
ವಿಜಯೇಂದ್ರಗೆ ಹೊಸ ಹೊಣೆ; ನಾನಾ ಮೋರ್ಚಾಗಳ ಜಿಲ್ಲಾ ಸಮಾವೇಶದ ಸಂಚಾಲಕ ಸ್ಥಾನ
ಸಿ.ಸಿ. ಪಾಟೀಲ್, ಸುಧಾಕರ್‌ಗೂ ಜವಾಬ್ದಾರಿ
Team Udayavani, Feb 9, 2023, 7:00 AM IST

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಸೆದ “ಬ್ರಾಹ್ಮಣ ಸಿಎಂ’ ಗೂಗ್ಲಿಯಿಂದ ಕಂಗೆಟ್ಟ ಬಿಜೆಪಿ ತನ್ನ ಸಾಂಪ್ರದಾಯಿಕ ಮತ ಬ್ಯಾಂಕ್ ಆದ ಲಿಂಗಾಯತ ಸಮುದಾಯಕ್ಕೆ ಪ್ರಬಲ ಸಂದೇಶ ರವಾನೆ ಮಾಡಿದೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಕೊನೆಗೂ ಸಂಘಟನಾತ್ಮಕವಾಗಿ ಮುನ್ನೆಲೆಗೆ ತಂದಿದೆ. ಇದರ ಜತೆ ಪಂಚಮಸಾಲಿ ಸಮುದಾಯದ ಹಿರಿಯ ಸಚಿವ ಸಿ.ಸಿ.ಪಾಟೀಲ್ ಅವರಿಗೆ ವಿಜಯ ಸಂಕಲ್ಪ ಯಾತ್ರೆಯ ಉಸ್ತುವಾರಿ ಹೊಣೆ ನೀಡಿದೆ.
ಈ ಮೂಲಕ ಲಿಂಗಾಯತ ಸಮುದಾಯದಲ್ಲಿ ಮೂಡಿದ್ದ “ಅವಿಶ್ವಾಸ’ವನ್ನು ತಣಿಸುವ ಪ್ರಯತ್ನವನ್ನು ಕೇಸರಿ ಪಾಳಯ ನಡೆಸಿದೆ.
ಪಕ್ಷದಲ್ಲಿ ಯಡಿಯೂರಪ್ಪ ಅವರ ಅವಗಣನೆಯಾಗುತ್ತಿದೆ ಎಂಬ ಚರ್ಚೆಯ ಮಧ್ಯೆಯೇ ವಿಜಯೇಂದ್ರ ಅವರಿಗೆ ನಾನಾ ಮೋರ್ಚಾಗಳ ಜಿಲ್ಲಾ ಸಮಾವೇಶದ ಸಂಚಾಲಕ ಸ್ಥಾನವನ್ನು ವಹಿಸಲಾಗಿದೆ.
ಮಂಗಳವಾರ ಸಾಯಂಕಾಲ ಬಿಜೆಪಿ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಆದೇಶದ ಬಗ್ಗೆ ಅಧಿಕೃತ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಕಚೇರಿಗೆ ತೆರಳಿ ಸಭೆ ನಡೆಸುವ ಮೂಲಕ ವಿಜಯೇಂದ್ರ “ಕಾರ್ಯಾಚರಣೆ’ ಪ್ರಾರಂಭಿಸಿದರು.
ಸಿ.ಸಿ. ಪಾಟೀಲ್ ಹಾಗೂ ವಿಜಯೇಂದ್ರ ಅವರನ್ನು ಮುಂಚೂಣಿಗೆ ತರುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆ ಯಲು ಬಿಜೆಪಿ ಮುಂದಾಗಿದೆ. ಯಡಿಯೂರಪ್ಪ ಬಣಕ್ಕೆ ಆದ್ಯತೆ ನೀಡುವ ಜತೆಗೆ “ಬ್ರಾಹ್ಮಣ ಸಿಎಂ’ ವಾದ ವನ್ನೂ ತಣ್ಣಗಾಗಿಸುವ ತಂತ್ರವಿದು. ಎಲ್ಲದ ಕ್ಕಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಇಬ್ಬರಿಗೂ ಆಪ್ತ ರಾದ ಸಿ.ಸಿ. ಪಾಟೀಲ್ ಅವರಿಗೆ ವಿಜಯ ಸಂಕಲ್ಪ ಯಾತ್ರೆಯ ಸಿದ್ಧತೆ ಹೊಣೆ ನೀಡ ಲಾಗಿದೆ. ಈ ಮೂಲಕ ಪಂಚಮಸಾಲಿ ಸಮುದಾಯದ ಅಸಮಾಧಾನ ಶಮನಕ್ಕೂ ಪರೋಕ್ಷವಾಗಿ ಪ್ರಯತ್ನಿಸಲಾಗಿದೆ.
ವಿಜಯೇಂದ್ರ ಪಾತ್ರ ಏನು?
ಸಂಘಟನಾತ್ಮಕವಾಗಿ ಬಿಜೆಪಿಯಲ್ಲಿ ಹಲವು ಮೋರ್ಚಾಗಳಿವೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರತೀ ಜಿಲ್ಲೆಯಲ್ಲೂ ಈ ಮೋರ್ಚಾಗಳ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಲು ಕೆಲ ದಿನಗಳ ಹಿಂದೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಸಭೆ ನಡೆಯಬೇಕಿದ್ದು,. ಸಂಘ ಟನಾತ್ಮಕವಾಗಿ “ತನು ಮನ ಧನ’ ವಿನಿಯೋಗದ ಅಗತ್ಯವಿದೆ. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಕೆ.ಆರ್.ಪೇಟೆ ಹಾಗೂ ತುಮಕೂರು ವಿಧಾನಸಭಾ ಕ್ಷೇತ್ರದ ಉಪ ಚುನಾ ವಣೆ ಉಸ್ತುವಾರಿ ವಹಿಸಿ ಸೈ ಎನಿಸಿಕೊಂಡಿದ್ದ ವಿಜಯೇಂದ್ರಗೆ ರಾಜ್ಯ ಮಟ್ಟದಲ್ಲಿ ತಮ್ಮ ಸಂಘಟನ ಸಾಮರ್ಥ್ಯ ತೋರಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಪಕ್ಷದಲ್ಲಿ ವಿಜಯೇಂದ್ರ ಅವರಿಗೆ ಪೂರ್ಣ ಪ್ರಮಾಣದಲ್ಲಿ ದೊರೆತ ಮೊದಲ ಜವಾಬ್ದಾರಿ ಇದು.
ಪಾಟೀಲ್ ಸ್ಥಾನವೇನು?
ರಾಜ್ಯದ ನಾಲ್ಕು ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ನಡೆಸಲು ನಿರ್ಧರಿಸಿದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಹೀಗಾಗಿ ಇದರ ತಯಾರಿ, ಸಂಯೋಜನೆ ಹಾಗೂ ನಿರ್ವಹಣೆಯಲ್ಲಿ ತಮಗೆ ಆಪ್ತರಾದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರನ್ನು ನೇಮಿಸಿದ್ದಾರೆ. ಯಾತ್ರೆಯ ಸ್ವರೂಪ ಹೇಗಿರಬೇಕು, ಖರ್ಚು ವೆಚ್ಚ ಇತ್ಯಾದಿ ಎಲ್ಲದರ ನಿರ್ವಹಣೆ ಹೊಣೆ ಸಿಸಿ ಪಾಟೀಲರ ಹೆಗಲಿಗೇರಿಸಲಾಗಿದೆ.
ಅಚ್ಚರಿಯ ಆಯ್ಕೆ
ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಸ್ಥಾನಕ್ಕೆ ಆರೋಗ್ಯ ಹಾಗೂ ವೈದ್ಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಅವರನ್ನು ನಿಯೋಜಿಸಿರುವುದು ಮತ್ತೂಂದು ಅಚ್ಚರಿ. ಸಾಮಾನ್ಯವಾಗಿ ಪ್ರಣಾಳಿಕೆ ಸಮಿತಿಯಲ್ಲಿ ಪಕ್ಷದ ಮೂಲ ಚಿಂತನೆಯಿಂದ ಹೊರತಾದವರನ್ನು ಬಿಜೆಪಿ ನಿಯೋಜಿಸಿದ್ದು ಕಡಿಮೆ. ಸಮಾಜದ ಎಲ್ಲ ವರ್ಗದಿಂದ ಅಗತ್ಯವಾದ ಸಲಹೆಗಳನ್ನು ಸ್ವೀಕರಿಸಿ ಪಕ್ಷದ ಪ್ರಣಾಳಿಕೆಗೆ ಒಂದು ರೂಪ ನೀಡುವ ಹೊಣೆಗಾರಿಕೆ ಈ ಸಮಿತಿಯ ಮೇಲಿದೆ.
ಟಾಪ್ ನ್ಯೂಸ್
