ಮಕ್ಕಳ ಮನಸ್ಥಿತಿ ಅರಿತು ಪಾಠ ಮಾಡಿ: ರುದ್ನೂರ
Team Udayavani, Jan 6, 2022, 11:09 AM IST
ಚಿತ್ತಾಪುರ: ತರಗತಿಯಲ್ಲಿ ಮಕ್ಕಳ ಮನಸ್ಥಿತಿ ಅರಿತು ಸರ್ವತೋಮುಖ ಬೆಳವಣಿಗೆ ದೃಷ್ಟಿಕೋನದಿಂದ ಶಿಕ್ಷಕರು ಬೋಧನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಸಲಹೆ ನೀಡಿದರು.
ತಾಲೂಕಿನ ಮುಡಬೂಳ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಸಮೀಪದ ಜ್ಞಾನ ಗಂಗಾ ಭಾರತಿ ಕನ್ನಡ ಹಾಗೂ ಗ್ರೇಟ್ ಇಂಡಿಯನ್ ಆಂಗ್ಲ ಶಾಲೆಯಲ್ಲಿ ಹೊರಾಂಗಣ ಕ್ರೀಡಾ ಸಾಮಾಗ್ರಿ ಬಳಕೆಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ಮಕ್ಕಳ ಸ್ವಾವಲಂಬಿ ಜೀವನಕ್ಕೆ ಸಹಾಯಕವಾಗುವ ರೀತಿಯಲ್ಲಿ ಶಿಕ್ಷಕರು ಪಾಠದ ಮೂಲಕ ಶಿಕ್ಷಣ ಮತ್ತು ಜ್ಞಾನ ನೀಡಬೇಕು. ಶಾಲೆಗಳಲ್ಲಿ ಅರ್ಹತೆ ಮತ್ತು ಬದ್ಧತೆಯ ಶಿಕ್ಷಕರು ಇರಬೇಕು. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮತ್ತು ಆಡಳಿತ ಮಂಡಳಿ ಉತ್ಸುಕರಾಗಿರಬೇಕು ಎಂದು ಅವರು ಹೇಳಿದರು.
ತೋನಸನ ಹಳ್ಳಿಯ ಕೋತ್ತಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಪ್ರಕಾಶ ಹಂಚನಾಳ, ವಿಜಯಕುಮಾರ ಹಂಚನಾಳ, ರಮೇಶ ಬಟಗೇರಿ, ಜಗದೇವ ದಿಗ್ಗಾಂವಕರ್, ವೆಂಕಟೆರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಪಾಟೀಲ್, ಬಸವರಾಜ ಹಂಚನಾಳ, ಶಿಕ್ಷಕಿಯರಾದ ಕರುಣಾದೇವಿ, ಸ್ನೇಹಾ, ರಾಧಿಕಾ, ಇಂದಿರಾ ಇದ್ದರು. ಮುಖ್ಯ ಶಿಕ್ಷಕ ಸಂತೋಷಕುಮಾರ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.