ಕಾರ್ಖಾನೆಯಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು: ಕುಟುಂಬಸ‍್ಥರ ಆಕ್ರೋಶ
Team Udayavani, Jan 23, 2022, 11:29 AM IST
ಸೇಡಂ: ಇಲ್ಲಿನ ವಾಸವದತ್ತಾ ಕಾರ್ಖಾನೆಯ ರಾವ್ ಮಿಲ್‌ನ ಯೂನಿಟ್ 4ರ ಗುತ್ತಿಗೆ ಕಾರ್ಮಿಕನೊಬ್ಬ ಮೇಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಬಾಬಾ ಪಟೇಲ ಮಶಾಕ್ ಪಟೇಲ್ ಮೃತಪಟ್ಟ ಕಾರ್ಮಿಕ. ಈ ಘಟನೆಯಿಂದಾಗಿ ಕಾರ್ಖಾನೆಯಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆಕ್ರೋಶಗೊಂಡ ಮೃತನ ಸಂಬಂಧಿಕರು ಕಾರ್ಖಾನೆಯ ಕಿಟಕಿ ಗಾಜು, ಕುರ್ಚಿಗಳನ್ನು ಪುಡಿಪುಡಿ ಮಾಡಿದ್ದಾರೆ.
ಮೃತನ ಕುಟುಂಬಕ್ಕೆ 50 ಲಕ್ಷ ರೂ., ಇಬ್ಬರಿಗೆ ನೌಕರಿ ನೀಡುವಂತೆ ರಾಜ್ಯ ಹಾಪಕಾಮ್ಸ್ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಭಾರತೀಯ ಮಜ್ದೂರ ಸಂಘದ ಅಧ್ಯಕ್ಷ ಅನಿಲಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ (ಜಿಕೆ) ಹಾಗೂ ಕಾರ್ಖಾನೆ ಅಧಿ ಕಾರಿಗಳನ್ನು ಆಗ್ರಹಿಸಿದರು.
ಇದಕ್ಕೆ ಆಡಳಿತ ಮಂಡಳಿ ಒಪ್ಪದಿದ್ದಾಗ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ. ಕೂಡಲೇ ಪರಿಹಾರ ಕಲ್ಪಿಸಬೇಕು ಇಲ್ಲವಾದಲ್ಲಿ ಶವವಿಟ್ಟು ಕಾರ್ಖಾನೆ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗುವುದಾಗಿ ಬಸವರಾಜ ಪಾಟೀಲ ಎಚ್ಚರಿಸಿದರು. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.