣ ವಾಪಾಸು ನೀಡುವಂತೆ ಮರಿ ಸರಬರಾಜು ಮಾಡಿದವರಲ್ಲಿ ಕೇಳಿದ್ದು ವಾಪಾಸು ನೀಡದ ಕಾರಣ ಆರ್ಥಿಕ ನಷ್ಟ, ಮಾನಸಿಕ ವೇದನೆ, ವ್ಯವಹಾರಕ್ಕಾದ ನಷ್ಟ ಹಾಗೂ ಇತರ ಖರ್ಚು ಸೇರಿ 5 ಲಕ್ಷ ರೂ. ಪರಿಹಾರ ಕೋರಿ ಮಡಗಾಂವ್‌ನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ವಾದ ವಿವಾದ ಆಲಿಸಿದ ಮಡಗಾಂವ್‌ನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ದೂರನ್ನು ವಜಾಗೊಳಿಸಿ 15 ಸಾವಿರ ರೂ. ದಂಡ ವಿಧಿ ಸಿ ಅದನ್ನು ಪ್ರತಿವಾದಿಗೆ ಪಾವತಿಸುವಂತೆ ಆದೇಶಿಸಿತ್ತು.
ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಆದೇಶದ ವಿರುದ್ಧ ದೂರುದಾರರು ಗೋವಾ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆಯೋಗ ಮೇಲ್ಮನವಿಯನ್ನು ತಿರಸ್ಕರಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಆದೇಶವನ್ನು ಎತ್ತಿ ಹಿಡಿದು ಆದೇಶಿಸಿದೆ. ದೂರುದಾರರು ಮೀನಿನ ಮರಿಗಳನ್ನು ಕೋಡಿಯ ಉದ್ಯಮಿಯೇ ಗೋವಾಗೆ ತಲುಪಿಸಿದ್ದನ್ನು ಸಾಬೀತುಪಡಿಸಲು ವಿಫಲರಾಗಿದ್ದು, ದೂರು ನೀಡಿದವರೇ ಕೊಂಡೊಯ್ದಿರುವುದಾಗಿ ಉದ್ಯಮಿ ಪ್ರತಿಪಾದಿಸಿದ್ದನ್ನು ಆಯೋಗ ಪರಿಗಣಿಸಿದೆ. ಮೀನು ಸಾಕಾಣಿಕೆ ಮಾಡಿದ ವ್ಯಕ್ತಿಯ ಪರವಾಗಿ ಜಿಲ್ಲಾ ಹಾಗೂ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಕುಂದಾಪುರದ ವಕೀಲರಾದ ಶ್ಯಾಮ್ ಸುಂದರ್ ನಾಯರಿ ಹಾಗೂ ನೀಲ್ ಬ್ರಿಯಾನ್ ಪಿರೇರಾ ವಾದಿಸಿದ್ದರು.