
ಸಿಎನ್‌ಜಿ ಗ್ಯಾಸ್ ಕೊರತೆ; ರಿಕ್ಷಾ ಚಾಲಕರ ಪರದಾಟ
ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ ಸಿಎನ್‌ಜಿ ಗ್ಯಾಸ್
Team Udayavani, May 31, 2023, 3:55 PM IST

ಕುಂದಾಪುರ: ರಾಜ್ಯದಲ್ಲಿ ಸಿಎನ್‌ಜಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆದರೆ ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಸಿಲಿಂಡರ್‌ಗಳಿಗೆ ಅಗತ್ಯದಷ್ಟು ಗ್ಯಾಸ್ ಪೂರೈಕೆಯಾಗದೇ ಇರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಮುಖ್ಯವಾಗಿ ರಿಕ್ಷಾ ಚಾಲಕರು ಪರದಾಟ ನಡೆಸುವಂತಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೋಟೇಶ್ವರ, ಉಡುಪಿ, ಮಲ್ಪೆ, ಬ್ರಹ್ಮಾವರ ಸೇರಿದಂತೆ ಕೆಲವೇ ಕೆಲವು ಕಡೆಗಳಲ್ಲಿ ಸಿಎನ್‌ಜಿ ಪೆಟ್ರೋಲ್ ಬಂಕ್‌ಗಳಿವೆ. ಇನ್ನು ಕಾರ್ಕಳ, ಮುಳ್ಳಿಕಟ್ಟೆಯಲ್ಲಿ ಈಗಷ್ಟೆ ಆರಂಭವಾಗುತ್ತಿದೆ. ಆದರೆ ಇರುವಂತಹ ಬಹುತೇಕ ಎಲ್ಲ ಸಿಎನ್‌ಜಿ ಪೆಟ್ರೋಲ್ ಬಂಕ್‌ಗಳಲ್ಲಿ ಬೇಡಿಕೆಯಷ್ಟು ಪೂರೈಕೆಯಾಗದೇ ಇರುವುದು ಸಮಸ್ಯೆಯಾಗಿದೆ.
ರಿಕ್ಷಾಗಳ ಉದ್ದುದ್ದ ಸಾಲು
ಸಿಎನ್‌ಜಿ ಪೆಟ್ರೋಲ್ ಬಂಕ್‌ಗಳಿಗೆ ಪ್ರತಿ ದಿನ 2-3 ಲೋಡ್‌ಗಳು ಪೂರೈಕೆಯಾಗುತ್ತಿದೆ. ಆದರೂ ಬಂದಷ್ಟೇ ಬೇಗ ಖಾಲಿಯಾಗುತ್ತಿದೆ. ಇದರಿಂದ ಬಂಕ್‌ಗಳಲ್ಲಿ ರಿಕ್ಷಾ ಚಾಲಕರು ಸಿಎನ್‌ಜಿ ಗ್ಯಾಸ್ ಲೋಡುಗಳು ಬರುವುದನ್ನೇ ಕಾಯುವಂತಾಗಿದೆ. ಬಂಕ್‌ಗಳ ಬಳಿ ರಿಕ್ಷಾಗಳ ಉದ್ದುದ್ದ ಸಾಲುಗಳು ಈಗ ಮಾಮೂಲಿಯಾಗಿವೆ. ಬಂಕ್‌ಗಳೇ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿದ್ದು, ಅದರಲ್ಲಿ ಸಿಎನ್‌ಜಿ ಲೋಡು ಬರುತ್ತಿದೆ ಅನ್ನುವ ಮಾಹಿತಿ ನೀಡಲಾಗುತ್ತಿದೆ. ಆದರೂ ರಿಕ್ಷಾಗಳ ಸಾಲು ಮಾತ್ರ ಕಮ್ಮಿಯಾಗುತ್ತಿಲ್ಲ.
4,000 ಸಾವಿರಕ್ಕೂ ಮಿಕ್ಕಿ ವಾಹನ
ಉಡುಪಿ ಜಿಲ್ಲೆಯಲ್ಲಿ ರಿಕ್ಷಾ, ಕಾರು ಸಹಿತ ಸಿಎನ್‌ಜಿ ವಾಹನಗಳು ಅಂದಾಜು 4000 ಸಾವಿರಕ್ಕೂ ಮಿಕ್ಕಿ ಇವೆ ಎನ್ನುವ ಮಾಹಿತಿಯಿದೆ. ಇದರಲ್ಲಿ ಬಹುಪಾಲು ರಿಕ್ಷಾಗಳೇ ಆಗಿವೆ. ಇಷ್ಟೊಂದು ಸಂಖ್ಯೆಯ ವಾಹನಗಳಿದ್ದರೂ, ಸೀಮಿತ ಸಂಖ್ಯೆಯ ಪೆಟ್ರೋಲ್ ಬಂಕ್‌ಗಳಿರುವುದು ಸಹ ಸಮಸ್ಯೆಯಾಗಿದೆ. ಕೊಲ್ಲೂರು, ಹೆಮ್ಮಾಡಿ, ಸಿದ್ದಾಪುರ, ಹಾಲಾಡಿಯಂತಹ ಭಾಗಗಳಿಂದ ಬರುವ ರಿಕ್ಷಾ ಚಾಲಕರು, ಸಿಎನ್‌ಜಿ ಗ್ಯಾಸ್ ತುಂಬಿಸಿಕೊಂಡು ತಮ್ಮ ಊರಿಗೆ ಹೋಗುವಷ್ಟರಲ್ಲಿ ಬಹುತೇಕ ಇಂಧನ ಖಾಲಿಯಾಗುತ್ತಿದೆ ಎನ್ನುವ ಅಳಲು ಚಾಲಕರದ್ದಾಗಿದೆ.
ಸಮಸ್ಯೆಯೇನು?
ಮೊದಲು ಜಿಲ್ಲೆಗೆ ಗೋವಾದಿಂದ ಬೃಹತ್ ಲೋಡು ಗಳು ಪೂರೈಕೆಯಾಗುತ್ತಿತ್ತು. ಅಲ್ಲಿನ ಪ್ಲಾಂಟ್‌ನಲ್ಲಿ ತೊಂದರೆ ಆಗಿರುವುದರಿಂದ ಅಲ್ಲಿಂದ ಪೂರೈಕೆ ಯಾಗುವುದು ಸ್ಥಗಿತಗೊಂಡಿದೆ. ಈಗ ಮಂಗಳೂರಿನ ಪಣಂಬೂರಿನಿಂದ ಮಾತ್ರ ಪೂರೆಸಲಾಗುತ್ತಿದೆ. ಅದು ಸಾಲುತ್ತಿಲ್ಲ. ಸಣ್ಣ ಟ್ಯಾಂಕ್‌ಗಳಿರುವ ರಿಕ್ಷಾಗಳಲ್ಲಿ 4 ಕೆ.ಜಿ.ಯಷ್ಟು ಮಾತ್ರ ತುಂಬಿಸಿಕೊಳ್ಳಲು ಅವಕಾಶವಿದೆ. ಅದು ಕೆ.ಜಿ.ಗೆ 50 ಕಿ.ಮೀ. ನಷ್ಟು ಸೇರಿ ಸುಮಾರು 200 ಕಿ.ಮೀ. ಬರುತ್ತದೆ. ಇನ್ನು ಸ್ವಲ್ಪ ದೊಡ್ಡ ಟ್ಯಾಂಕ್ ಆದರೆ 8 ಕೆ.ಜಿ. ತುಂಬಿಸಬಹುದು. ಅದು ಬಹುತೇಕ ಒಂದು ದಿನದಲ್ಲೇ ಖಾಲಿಯಾಗುತ್ತಿದೆ. ಹೆಚ್ಚು ತುಂಬಿಸಿಕೊಳ್ಳಲು ಆಗುತ್ತಿಲ್ಲ.
ಪರಿಶೀಲನೆ ನಡೆಸುತ್ತೇನೆ
ಸಿಎನ್‌ಜಿ ಗ್ಯಾಸ್ ಪೆಟ್ರೋಲ್ ಬಂಕ್‌ಗಳಿಗೆ ಅನುಮತಿ ಕೊಡುವಾಗಲೇ ಎಷ್ಟು ಬೇಕಾದರೂ ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದು ಖಾಸಗಿ ಬಂಕ್‌ಗಳಾಗಿರುವುದರಿಂದ ಅವರಿಗೆ ಎಲ್ಲ ಅಧಿಕಾರವಿದೆ. ಅದರ ಪೂರೈಕೆಯಲ್ಲಿ ಏನಾದರೂ ಸಮಸ್ಯೆಗಳಿವೆಯೇ ಅನ್ನುವುದನ್ನು ಪರಿಶೀಲನೆ ನಡೆಸಿ, ಅದಕ್ಕಾಗಿ ಸಂಬಂಧಪಟ್ಟವರ ಬಳಿ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು.
– ಕೂರ್ಮಾರಾವ್, ಉಡುಪಿ ಜಿಲ್ಲಾಧಿಕಾರಿ
ಪೂರೈಕೆ ಹೆಚ್ಚಿಸಲಿ
ಸಿಎನ್‌ಜಿ ಕೊರತೆಯಿಂದ ರಿಕ್ಷಾ ಚಾಲಕರು ತಮ್ಮ ಬಾಡಿಗೆಗಿಂತ ಜಾಸ್ತಿ ಸಮಯ ಇಂಧನ ತುಂಬಿಸಿಕೊಳ್ಳಲು ಕಾಯಬೇಕಾಗಿದೆ. ಗಂಟೆಗಟ್ಟಲೆ ಬಂಕ್‌ಗಳಲ್ಲಿ ಕಾಯುತ್ತಿದ್ದೇವೆ. ಸಿಎನ್‌ಜಿ ಗ್ಯಾಸ್ ಪೂರೈಕೆ ಹೆಚ್ಚಾಗಬೇಕು ಹಾಗೂ ಸಿಎನ್‌ಜಿ ಪೆಟ್ರೋಲ್ ಬಂಕ್‌ಗಳ ಸಂಖ್ಯೆಯೂ ಜಾಸ್ತಿಯಾಗಬೇಕಿದೆ.
– ಸಂದೀಪ್ ತಲ್ಲೂರು, ರಿಕ್ಷಾ ಚಾಲಕರು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Eid Procession: ಈದ್ ಮೆರವಣಿಗೆ ವೇಳೆ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

Ragini Dwivedi; ‘ಗಜರಾಮ’ ಸ್ಪೆಷಲ್ ಹಾಡಿಗೆ ರಾಗಿಣಿ ಮಸ್ತ್ ಸ್ಟೆಪ್ಸ್!

Hunsur: ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ ಆನೆ ಬಲಿ

Kalaburagi; ವಾರದೊಳಗೆ ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ: ಸಚಿವ ಚಲುವರಾಯಸ್ವಾಮಿ

Hubli; ಆಮಿಷ ತೋರಿಸಿ ಬಾಲಕರಿಗೆ ಲೈಂಗಿಕ ಕಿರುಕುಳ: ಪೊಲೀಸರ ಅತಿಥಿಯಾದ ಕುಕ್