ನಿವೃತ್ತ ಬಿಷಪ್ ಆ್ಯಂಟನಿ ಫೆರ್ನಾಂಡಿಸ್ ನಿಧನ
Team Udayavani, Feb 4, 2023, 1:09 AM IST
ಉಡುಪಿ: ಉತ್ತರ ಪ್ರದೇಶದ ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಉಡುಪಿ ಕಳತ್ತೂರು ಮೂಲದ ಆ್ಯಂಟನಿ ಫೆರ್ನಾಂಡಿಸ್(86) ಫೆ.3ರಂದು ಬರೇಲಿಯಲ್ಲಿ ನಿಧನ ಹೊಂದಿದರು. ಮೃತರು ಸಹೋದರ ಬೆಂಜಮಿನ್ ಫೆರ್ನಾಂಡಿಸ್ ಅವರನ್ನು ಅಗಲಿದ್ದಾರೆ.
1936ರಲ್ಲಿ ಕಳತ್ತೂರು ನಡಿಗುತ್ತು ಬಳಿಯ ನಿವಾಸಿ ಡೇವಿಡ್ ಫೆರ್ನಾಂಡಿಸ್ ಮತ್ತು ಬ್ರಿಜಿತ್ ಫೆರ್ನಾಂಡಿಸ್ ದಂಪತಿಯ ಹಿರಿಯ ಪುತ್ರನಾಗಿ ಜನಿಸಿದ ಅವರು ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಶಿರ್ವ ಡಾನ್‌ಬಾಸ್ಕೊ ಹಿ.ಪ್ರಾ.ಶಾಲೆ ಮತ್ತು ಸಂತ ಮೇರಿ ಹೈಸ್ಕೂಲ್‌ನಲ್ಲಿ ಮುಗಿಸಿದ್ದರು. ಬಳಿಕ ವಾರಾಣಸಿ ಧರ್ಮಪ್ರಾಂತ್ಯಕ್ಕೆ ಸೇರ್ಪಡೆಯಾದರು.
ಸೈಂಟ್ ಪಾವ್ಲ್ ಸೆಮಿನರಿ ಮತ್ತು ಅಲಹಾಬಾದ್‌ನ ಸೈಂಟ್ ಜೋಸೆಫ್ ರೀಜನಲ್ ಸೇಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪೂರೈಸಿದ ಬಳಿಕ 1964ರ ಡಿ. 2ರಂದು ಮುಂಬಯಿಯಲ್ಲಿ ಪೋಪ್ ಭಾಗವಹಿಸಿದ್ದ ಯೂಕಾರಿಸ್ತಿಕ್ ಸಮಾವೇಶದಲ್ಲಿ ಗುರು ದೀಕ್ಷೆ ಪಡೆದಿದ್ದರು. 26 ವರ್ಷಗಳ ಕಾಲ ಧರ್ಮ ಗುರುಗಳಾಗಿ ವಾರಾಣಸಿ ಮತ್ತು ಗೋರಖ್‌ಪುರದಲ್ಲಿ ಸೇವೆ ಸಲ್ಲಿಸಿದ್ದರು. ವಿಕಾರ್ ಜನರಲ್ ಆಗಿ ವಾರಾಣಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ 1989 ಜ.19ರಂದು ಬರೇಲಿಯ ಪ್ರಥಮ ಬಿಷಪ್ ಆಗಿ ನೇಮಕಗೊಂಡಿದ್ದರು. ಅದೇ ವರ್ಷ ಮಾ.29ರಂದು ಸೈಂಟ್ ಕೆಥೆಡ್ರಲ್‌ನಲ್ಲಿ ಬಿಷಪ್ ದೀಕ್ಷೆ ಪಡೆದು ಅಧಿಕಾರ ವಹಿಸಿಕೊಂಡಿದ್ದರು. 2014ರ ನವೆಂಬರ್‌ನಲ್ಲಿ ಬಿಷಪ್ ಹುದ್ದೆ ಯಿಂದ ನಿವೃತ್ತಿ ಹೊಂದಿದ್ದರು.