46 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್
Team Udayavani, Jul 11, 2020, 5:25 AM IST
ಬೆಂಗಳೂರು: ಸೋಂಕಿತರಿಗೆ ಹಾಸಿಗೆ ನಿರಾಕರಣೆ, ದರ ಹೆಚ್ಚಳ, ಒಪ್ಪಂದದಂತೆ ಶೇ. 50 ರಷ್ಟು ಹಾಸಿಗೆ ಮೀಸಲಿಡದ 46 ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ಹೆಚ್ಚಿನ ದರ ನೀಡದಿರುವವರಿಗೆ, ಹಾಸಿಗೆ ಖಾಲಿಯಿಲ್ಲ ಎಂಬ ನೆಪ ಹೇಳಿ ಹತ್ತಾರು ಆಸ್ಪತ್ರೆಗಳಿಗೆ ಅಲೆಯುವಂತೆ ಮಾಡಿದ ಅಮಾನವೀಯಘಟನೆಗಳು ಪ್ರತಿದಿನ ನಡೆಯುತ್ತಿದ್ದು, ಪಾಲಿಕೆಯ ಎಚ್ಚರಿಕೆಗೆ ಜಗ್ಗದ ಆಸ್ಪತ್ರೆಗಳಿಗೆ ಪಾಲಿಕೆಯ ಆರೋಗ್ಯ ವಿಭಾಗ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ.
ಸಾಮಾನ್ಯ ವಾರ್ಡ್, ವಿಶೇಷ ವಾರ್ಡ್, ಐಸೋಲೇಷನ್ ವಾರ್ಡ್, ವೆಂಟಿಲೇಟರ್ ಸಹಿತ ಐಸೋಲೇಷನ್ ವಾರ್ಡ್ ಸೇರಿ ವಿವಿಧ ಹಂತಗಳಿಗೆ ಸರ್ಕಾರ ದರ ನಿಗದಿಪಡಿಸಿದೆ. ಈ ದರಕ್ಕೆ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ನೀಡಿವೆಯಾದರೂ ಅದಕ್ಕಿಂತ ಹೆಚ್ಚಿನ ಹಣಕ್ಕೆ ಆಸ್ಪತ್ರೆಗಳು ಬೇಡಿಕೆ ಇಡುತ್ತಿದ್ದವು ಎಂದು ತಿಳಿದು ಬಂದಿದೆ. ಈಗಾಗಲೇ ದೂರು ಬಂದಿರುವ ಆಸ್ಪತ್ರೆಗಳಿಗೆ ಈ ನೋಟಿಸ್ ನೀಡಿದ್ದು, ಮುಂದೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ 50 ಸಾವಿರ ಕೋವಿಡ್ ಟೆಸ್ಟ್ ಕಿಟ್: ಕೊರೊನಾ ಪರೀಕ್ಷೆಗೆ ಒಳಪಟ್ಟು ಹಲವು ದಿನಗಳ ನಂತರ ವರದಿ ಬರುತ್ತಿದೆ ಎಂಬ ಆರೋಪ ಹಿನ್ನೆಲೆ 50 ಸಾವಿರ ಕೊರೊನಾ ಟೆಸ್ಟ್ ಕಿಟ್‌ಗಳನ್ನು ಖರೀದಿಸಲು ಸರ್ಕಾರ ತೀರ್ಮಾನಿಸಿದ್ದು, ಇನ್ನೆರಡು ದಿನಗಳಲ್ಲಿ ಪಾಲಿಕೆ ಕೈ ಸೇರಲಿವೆ. ಈ ಕಿಟ್‌ಗಳ ಮೂಲಕ ಕೇವಲ 20 ನಿಮಿಷಗಳಲ್ಲೇ ವರದಿ ಕೈ ಸೇರುವುದರಿಂದ ಶೀಘ್ರ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ.