ಮಳೆ ಸಂತ್ರಸ್ತ 1500 ಕುಟುಂಬಗಳಿಗೆ ಸಚಿವ ಕೆ.ಗೋಪಾಲಯ್ಯರಿಂದ ಫುಡ್ ಕಿಟ್ ವಿತರಣೆ
Team Udayavani, May 18, 2022, 7:26 PM IST
ಬೆಂಗಳೂರು: ಮಳೆಯಿಂದ ತೊಂದರೆ ಗೊಳಗಾಗಿರುವವರಿಗೆ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 1500 ಕ್ಕೂ ಅಧಿಕ ಕುಟುಂಬಗಳಿಗೆ ಕ್ಷೇತ್ರದ ಶಾಸಕ, ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಬುಧವಾರ ಸಂಜೆ ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸಿದರು.
ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರ ವ್ಯಾಪ್ತಿಯ ಕಮಲಾನಗರ, ವೃಷಭಾವತಿ ನಗರ, ನಂದಿನಿ ಬಡಾವಣೆ, ಕಂಠೀರವ ನಗರ,ಜೆ.ಸಿ.ನಗರ, ಕೆರೆಯಂಗಳ ಮತ್ತು ಚಂದ್ರಪ್ಪ ನಗರದ ಸುಮಾರು 800ಕ್ಕೂ ಅಧಿಕ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಆತ್ಮಸ್ಥೈರ್ಯ ತುಂಬಿದರು.
ಬೆಂಗಳೂರಿನಲ್ಲಿ ಮಳೆ ಇನ್ನೂ ಮುಂದುವರಿಯುವ ಸಾಧ್ಯತೆಗಳ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆಯಲ್ಲದೆ ಮುಂದಿನ 24 ಗಂಟೆಗಳಲ್ಲಿ 12 ಮಿಲಿಮೀಟರ್ ಗೂ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ .ಈ ಹಿನ್ನೆಲೆಯಲ್ಲಿ ಜಾಗೃತಿ ವಹಿಸಬೇಕೆಂದು ನಾಗರೀಕರಿಗೆ ಸಚಿವ ಕೆ.ಗೋಪಾಲಯ್ಯ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ವಾರ್ಡ್ ಅಧ್ಯಕ್ಷ ಲೋಕೇಶ್, ರೈಲ್ವೆ ನಾರಾಯಣ್, ರಾಘವೇಂದ್ರ ನಾಗರಾಜ್, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.