ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಧಾರವಾಡದ “ಜೆಎಸ್‌ಎಸ್ ಶಿಕ್ಷಣ ಸಂಸ್ಥೆ”
ಸ್ನಾತಕೋತ್ತರ ಅಧ್ಯಯನ ಕೇಂದ್ರ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿವೆ
Team Udayavani, Feb 7, 2023, 12:58 PM IST
“ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ ” ಜ್ಞಾನದ ಪ್ರಸಾರದಂತಹ ಪವಿತ್ರ ಕಾರ್ಯದಲ್ಲಿ ತೊಡಗಿದವರೆಲ್ಲ ಪೂಜಾರ್ಹರಾಗುತ್ತಾರೆ. ಇಂಥವರಲ್ಲಿ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಅಗ್ರಗಣ್ಯರು. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕಾಣಿಕೆ ಅವಿಸ್ಮರಣೀಯ.
ಧಾರವಾಡದ ಜೆಎಸ್‌ಎಸ್(ಜನತಾ ಶಿಕ್ಷಣ ಸಮಿತಿ) ಶಿಕ್ಷಣ ಸಂಸ್ಥೆ ದಿವಂಗತ ಹುಕ್ಕೇರಿಕರ ರಾಮರಾಯರಿಂದ 1944ರಲ್ಲಿ ಸ್ಥಾಪಿಸಲ್ಪಟ್ಟಿತು. ಮನುಷ್ಯನ ಜೀವನದಲ್ಲಿ ಏಳು- ಬೀಳುಗಳಿರುವಂತೆ ಸಂಸ್ಥೆಯ ಚರಿತ್ರೆಯಲ್ಲಿ ಏಳು-ಬೀಳುಗಳು ಉಂಟಾದವು. ಜೆಎಸ್‌ಎಸ್ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೀಡಾಗಿ 1973 ಅಕ್ಟೋಬರ್ 18ರಂದು ಪೂಜ್ಯ ಪೇಜಾವರ ಶ್ರೀಗಳ ಅಧ್ಯಕ್ಷತೆ ಹಾಗೂ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಕಾರ್ಯಾಧ್ಯಕ್ಷತೆಯಲ್ಲಿ ಉದಯಿಸಿದ ನೂತನ ಆಡಳಿತ ಮಂಡಳಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಬಹುಶಃ ಆ ದಿನವೇ ಉತ್ತರ ಕರ್ನಾಟಕದ ಶೈಕ್ಷಣಿಕ ನಕಾಶೆ ಬದಲಾಯಿಸಿತು ಎಂದರೆ ತಪ್ಪಾಗಲಾರದು.
1973 ರಲ್ಲಿ 6-7 ಸಂಸ್ಥೆ ಹಾಗೂ 320 ವಿದ್ಯಾರ್ಥಿಗಳಿದ್ದ ಸಂಸ್ಥೆಗಳ ಜವಾಬ್ದಾರಿಯನ್ನು ಪೂಜ್ಯರು ವಹಿಸಿಕೊಂಡ ನಂತರದ ದಿನಗಳೆಲ್ಲವೂ ಸುವರ್ಣಾಕ್ಷರದಲ್ಲಿ ಬರೆಯುವಂತಹದ್ದು. ಹಂತ ಹಂತವಾಗಿ ಆರ್ಥಿಕ ಚೇತರಿಕೆ ಕಂಡ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ನೂತನ ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕುತ್ತ ಹೋಯಿತು. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ನೈತಿಕ ಹಾಗೂ ಸಂಸ್ಕಾರಭರಿತ ಶ್ರೇಷ್ಠ ಮಟ್ಟದ ಶಿಕ್ಷಣ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಆದರ್ಶವಾಗಿ ರೂಪಿತವಾಗುವಂತೆ ನೋಡಿಕೊಂಡಿರುವುದು ವಿಶೇಷ.
ಹೆಸರಿಗೆ ತಕ್ಕಂತೆ ಇರುವ ವಿದ್ಯಾಗಿರಿಯಲ್ಲಿ ಇದೀಗ ಕೆಜಿ ಯಿಂದ ಪಿಜಿಯವರೆಗೆ ಹಾಗೂ ಪಿ.ಹೆಚ್.ಡಿ ವಿದ್ಯಾಭ್ಯಾಸದ ವರೆಗೆ ಅವಕಾಶವಿದೆ. ಜನತಾ ಶಿಕ್ಷಣ ಸಮಿತಿ ಇದೀಗ ಧಾರವಾಡದ ವಿದ್ಯಾಗಿರಿಯ ಕ್ಯಾಂಪಸ್ ಸೇರಿದಂತೆ, ಹುಬ್ಬಳ್ಳಿಯೂ ಒಳ ಗೊಂಡಂತೆ ಒಟ್ಟು 4 ಕ್ಯಾಂಪಸ್‌ನಲ್ಲಿ 22 ವಿದ್ಯಾ ಸಂಸ್ಥೆಗಳಲ್ಲಿ 22,500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಒಟ್ಟು 1200 ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಿಕ್ಷಣ, ಸಿಬಿಎಸ್‌ಇ ಶಾಲೆಗಳು, ಪದವಿ ಪೂರ್ವ ಕಾಲೇಜು ಗಳು, ಡಿಪ್ಲೋಮಾ ಕಾಲೇಜು, ಐಟಿಐ ಕಾಲೇಜು, ಪದವಿ ಕಾಲೇಜುಗಳು, ಕಾನೂನು ಮಹಾವಿದ್ಯಾಲಯ, ಬಿಎಡ್ ಕಾಲೇಜು, ಎಂಬಿಎ ಕಾಲೇಜು, ಡಾ|ಡಿ. ವೀರೇಂದ್ರ ಹೆಗ್ಗಡೆ ಜನಸಂಖ್ಯಾ ಸಂಶೋಧನಾ ಹಾಗೂ ಆರ್ಥಿಕ ಸಂಶೋಧನಾ ಕೇಂದ್ರ ಅಲ್ಲದೇ ಸ್ನಾತಕೋತ್ತರ ಅಧ್ಯಯನ ಕೇಂದ್ರ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿವೆ.
ಜನತಾ ಶಿಕ್ಷಣ ಸಮಿತಿ ಕೇವಲ ವಿದ್ಯಾರ್ಜನೆಗೆ ಸೀಮಿತವಾಗದೇ ತನ್ನ ವಿವಿಧ ಅಂಗ ಸಂಸ್ಥೆಗಳ ಮುಖಾಂತರ ಹಲವಾರು ಸಮಾಜಮುಖೀ ಕಾರ್ಯ ಕ್ರಮಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರ, ಅನಕ್ಷರಸ್ಥರನ್ನು, ನಿರುದ್ಯೋಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಮಹಿಳಾ ಹಾಗೂ ವಿಶೇಷ ಚೇತನರ ಉದ್ಯೋಗಮೇಳಗಳನ್ನು, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು
ಆಯೋಜಿಸುತ್ತಾ ಬಂದಿದೆ.
ಪೂಜ್ಯ ಹೆಗ್ಗಡೆ ಯವರಿಗೆ ಧರ್ಮಸ್ಥಳ ಧರ್ಮಭೂಮಿಯಾದರೆ, ಧಾರವಾಡ ಅವರ ಕರ್ಮಭೂಮಿಯಾಗಿದೆ. 50ರ ಹೊಸ್ತಿಲಲ್ಲಿರುವ ಜನತಾ ಶಿಕ್ಷಣ ಸಮಿತಿಯ ಸಾರ್ಥಕ ಶಿಕ್ಷಣ ಸೇವೆಯ ನೆನಪಿಗಾಗಿ 2022 ಅಕ್ಟೋಬರ್ 19 ರಂದು ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಜೆಎಸ್‌ಎಸ್ ಆವರಣದಲ್ಲಿ ನೂತನ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ)ನ್ನು ಪೂಜ್ಯರು ಲೋಕಾರ್ಪಣೆ ಮಾಡಿದ್ದಾರೆ. ಅತ್ಯಾಧುನಿಕ ಯಂತ್ರೋಪಕರಣಗಳು, ಸುಸಜ್ಜಿತ ಕಟ್ಟಡ, ನೂತನ ಶಿಕ್ಷಣದಡಿಯಲ್ಲಿ ಗ್ರಾಮೀಣ ಭಾಗದ ಜನತೆಗೆ ತಾಂತ್ರಿಕ ಶಿಕ್ಷಣ ದೊರೆಯಲಿ ಎಂಬ ಮಹದಾಸೆಯೊಂದಿಗೆ ಈ ಸಂಸ್ಥೆಯ ಲೋಕಾರ್ಪಣೆ ಜರುಗಿದೆ.
ನೈತಿಕ ನೆಲೆಗಟ್ಟಿನಲ್ಲಿ ಸಂಸ್ಕಾರಯುತ ಶಿಕ್ಷಣವೇ ಜೆಎಸ್‌ಎಸ್‌ನ ಹೆಗ್ಗುರುತು ಕಳೆದ 50 ವರ್ಷಗಳಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಶೈಕ್ಷಣಿಕವಾಗಿ ಬೃಹದಾಕಾರದಲ್ಲಿ ಬೆಳೆದಿದ್ದು, ಉತ್ತರ ಕರ್ನಾಟಕದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ಯಾಂಪಸ್ ಸಂದರ್ಶನ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆಗಳ ಮೂಲಕ ಬಾರಿ ಬದಲಾವಣೆಯನ್ನು ತಂದಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಆಶೀರ್ವಾದ ದಣಿವರಿಯದೇ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಅಭಿವೃದಿಟಛಿಗೆ ಕಳೆದ 49 ವರ್ಷಗಳಿಂದ ಪಣ ತೊಟ್ಟಿದ್ದ ಡಾ|ನ.ವಜ್ರಕುಮಾರರ ಕರ್ಣಧಾರತ್ವ, ನೂತನ ಕಾರ್ಯದರ್ಶಿಗಳಾಗಿರುವ ಡಾ|ಅಜಿತ ಪ್ರಸಾದರವರ ದೂರದೃಷ್ಟಿಯ ಫಲವಾಗಿ ಜೆಎಸ್‌ಎಸ್ ಇದೀಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ.
ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದೆಂದರೆ ದೇವಸ್ಥಾನಗಳನ್ನು ನಿರ್ಮಿಸಿದ್ದಷ್ಟೆ ಸಂತೋಷವಾಗುತ್ತದೆ. ಎನ್ನುವ ಪೂಜ್ಯ ಹೆಗ್ಗಡೆಯವರ ಮನದಾಳದ ಮಾತು. ನನ್ನದೇನೂ ಇಲ್ಲ ಎಲ್ಲವೂ ಪೂಜ್ಯರ ಹಾಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ. ನಾನು ನಿಮಿತ್ತ ಮಾತ್ರ ಎನ್ನುತ್ತ ಈ ಸಂಸ್ಥೆಗಳನ್ನು ಬೆಳೆಸಿದ ದಿವಂಗತ ಡಾ|ನ. ವಜ್ರಕುಮಾರವರ ವಿನಯದ ಮಾತು. ಈ ಶಿಕ್ಷಣ ಸಂಸ್ಥೆಗೆ ಆಧುನಿಕ ಸ್ಪರ್ಶ ನೀಡಿದ ಕಾರ್ಯದರ್ಶಿಗಳಾದ ಡಾ|ಅಜಿತ ಪ್ರಸಾದರ ದೂರದೃಷ್ಟಿಯೇ
ಜೆಎಸ್‌ಎಸ್ ಇಷ್ಟೊಂದು ಉತ್ತುಂಗಕ್ಕೆ ಏರಿದೆ ಎಂದರೆ ಅತಿಶೋಕ್ತಿಯಾಗಲಾರದು.
ಮಹಾವೀರ ಉಪಾಧ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ
ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್
ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ
ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ