ವಿದ್ಯಾಕಾಶಿಗೆ ಧರ್ಮ ದೀವಿಗೆಯ ಬೆಳಕು ಎಸ್‌ಡಿಎಂ
ಆರೋಗ್ಯ ಭಾಗ್ಯದ ಅಧಿಪತಿ ಡಾ| ವೀರೇಂದ್ರ ಹೆಗ್ಗಡೆ ಕುಲಪತಿ
Team Udayavani, Feb 7, 2023, 3:12 PM IST
ಕಾಶಿ ವಿಶ್ವನಾಥನ ದರ್ಶನ ಅಸಾಧ್ಯ ಎಂಬಂತಿದ್ದ ಸಮಯದಿಂದ ಉತ್ತರ ಕರ್ನಾಟಕ ಭಾಗದ ಶಿವಭಕ್ತರಿಗೆ ಶ್ರೀಕ್ಷೇತ್ರ ಧರ್ಮಸ್ಥಳವೇ ಕಾಶಿಯಂತೆ ಇಂದಿಗೂ ಗೋಚರಿಸುತ್ತಿರುವುದು ಸತ್ಯ. ಅದರಲ್ಲೂ 1970-90ರ ದಶಕದಲ್ಲಿ ಉತ್ತರ ಕರ್ನಾಟಕದ ಪ್ರತಿ ತಾಲೂಕು ಕೇಂದ್ರಗಳಿಂದಲೂ ಪ್ರತಿದಿನ ಒಂದೊಂದು ಸಾರಿಗೆ ಬಸ್ ಧರ್ಮಸ್ಥಳ ದಾರಿ ಹಿಡಿಯುತ್ತಿದ್ದವು. ಧರ್ಮಸ್ಥಳದಲ್ಲಿ ಸೇರುವ ಭಕ್ತರ ಪೈಕಿ ಅತ್ಯಧಿಕ ಪಾಲು ಉತ್ತರ ಕರ್ನಾಟಕ ಭಕ್ತರದ್ದು. ಈ ಪರಂಪರೆ ಇಂದಿಗೂ ಮುಕ್ಕಾಗದೇ ಅವಿರತವಾಗಿ ನಡೆಯುತ್ತಲೇ ಸಾಗುತ್ತಿದೆ.
ಅದರಲ್ಲೂ ವಿದ್ಯಾಕಾಶಿ ಧಾರವಾಡಕ್ಕೂ ಧರ್ಮಸ್ಥಳ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಜಿಲ್ಲೆಯ ಕಲಘಟಗಿ, ಕುಂದಗೋಳ, ನವಲಗುಂದದಂತಹ ಸಣ್ಣ ತಾಲೂಕುಗಳಿಂದಲೂ ಧರ್ಮಸ್ಥಳಕ್ಕೆ ಸಾರಿಗೆ ಬಸ್‌ಗಳು ಪ್ರತಿದಿನ ಈಗಲೂ ಹೋಗುತ್ತಿವೆ.
ಉತ್ತರ ಧೃವದಿಂ ದಕ್ಷಿಣ ಧೃವಕೂ ಚುಂಬಕ ಗಾಳಿಯೂ ಬೀಸುತಿದೆ ಎಂಬ ಕವಿಯ ಸಾಲುಗಳು ಅಕ್ಷರಶಃ ಉತ್ತರದ ಧಾರವಾಡ ಮತ್ತು ದಕ್ಷಿಣದ ಧರ್ಮಸ್ಥಳಕ್ಕೆ ಅನ್ವಯವಾಗುವಂತಿದೆ. 1910ರ ದಶಕದಿಂದ 1950ರ ದಶಕದವರೆಗೆ ಧಾರವಾಡ ಶಿಕ್ಷಣ ಕಾಶಿಯಾಗಿ ರೂಪುಗೊಂಡಿದ್ದು ಎಲ್ಲರಿಗೂ ಗೊತ್ತಿರುವ ಕಥೆ. ಮುಂಬೈ, ಪುಣೆ, ಬೆಂಗಳೂರು ಮತ್ತು ಮೈಸೂರಿನಲ್ಲಿನ ವಿದ್ಯಾಭ್ಯಾಸ ಲಭಿಸುವುದು ದುಸ್ತರವಾದಾಗ ಧಾರವಾಡದಲ್ಲಿ ಸರ್ ಸಿದ್ದಪ್ಪ ಕಂಬಳಿ ಕರ್ನಾಟಕ ಕಲಾ ಕಾಲೇಜು, ಮುಂದೆ 1949ರಲ್ಲಿ ಡಾ| ಡಿ.ಸಿ. ಪಾವಟೆ ಅವರು ಕರ್ನಾಟಕ ವಿಶ್ವವಿದ್ಯಾಲಯ ಕಟ್ಟಿ ಭದ್ರ ಬುನಾದಿ ಹಾಕಿದರು. ಅಂದಿನಿಂದ ಧಾರವಾಡ ಉತ್ತರ ಕರ್ನಾಟಕ ಭಾಗದ ದೊಡ್ಡ ಶಿಕ್ಷಣ ಕೇಂದ್ರವಾಯಿತು.
ಆದರೆ 1980ರ ದಶಕದ ನಂತರ ಈ ಭಾಗದ ಜನರಿಗೆ ಅತ್ಯಧಿಕ ಶಿಕ್ಷಣದ ಅವಕಾಶಗಳನ್ನು ನೀಡಿದ್ದು ಎಸ್‌ಡಿಎಂ ಸಂಸ್ಥೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಾರಣ 1979ರಲ್ಲಿ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಆರಂಭಗೊಂಡಿತು. ಜೆಎಸ್‌ಎಸ್ ಶಿಕ್ಷಣ ಸಮೂಹ ಸಂಸ್ಥೆಗಳನ್ನು ಮುನ್ನಡೆಸುವ ಹೊಣೆಯನ್ನು ಎಸ್‌ಡಿಎಂ ವಹಿಸಿಕೊಂಡಿತು. ನಂತರ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಹಾಗೂ ಎಸ್‌ಡಿಎಂ ವೈದ್ಯಕೀಯ ಕಾಲೇಜುಗಳು ಕಾರ್ಯ ಆರಂಭಿಸಿದವು. ಪ್ರಸ್ತುತ ಸಾವಿರಾರು ವಿದ್ಯಾರ್ಥಿಗಳು ಪ್ರತಿವರ್ಷ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಿಂದಲೇ ವಿದ್ಯಾಭ್ಯಾಸ ಪಡೆಯುತ್ತಿದ್ದು, ಧಾರವಾಡ ಶಿಕ್ಷಣ ಕಾಶಿಯಾಗುವುದಕ್ಕೆ ಎಸ್‌ಡಿಎಂ ತನ್ನದೇ ಕೊಡುಗೆ ನೀಡಿದ್ದು ಸತ್ಯ.
ಕುಲಪತಿಗಳಿಂದ ಅಧಿಪತಿಯಾದ ಎಸ್‌ಡಿಎಂ ವಿವಿ: ಇನ್ನು ಧರ್ಮಸ್ಥಳ ಧರ್ಮಾಧಿಕಾರಿಗಳಾಗಿರುವ ಡಾ| ವೀರೇಂದ್ರ ಹೆಗ್ಗಡೆ ಅವರ ಸತತ ಪರಿಶ್ರಮ ಮತ್ತು ದೂರಾಲೋಚನೆಯ ಕ್ರಮಗಳಿಂದಾಗಿಯೇ ಇಂದು ಎಸ್‌ಡಿಎಂ ಸಂಸ್ಥೆ ಹೆಮ್ಮರವಾಗಿ ಬೆಳೆದು ನಿಂತಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಮುಗ್ಧ ಜನರು ದರ್ಶನಕ್ಕೆ ಬಂದಾಗಲೆಲ್ಲ ಅವರನ್ನು ಅಕ್ಕರೆ – ಪ್ರೀತಿಯಿಂದ ಕಂಡು ಅವರ ಜೀವನದಲ್ಲಿ ಪರಿವರ್ತನೆ ತರಬೇಕೆನ್ನುವ ಉದ್ದೇಶ ಡಾ| ಹೆಗ್ಗಡೆ ಅವರಿಗಿತ್ತು. ಇದನ್ನು ಅನೇಕ ಕಾರ್ಯಕ್ರಮಗಳಲ್ಲಿ ಅವರು ಹೇಳಿಕೊಂಡಿದ್ದಾರೆ.
ಆರೋಗ್ಯ ಭಾಗ್ಯ ಕರುಣೆ
ಕ್ಷೇತ್ರದ ಸ್ವಾಮಿ ದರ್ಶನ ಮಾಡಿಕೊಂಡು ಅಲ್ಲಿಯೇ ಉಳಿದು ಪ್ರಸಾದ ಪಡೆದು ಧನ್ಯತಾ ಭಾವ ಪಡೆದು ಬರುವ ಭಕ್ತರೆಲ್ಲರೂ ಧರ್ಮಸ್ಥಳ ಮತ್ತು ಹೆಗ್ಗಡೆ ಅವರ ಬಗ್ಗೆ ಅಪಾರ ಗೌರವ ಭಕ್ತಿ ಇಟ್ಟುಕೊಂಡಿದ್ದಾರೆ. ಇಂತಿಪ್ಪ ಭಕ್ತಾದಿಗಳ ಆರೋಗ್ಯ ಸೇವೆಗೆ ಮುನ್ನುಡಿ ಬರೆದಿದ್ದು ಡಾ| ವೀರೇಂದ್ರ ಹೆಗ್ಗಡೆ ಅವರು. ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಇಡೀ ವಿಶ್ವವಿದ್ಯಾಲಯವನ್ನು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ನೀಡುವಂತೆ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಕಾಲಕಾಲಕ್ಕೆ ಅವರು ಕೈಗೊಂಡ ಉತ್ತಮ ಕ್ರಮಗಳಿಂದ ಇಂದು ದೇಶದ ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ ಎಸ್‌ಡಿಎಂ ವಿಶ್ವವಿದ್ಯಾಲಯ ಟಾಪ್ 5ರ ಪಟ್ಟಿಯಲ್ಲಿ ಸ್ಥಾನ ಪಡೆದು ದೇಶದ ಅಗ್ರಗಣ್ಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಅಧಿಪತಿ ಸ್ಥಾನದಲ್ಲಿದೆ.
ಎಸ್‌ಡಿಎಂ ಉತ್ತರ ಕರ್ನಾಟಕ ಭಾಗಕ್ಕೆ ನೀಡಿದ ಸೇವೆ ಅನನ್ಯವಾಗಿದೆ. ಒಟ್ಟು ಐದು ಪ್ರಮುಖ ಸಂಸ್ಥೆಗಳು ಈ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆರೋಗ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸೇವೆ ಲಭ್ಯವಾಗುವುದರ ಜತೆಗೆ ಸಾವಿರ ಸಾವಿರ ವಿದ್ಯಾರ್ಥಿಗಳ ಓದಿಗೆ ಎಸ್‌ಡಿಎಂ ವಿಶ್ವವಿದ್ಯಾಲಯ ವಿದ್ಯಾಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು 1986ರಲ್ಲಿ ಸ್ಥಾಪನೆಯಾಯಿತು. ಎಸ್‌ಡಿಎಂ ಫಿಜಿಯೋಥೆರಪಿ ಮಹಾವಿದ್ಯಾಲಯ 1996ರಲ್ಲಿ ಸ್ಥಾಪನೆಯಾದರೆ, 2004ರಲ್ಲಿ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಾರ್ಯಾರಂಭವಾಯಿತು. ಎಸ್‌ಡಿಎಂ ನರ್ಸಿಂಗ್ ವಿಜ್ಞಾನ ಕಾಲೇಜು 2006 ಮತ್ತು ಎಸ್‌ಡಿಎಂ ಜೀವ ವೈದ್ಯಕೀಯ ವಿಜ್ಞಾನ ಸಂಸ್ಥೆ 2019ರಲ್ಲಿ ಆರಂಭಗೊಂಡಿತು. ಈ ಐದು ಸಂಸ್ಥೆಗಳನ್ನೊಳಗೊಂಡು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ತಲೆ ಎತ್ತಿತು.
ಬಾಯಿ ಆರೋಗ್ಯಕ್ಕೆ ಮುನ್ನುಡಿ ಬರೆದ ದಂತ ಆಸ್ಪತ್ರೆ: 1986 ರಲ್ಲಿ ಎಸ್‌ಡಿಎಂ ದಂತ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸ್ಥಾಪನೆಗೊಂಡಿತು. ಈ ಭಾಗದಲ್ಲಿ ಸಾವಿರಾರು ಜನರಲ್ಲಿ ಹಲ್ಲು, ಬಾಯಿ ಮತ್ತು ವಸಡಿನ ಆರೋಗ್ಯ ಕುರಿತು ಜಾಗೃತಿ ಮೂಡಿಸಿದ್ದು ಎಸ್‌ಡಿಎಂ ದಂತ ಮಹಾವಿದ್ಯಾಲಯ ಎಂದರೆ ತಪ್ಪಾಗಲಿಕ್ಕಿಲ್ಲ.
ಈ ಮುಂಚೆ ಉತ್ತರ ಕರ್ನಾಟಕ ಭಾಗದ ಜನರು ಬೆಂಗಳೂರಿನ ಕಿದ್ವಾಯಿ ಅಥವಾ ಪುಣೆಯಲ್ಲಿನ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಬೇಕಾಗುತ್ತಿತ್ತು. ಆದರೆ ಎಸ್‌ಡಿಎಂ ದಂತ ಮಹಾವಿದ್ಯಾಲಯ ಸ್ಥಾಪನೆಯಾದ ಕೂಡಲೇ ಹಳ್ಳಿ ಹಳ್ಳಿಗಳಿಂದಲೂ ಧಾರವಾಡ ಜಿಲ್ಲೆಯ ಜನರು ದಂತ ರಕ್ಷಣೆ ಪಡೆಯಲು ಎಸ್‌ಡಿಎಂ ದಂತ ಆಸ್ಪತ್ರೆ ಕೈ ಜೋಡಿಸಿತು. ಜನರಲ್ಲಿ ದಂತಗಳ ಸಂರಕ್ಷಣೆ, ಬಾಯಿ ಮತ್ತು ವಸಡುಗಳ ರಕ್ಷಣೆ ಸೇರಿದಂತೆ ಒಟ್ಟಾರೆ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಈ ಆಸ್ಪತ್ರೆ ಮುನ್ನುಡಿ ಬರೆಯಿತು.
ಇಡೀ ದೇಶದಲ್ಲಿನ ದಂತ ಕಾಲೇಜುಗಳ ಪೈಕಿ ಎಸ್‌ಡಿಎಂ ಕಾಲೇಜು 5ನೇ ಸ್ಥಾನದಲ್ಲಿದ್ದು, ನ್ಯಾಕ್‌ನಿಂದ ಎ ಗ್ರೇಡ್ ಸ್ಥಾನ ಪಡೆದಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಗುಣಮಟ್ಟ, ಶಿಸ್ತು ಕಾಯ್ದುಕೊಂಡಿದೆ. ಎಸ್‌ಡಿಎಂ ದಂತ ಕಾಲೇಜು ಬಿಡಿಎಸ್, ಎಂಡಿಎಸ್, ಪಿಎಚ್‌ಡಿ ಸೇರಿದಂತೆ ಎಲ್ಲಾ ಕೋರ್ಸ್‌ಗಳಿಗೂ ಅವಕಾಶ ಕಲ್ಪಿಸಿ ಕೊಟ್ಟಿದೆ.
ಎಸ್‌ಡಿಎಂ ಆಸ್ಪತ್ರೆ ಎಂಬ ಜೀವಸೆಲೆ: ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ 2004ರಲ್ಲಿ ಸ್ಥಾಪನೆಯಾಯಿತು. 1250 ಬೆಡ್‌ಗಳ ಈ ಬೃಹತ್ ಆಸ್ಪತ್ರೆ ಉತ್ತರ ಕರ್ನಾಟಕ ಭಾಗದಲ್ಲಿಯೇ ಅತ್ಯುತ್ತಮ ವೈದ್ಯಕೀಯ ಸೇವೆ ಮತ್ತು ಕಡಿಮೆ ದರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕ್ರೊಢೀಕರಿಸುವ ಆಸ್ಪತ್ರೆಯಾಗಿ ನೆಲೆ ನಿಂತಿದೆ. ಇಡೀ ದಕ್ಷಿಣ ಭಾರತದ ಖಾಸಗಿ ಕಾಲೇಜುಗಳ ಪೈಕಿ 9ನೇ ಸ್ಥಾನದಲ್ಲಿದ್ದರೆ ದೇಶದಲ್ಲಿಯೇ 14ನೇ ಸ್ಥಾನದಲ್ಲಿದೆ.
ಒಂದು ಆಸ್ಪತ್ರೆಯಲ್ಲಿ ಒಂದು ಬಗೆಯ ಚಿಕಿತ್ಸೆ, ಇನ್ನೊಂದು ಆಸ್ಪತ್ರೆಯಲ್ಲಿ ಇನ್ನೊಂದು ಬಗೆಯ ಆರೈಕೆ, ಎಕ್ಸ್‌ರೇ, ಸ್ಕಾÂನಿಂಗ್, ಫಿಜಿಯೋಥೆರಫಿ ಹೀಗೆ ಬೇರೆ ಬೇರೆ ಇರುವುದು ಸಾಮಾನ್ಯ. ಆದರೆ ಎಸ್‌ಡಿಎಂ ಆಸ್ಪತ್ರೆ ಅಥವಾ ಎಸ್‌ಡಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಒಮ್ಮೆ ರೋಗಿ ಪ್ರವೇಶಿಸಿದರೆ ಸಾಕು ಎಲ್ಲಾ ಬಗೆಯ ಸೌಲಭ್ಯಗಳು ಇಲ್ಲಿ ಲಭ್ಯವಿದೆ. ಒಂದೇ ಛಾಯಾಛತ್ರದಲ್ಲಿ ಎಲ್ಲಾ ಸೌಕರ್ಯಗಳನ್ನು ರೋಗಿ ಕಡಿಮೆ ವೆಚ್ಚದಲ್ಲಿ ಪಡೆದುಕೊಳ್ಳುವಂತೆ ಮಾಡಿದ ಕೀರ್ತಿ ಎಸ್‌ಡಿಎಂ ವೈದ್ಯಕೀಯ ಕಾಲೇಜಿಗೆ ಸಲ್ಲುತ್ತದೆ.
ಪ್ಲಾಸ್ಟಿಕ್ ಸರ್ಜರಿ ಎಂಬ ವಿಷಯ ಉತ್ತರ ಕರ್ನಾಟಕದ ಜನರಿಗೆ ಹೊಸದಾಗಿತ್ತು. ಇಂತಿಪ್ಪ ಸಂದರ್ಭದಲ್ಲಿ ಕೈ ಕತ್ತರಿಸಿಕೊಂಡಿದ್ದ ವ್ಯಕ್ತಿಯೊಬ್ಬನ ಕೈಯನ್ನೇ ಮರಳಿ ಜೋಡಿಸಿದ್ದು, ಕಾಲು ಕತ್ತರಿಸಿಕೊಂಡಿದ್ದ ಮಗುವಿನ ಕಾಲು ಮರು ಜೋಡಣೆ ಮಾಡಿ ಸೈ ಎಣಿಸಿಕೊಂಡವರು ಎಸ್‌ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ| ನಿರಂಜನ್ ಕುಮಾರ್ ಅವರು. ಇಲ್ಲಿನ ಇಂತಹ ಸಾಕಷ್ಟು ರೋಗಿಗಳನ್ನು ಗುಣಪಡಿಸಲಾಗಿದೆ. ಆದರೆ ಇಂತಹ ಘಟನೆಗಳು ನಡೆದಾಗ ಬಡವರು ಮತ್ತು ಕೂಲಿ ಕಾರ್ಮಿಕರು ಎನ್ನದೇ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ನೀಡುವ ಅವರ ಮನೋಧರ್ಮದಿಂದಾಗಿಯೇ ಡಾ| ನಿರಂಜನ್ ಕುಮಾರ್ ಅವರು ಈ ಭಾಗದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಉಪ ಕುಲಪತಿಗಳಾಗಿ ಅವರು ತೆಗೆದುಕೊಳ್ಳುವ ಕ್ರಮಗಳು, ಸಮಯೋಚಿತ ನಿರ್ಧಾರಗಳಿಂದ ಇಲ್ಲಿ ಉತ್ತಮ ಆರೋಗ್ಯ ಸೇವೆ ಸಾಧ್ಯವಾಗುತ್ತಿರುವುದು ಸತ್ಯ.
ಕೋವಿಡ್ ಸಂಕಷ್ಟಕ್ಕೆ ಶಕ್ತಿ ಮೀರಿ ಸೇವೆ
ಇಡೀ ಜಗತ್ತನ್ನೇ ತತ್ತರಿಸುವಂತೆ ಮಾಡಿದ್ದ ಕೋವಿಡ್-19 ಮಹಾಮಾರಿ ಉತ್ತರ ಕರ್ನಾಟಕ ಭಾಗದಲ್ಲಿ ಮಾಡಿದ ಹಾನಿ ನಿಜಕ್ಕೂ ಬೇಸರ ತರಿಸುತ್ತದೆ. ಈ ಭಾಗದ ಹದಿಹರೆಯದ ನೂರಾರು ಯುವಕರು ಕೋವಿಡ್ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡರು. ಆದರೆ ಒಂದು ವೇಳೆ ಎಸ್‌ಡಿಎಂ ಆಸ್ಪತ್ರೆ ಇಲ್ಲದೇ ಹೋಗಿದ್ದರೆ ಈ ಅನಾಹುತಗಳು ಇನ್ನು ಅಧಿಕ ಪ್ರಮಾಣದಲ್ಲಿ ಆಗುತ್ತಿದ್ದವು ಎಂಬುದು ಕೂಡ ಅಷ್ಟೇ ಸತ್ಯ. ಕೋವಿಡ್ ಸಂದರ್ಭದಲ್ಲಿ ಇಡೀ ಆಸ್ಪತ್ರೆಯನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಯಿತು. ಶಕ್ತಿ ಮೀರಿ ರೋಗಿಗಳನ್ನು ಇಲ್ಲಿ ಇಟ್ಟು ಚಿಕಿತ್ಸೆ ನೀಡಲಾಯಿತು. ಎಸ್‌ಡಿಎಂ ಆಸ್ಪತ್ರೆಯ ಸಿಬ್ಬಂದಿ ತೋರಿದ ಕಾಳಜಿ, ತೆಗೆದುಕೊಂಡ ಕಠಿಣ ನಿಲುವುಗಳು ಕೋವಿಡ್ ಮಹಾಮಾರಿ ನಿಯಂತ್ರಿಸಲು ಸಹಕಾರಿಯಾಯಿತು. ಅದೂ ಅಲ್ಲದೇ ಕೋವಿಡ್ ಲಸಿಕೆ ಹಂಚಿಕೆಯಲ್ಲೂ ಎಸ್‌ಡಿಎಂ ಮೊಟ್ಟ ಮೊದಲ ಅಡಿ ಇಟ್ಟಿತು. ತೀವ್ರ ಅಗತ್ಯತೆ ಇರುವ ಸಾವಿರಾರು ಜನರು ಬಂದು ಆಸ್ಪತ್ರೆಯಿಂದಲೇ ಕೋವಿಡ್ ಲಸಿಕೆ ಪಡೆಯುವುದಕ್ಕೆ ಅಗತ್ಯ ಏರ್ಪಾಟು ಕೂಡ ಮಾಡಲಾಯಿತು. ಈ ಸಂದರ್ಭದಲ್ಲಿಯೇ ಎಸ್‌ಡಿಎಂ ಬಗ್ಗೆ ಜನರಲ್ಲಿ ಮತ್ತಷ್ಟು ಅಭಿಮಾನ ಹೆಚ್ಚಾಯಿತು.
ಎಸ್‌ಡಿಎಂ ವಿವಿ ಎಂಬ ಹೆಮ್ಮರ
ತಾಯಿ ಹಾಲು ಸಂಸ್ಕರಣಾ ಘಟಕ: ಎಸ್‌ಡಿಎಂ ಆಸ್ಪತ್ರೆ ಎಸ್ ಡಿಎಂ ಆಸ್ಪತ್ರೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದು ಸೈ ಎನಿಸಿದೆ. ಈ ಪೈಕಿ ಇತ್ತೀಚೆಗಷ್ಟೇ ಆಸ್ಪತ್ರೆಯಲ್ಲಿ ಆರಂಭಿಸಿದ ತಾಯಿ ಹಾಲು ಸಂಸ್ಕರಣಾ ಘಟಕ ಕೂಡಾ ಈ ಭಾಗದ ಜನರಲ್ಲಿ ರೋಮಾಂಚನವನ್ನುಂಟು ಮಾಡಿತು. ತಾಯಿ ಹಾಲು ಮಗುವಿಗೆ ತಾಯಿಯಿಂದ ನೇರವಾಗಿ ಸಿಕ್ಕುವುದು ಪ್ರಕೃತಿ ಧರ್ಮ.
ಆದರೆ ಕಾಲಾನುಕ್ರಮದಲ್ಲಿ ಅನೇಕ ದೈಹಿಕ ವ್ಯತ್ಯಾಸಗಳು ಮತ್ತು ಖಾಯಿಲೆಗಳಿಂದ ಕೆಲವು ತಾಯಂದಿರ ಎದೆಹಾಲನ್ನು ಮಕ್ಕಳು ಪಡೆದುಕೊಳ್ಳಲಾಗುವುದಿಲ್ಲ. ಇದನ್ನು ಗಮನಿಸಿದ ಎಸ್‌ಡಿಎಂ ಆಡಳಿತ ಮಂಡಳಿ ನೇರವಾಗಿ ತಾಯಿ ಹಾಲು ಸಿಕ್ಕದೇ ಹೋದರೂ, ತಾಯಂದಿರಿಂದ ಹಾಲು ಸಂಗ್ರಹಿಸಿ ಅದನ್ನು ಅಗತ್ಯವಿರುವ ಶಿಶುಗಳಿಗೆ ನೀಡಲು ಯೋಜಿಸಿ ಘಟಕ ಆರಂಭಿಸಿದ್ದಾರೆ. ಅಂದರೆ ಅಮೃತಕ್ಕೆ ಸಮನಾದ ತಾಯಿ ಹಾಲಿನಿಂದ ಯಾವ ಮಗುವೂ ವಂಚಿತವಾಗದಂತೆ ನೋಡಿಕೊಳ್ಳುವ ಮತ್ತು ಮಗುವಿನ ಸಮೃದಟಛಿ ಬೆಳವಣಿಗೆಗೆ ಪೂರಕ ಪೋಷಕಾಂಶ ಒದಗಿಸುವ ದೂರದೃಷ್ಟಿ ನಿಜಕ್ಕೂ ಶ್ಲಾಘನೀಯ.
ಮಮತಾಮಯಿ ಡಾ| ರತ್ನಮಾಲಾ: ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳಿಲ್ಲದ ಅದೆಷ್ಟೋ ಸಾವಿರ ಬಡವರು ಕಡಿಮೆ ಚಿಕಿತ್ಸೆ ವೆಚ್ಚದಲ್ಲಿ ಮಕ್ಕಳನ್ನು ಪಡೆದುಕೊಂಡಿದ್ದಾರೆ. ಈ ಚಿಕಿತ್ಸೆಗೆ ಬೆನ್ನೆಲುಬಾಗಿ ನಿಂತವರು ಹಿರಿಯ ವೈದ್ಯೆ ಮತ್ತು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ರತ್ನಮಾಲಾ ದೇಸಾಯಿ ಅವರು. ಉತ್ತರ ಕರ್ನಾಟಕದ ಬಡ ಮತ್ತು ಮಧ್ಯಮ ವರ್ಗದ ಅನೇಕ ದಂಪತಿಗಳು ಮಕ್ಕಳಿಲ್ಲದೇ ಚಿಂತೆಗೆ ಜಾರಿದ್ದರು. ಆದರೆ ಅವರಿಗೆ ಸಾಂತ್ವನ ಮತ್ತು ತಿಳಿವಳಿಕೆ ಮೂಲಕ ಮಕ್ಕಳ ಭಾಗ್ಯ ಕರುಣಿಸಿದ ಕೀರ್ತಿಯೂ ಎಸ್‌ಡಿಎಂ ಕಾಲೇಜಿಗೆ ಸಲ್ಲುತ್ತದೆ.
ಎಸ್‌ಡಿಎಂ ಎಂಬ ಶಿಸ್ತು ಸ್ವಚ್ಛತೆಯ ಪಾಠಶಾಲೆ: ಎಸ್ ಡಿಎಂ ವಿಶ್ವವಿದ್ಯಾಲಯ ಬರೀ ಕೋರ್ಸ್‌ಗಳು, ಕಲಿಕೆ, ಆಸ್ಪತ್ರೆ, ನರ್ಸ್ ಮತ್ತು ಇತರೇ ವೈದ್ಯಕೀಯ ಸೇವೆಗೆ ಮಾತ್ರ ಮೀಸಲಾಗಿಲ್ಲ. ಸ್ವತ್ಛತೆಯ ಪಾಠವನ್ನು ಸಾರ್ವಜನಿಕರಿಗೆ ಕಲಿಸಿಕೊಡುವ ಶಿಸ್ತಿನ ವರ್ತನೆಯನ್ನು ರೂಢಿಸಿಕೊಳ್ಳುವಂತೆ ಮಾಡುವ ಸಾಮಾಜಿಕ ಪಾಠಶಾಲೆಯೂ ಆಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲೆಂದರಲ್ಲಿ ಎಲೆ ಅಡಿಕೆ ಜಗಿದು ಉಗುಳುವ ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿದ್ದು ಎಸ್‌ಡಿಎಂ ಅಂದರೆ ತಪ್ಪಾಗಲಿಕ್ಕಿಲ್ಲ. ವಿಶ್ವವಿದ್ಯಾಲಯ ಆವರಣದಲ್ಲಿ ಟ್ರಾಫಿಕ್ ರೂಲ್ಸ್‌ಗಳ ಬಳಕೆ ಸೇರಿದಂತೆ ಸಾಮೂಹಿಕ ಶಿಸ್ತು ರೂಪಿಸುವ ಎಲ್ಲಾ ವಿಚಾರಗಳಿಗೂ ಈ ಕ್ಯಾಂಪಸ್ ಸದಾ ಮುಂಚೂಣಿಯಲ್ಲಿದೆ.
ಇಸಿಎಂಓ ಜೀವ ರಕ್ಷಕ ಸೂಪರ್ ಯಂತ್ರ (ECMO):
ಕೋವಿಡ್ ನಂತರದ ದಿನಗಳಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನೋಡಲೇಕಾದ ಅನಿವಾರ್ಯತೆ ವೈದ್ಯಲೋಕಕ್ಕೆ ಎದುರಾಗಿದೆ. ಇಂತಹ ರೋಗಿಗಳನ್ನು ಹೆಚ್ಚು ಮುತುವರ್ಜಿ ವಹಿಸಿ ಚಿಕಿತ್ಸೆಗೊಳಪಡಿಸಬೇಕು. ಈ ನಿಟ್ಟಿನಲ್ಲಿ ಎಸ್‌ಡಿಎಂ ಆಸ್ಪತ್ರೆ ಕೃತಕ ಶ್ವಾಸಕೋಶ ಎಂಬುದಾಗಿ ಕರೆಯಲ್ಪಡುವ ECMO (ಎಕ್ಸ್‌ಟ್ರಾ ಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್) ಚಿಕಿತ್ಸೆಯ ಸೌಲಭ್ಯವನ್ನು ಇಲ್ಲಿಯ ಸತ್ತೂರಿನ
ಎಸ್‌ಡಿಎಂ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಕುಲಪತಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಉಪ ಕುಲಪತಿ ಡಾ| ನಿರಂಜನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ 30 ಲಕ್ಷ ರೂ. ವೆಚ್ಚದ ಕೃತಕ ಶ್ವಾಸಕೋಶ ಯಂತ್ರದ ಸೌಲಭ್ಯ ಸಿಗುವಂತಾಗಿದ್ದು, ಈ ಚಿಕಿತ್ಸೆ ಒಂದು ಜೀವರಕ್ಷಕ ವಿಧಾನವಾಗಿದೆ.
ಇದನ್ನು ಸಾಮಾನ್ಯವಾಗಿ ಎಆರ್ ಡಿಎಸ್, ನ್ಯೂಮೋನಿಯಾ (ಶ್ವಾಸಕೋಶ ವೈಫಲ್ಯ) ಮತ್ತು ಹೃದಯ ವೈಫಲ್ಯದಂತಹ ಮಾರಣಾಂತಿಕ ಪರಿಸ್ಥಿತಿಗಳಲ್ಲಿ ಬಳಸಲಾಗುತ್ತದೆ. ಇದು ಕ್ರಿಟಿಕಲ್ ಕೇರ್ ಮೆಡಿಷಿನ್‌ನ ಅತ್ಯಂತ ಮುಂಚೂಣಿಯ ಕ್ಷೇತ್ರವಾಗಿದೆ. ECMO ಸೇವೆಗಳ ಆರಂಭದಿಂದ ಕಳೆದ ಐದು ತಿಂಗಳಿನಿಂದ ಎಸ್ ಡಿಎಂ ಕ್ರಿಟಿಕಲ್ ಕೇರ್‌ನಲ್ಲಿ ಒಟ್ಟು ಐದು ರೋಗಿಗಳಿಗೆ ಯಶಸ್ಸಿಯೊಂದಿಗೆ ಚಿಕಿತ್ಸೆ ನೀಡಿದ್ದೇವೆ. ಇದು ವಿಶ್ವದ ಗುಣಮಟ್ಟಕ್ಕೆ ಸ್ಪರ್ಧಾತ್ಮಕವಾಗಿದೆ. ಇದು ಉತ್ತರ ಕರ್ನಾಟಕ ಭಾಗದ ಅಗತ್ಯವಿರುವ ಜನರಿಗೆ ಪರಿಣಾಮಕಾರಿ ರೀತಿಯಲ್ಲಿ ತಲುಪಿಸಲು ಸಾಧ್ಯವಾಗಿದೆ. ಈ ಚಿಕಿತ್ಸೆಯಲ್ಲಿ ರೋಗಿ ಗುಣಮುಖ ಆಗುವ ಪ್ರಮಾಣವನ್ನು ದಾಖಲಿಸಿದ್ದೇವೆ. ಇದರ ಅಗತ್ಯತೆ ಹೆಚ್ಚಿದಂತೆ ಬೇಡಿಕೆ ಅನುಸಾರ ಈ ಯಂತ್ರಗಳ ಸಂಖ್ಯೆ ಹೆಚ್ಚಿಸುವುದರ ಜತೆಗೆ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಿಟಿಕಲ್ ಕೇರ್ ತಂಡವಿದೆ.
ಜೆಎಸ್‌ಎಸ್ ಎಂಬ ಶಿಕ್ಷಣ ಕಾರ್ನರ್
ಇಡೀ ವಿದ್ಯಾನಗರಿ ಧಾರವಾಡದಲ್ಲಿರುವ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪೈಕಿ ಎಸ್‌ಡಿಎಂ ಸಂಸ್ಥೆಯೇ ನಿರ್ವಹಿಸುವ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯೂ ಕೂಡ ಒಂದು. ಇಲ್ಲಿ ಪ್ರತಿವರ್ಷ ಎಲ್‌ಕೆಜಿಯಿಂದ ಹಿಡಿದು ಪದವಿ ಮತ್ತು ಸ್ನಾತಕೋತ್ತರ ಪದವಿವರೆಗೂ ವಿವಿಧ ವಿಷಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ
ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ
ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ