ಘಾಳಪ್ಪ ಅಭಿವೃದ್ದಿ ಕಾರ್ಯ ಸ್ಮರಣೀಯ: ರಾಠೊಡ
Team Udayavani, Dec 16, 2021, 1:15 PM IST
ಚಿಂಚೋಳಿ: ಮತಕ್ಷೇತ್ರದಿಂದ ಎರಡು ಸಲ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಜಿ ಸಚಿವ ದಿ| ದೇವೇಂದ್ರಪ್ಪ ಘಾಳಪ್ಪ ಜಮಾದಾರ ತಾಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಯಾರೂ ಮರೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ ಹೇಳಿದರು.
ತಾಲೂಕಿನ ಹಲಚೇರಾ ಗ್ರಾಮದಲ್ಲಿ ಮಾಜಿ ಸಚಿವ ದಿ| ದೇವೇಂದ್ರಪ್ಪ ಘಾಳಪ್ಪ ಜಮಾದಾರ 35ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಮಾಜಿ ಸಚಿವ ದಿ| ದೇವೇಂದ್ರಪ್ಪ ಜಮಾದಾರ ಆಗಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸಚಿವ ಸಂಪುಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸಚಿವರಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿಕೊಂಡರು.
ವಿದ್ಯುತ್ ಸಂಪರ್ಕ, ಚಂದ್ರಂಪಳ್ಳಿ ನೀರಾವರಿ ಯೋಜನೆ ಕಾಲುವೆಗಳ ನವೀಕರಣ, ಕುಂಚಾವರಂ ಗಡಿಪ್ರದೇಶ ದಲ್ಲಿನ ಜನರಿಗೆ ಮೂಲಸೌಕರ್ಯ, ರಸ್ತೆ, ಸೇತುವೆ, ಸರ್ಕಾರಿ ಕಟ್ಟಡ, ಬಡವರಿ ಗಾಗಿ ಮನೆ, ಪಟ್ಟಣದಲ್ಲಿ ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಪಿಯುಸಿ ಮಂಜೂರಿ ಗೊಳಿಸಿದ್ದಲ್ಲದೇ ಹಲವಾರು ಕಾರ್ಯಗಳನ್ನು ಕೈಗೊಂಡಿದ್ದರು ಎಂದು ಹೇಳಿದರು.
ಮುಖಂಡರಾದ ವಿಜಯಕುಮಾರ ಮಾನಕರ, ನ್ಯಾಯವಾದಿ ಶರಣು ಪಾಟೀಲ ಮೋತಕಪಳ್ಳಿ, ಅನಿಲಕುಮಾರ ಜಮಾದಾರ, ಸಾಗರ ಜಮಾದಾರ, ಗ್ರಾಪಂ ಅಧ್ಯಕ್ಷ ಅಂಬರೀಶ ನಾಟೀಕಾರ, ಗ್ರಾಪಂ ಸದಸ್ಯರಾದ ಮಹಾಂತೇಶ ಸೇರಿ, ನಿಶಾಂತ ಮೋಘಾ, ಚಂದ್ರಕಾಂತ ಕೊರವಾ, ಭೀಮಾಶಂಕರ ಮೈಲನೂರ, ಭೀಮರಾವ್ ತಳವಾರ, ಭೀಮಾಶಂಕರ ಮಗಿ, ಶಿವಯ್ಯ ಸ್ವಾಮಿ, ರಾಘವೇಂದ್ರ ಬೆಳಗುಪ್ಪಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.