
ಬೆಂಗಳೂರಿನ ರಿಕಿ ಕೇಜ್‌ಗೆ 3ನೇ ಗ್ರ್ಯಾಮಿ ಅವಾರ್ಡ್
ಡಿವೈನ್ ಟೈಡ್ಸ್ ಆಡಿಯೋ ಆಲ್ಬಂಗೆ ಈ ಪ್ರಶಸ್ತಿ; 3 ಗ್ರ್ಯಾಮಿ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ
Team Udayavani, Feb 7, 2023, 7:00 AM IST

ನವದೆಹಲಿ:ಬೆಂಗಳೂರು ಮೂಲದ ಸಂಗೀತಗಾರ ರಿಕಿ ಕೇಜ್ ಅವರು ಮತ್ತೂಮ್ಮೆ ಭಾರತಕ್ಕೆ ಸಿಹಿಸುದ್ದಿ ನೀಡಿದ್ದಾರೆ. ಕೇಜ್ ಅವರು ಮೂರನೇ ಬಾರಿಗೆ ಅಂತಾರಾಷ್ಟ್ರೀಯ ಸಂಗೀತ ಪ್ರಶಸ್ತಿಯಾದ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ “ಡಿವೈನ್ ಟೈಡ್ಸ್’ ಆಲ್ಬಂಗೆ “ತಲ್ಲೀನಗೊಳಿಸುವ ಅತ್ಯುತ್ತಮ ಆಡಿಯೋ ಆಲ್ಬಂ’ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಬಂದಿದೆ.
ಈ ಮೂಲಕ ಮೂರು ಗ್ರ್ಯಾಮಿ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಘೋಷಿಸಲಾಗಿದೆ.
ಅಮೆರಿಕದ ಸಂಗೀತಗಾರ ಸ್ಟಿವಾರ್ಟ್ ಕೋಪ್‌ಲ್ಯಾಂಡ್ ಅವರ ಸಹಭಾಗಿತ್ವದಲ್ಲಿ ರಿಕಿ ಕೇಜ್ ಅವರು ಈ ಡಿವೈನ್ ಟೈಡ್ಸ್ ಆಲ್ಬಂ ರೂಪಿಸಿದ್ದರು. 2022ರಲ್ಲೂ ಇವರಿಬ್ಬರೂ “ಅತ್ಯುತ್ತಮ ನ್ಯೂ ಏಜ್ ಆಲ್ಬಂ’ ವಿಭಾಗದಲ್ಲಿ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದರು. ಅದಕ್ಕೂ ಮುನ್ನ 2015ರಲ್ಲಿ “ವಿಂಡ್ಸ್ ಆಫ್ ಸಂಸಾರ’ ಆಲ್ಬಂಗಾಗಿ ರಿಕಿ ಕೇಜ್ ಈ ಪ್ರಶಸ್ತಿ ಗೆದ್ದಿದ್ದರು.
ರಿಕಿ ಅವರು ಗ್ರ್ಯಾಮಿ ಅವಾರ್ಡ್ ಗೆದ್ದ ಅತ್ಯಂತ ಕಿರಿಯ ಮತ್ತು 4ನೇ ಭಾರತೀಯ. ಮೂರು ಗ್ರ್ಯಾಮಿ ಗೆದ್ದ ಮೊದಲ ಭಾರತೀಯ. ಈ ಹಿಂದೆ ಪಂಡಿತ್ ರವಿಶಂಕರ್, ಜುಬೀನ್ ಮೆಹ್ತಾ, ಝಕೀರ್ ಹುಸೇನ್ ಮತ್ತು ಎ.ಆರ್.ರೆಹಮಾನ್ ಅವರು ಎರಡು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದರು.
ಟಾಪ್ ನ್ಯೂಸ್
