ಕರಾವಳಿಯಲ್ಲಿ ಉತ್ತಮ ಮಳೆ, ಹಾನಿ
Good rain, damage,udupi,Mangalore
Team Udayavani, Nov 2, 2021, 5:30 AM IST
ಮಂಗಳೂರು: ಕರಾವಳಿಯ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಮೂಡುಬಿದಿರೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟರೆ ಮೂವರು ಗಾಯಗೊಂಡಿದ್ದಾರೆ.
ಮಂಗಳೂರು ನಗರದಲ್ಲಿ ಸಂಜೆ ವೇಳೆಗೆ ಗುಡುಗು- ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದ್ದು, ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಮೂಡುಬಿದಿರೆಯಲ್ಲಿಯೂ ಭಾರೀ ಮಳೆಯಾಗಿ ಕೃತಕ ನೆರೆ ಸೃಷ್ಟಿಯಾಗಿತ್ತು. ಬಂಟ್ವಾಳ ತಾಲೂಕಿನಾದ್ಯಂತ ಸಂಜೆ 4.30ರಿಂದ ಒಂದು ತಾಸಿಗೂ ಅಧಿಕ ಹೊತ್ತು ಗುಡುಗು ಸಹಿತ ನಿರಂತರ ಧಾರಾಕಾರ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ.
ಉಡುಪಿ: ಗುಡುಗು ಸಹಿತ ಭಾರೀ ಮಳೆ
ಉಡುಪಿ: ತಾಲೂಕಿನಾದ್ಯಂತ ಸೋಮವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದಾಗಿ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಯಿತು. ರಾಜ್ಯೋತ್ಸವ ರಜೆಯ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಖರೀದಿಗೆ ನಗರಕ್ಕೆ ಬಂದಿದ್ದ ಜನರು ಮಳೆಯಿಂದ ತೊಂದರೆ ಅನುಭವಿಸಿದರು. ನಗರದ ಕೆಲ ಸರ್ಕಲ್‌ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಎಲ್ಲೋ ಅಲರ್ಟ್
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನ. 2ರಿಂದ 5ರವರೆಗೆ ಕರಾವಳಿ ಭಾಗದಲ್ಲಿ ಭಾರೀ ಮಳೆ ಯಾಗುವ ಮುನ್ಸೂಚನೆಯಿದ್ದು “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಐಎಂಡಿ ಮಾಹಿತಿಯಂತೆ ಮಂಗಳೂರಿನಲ್ಲಿ ಸೋಮವಾರದಂದು 31.6 ಡಿ.ಸೆ. ಗರಿಷ್ಠ ಮತ್ತು 23 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಈಶ್ವರಮಂಗಲ: ಮನೆ, ಕೃಷಿಗೆ ಅಪಾರ ಹಾನಿ
ಈಶ್ವರಮಂಗಲ: ಪರಿಸರದಲ್ಲಿ ರವಿವಾರ ರಾತ್ರಿ ಸುರಿದ ಗಾಳಿ ಸಹಿತ ಸುರಿದ ಮಳೆಗೆ ಮನೆ, ಕೃಷಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ನೆಟ್ಟಣಿಗೆ ಮುಟ್ನೂರು ಗ್ರಾಮದ ಕರ್ನೂರಿನ ಕೃಷ್ಣಪ್ಪ ಗೌಡ ಅವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯಾಗಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಫಲಭರಿತ 2 ತೆಂಗಿನಮರ, ಮನೆಯ ವಯರಿಂಗ್, ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ಕಂದಾಯ ಇಲಾಖೆಯ ರಘುನಾಥ, ಪಂಚಾಯತ್ ಸದಸ್ಯ ಶ್ರೀರಾಮ ಪಕ್ಕಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಡುವನ್ನೂರು ಗ್ರಾಮದ ಕೆಲವು ಕಡೆ ಗಾಳಿಯಿಂದಾಗಿ 25ಕ್ಕಿಂತಲೂ ಹೆಚ್ಚು ಫಲಭರಿತ ಅಡಿಕೆ ಮರಗಳು, ಬಾಳೆಗಿಡ, ಅಡಿಕೆ ಗಿಡಗಳು ಧರೆಗುರುಳಿವೆ.
ವಿದ್ಯುತ್ ವೈಫಲ್ಯ
ಕಳೆದ ಎರಡು ದಿನಗಳಿಂದ ರಾತ್ರಿ ಮಳೆ ಸುರಿಯುತ್ತಿದ್ದು ಗಡಿಭಾಗದಲ್ಲಿ ವಿದ್ಯುತ್ ವೈಫಲ್ಯ ಉಂಟಾಗುತ್ತಿದೆ. ನಾಗರಿಕರು ರಾತ್ರಿ ಇಡೀ ಕತ್ತಲಲ್ಲಿ ಕಾಲ ಕಳೆಯ ಬೇಕಾಗಿದೆ. ರವಿವಾರ ರಾತ್ರಿ ಪಡುವನ್ನೂರು ಗ್ರಾಮದ ಮುಡಯೂರಿ ನಲ್ಲಿ ವಿದ್ಯುತ್ ಕಂಬ ತುಂಡಾಗಿದ್ದು ವಿದ್ಯುತ್ ಸರಬುರಾಜಿನಲ್ಲಿ ವ್ಯತ್ಯಯವಾಗಿದೆ.