ಗುರುಗ್ರಾಮ್: ಬಹುಮಹಡಿ ವಸತಿ ಕಟ್ಟಡದ ರೂಫ್ ಕುಸಿದು ಮಹಿಳೆ ಸಾವು
Team Udayavani, Feb 11, 2022, 11:31 AM IST
ಗುರುಗ್ರಾಮ್ : ನಗರದ ಸೆಕ್ಟರ್ 109 ರ ಚಿಂಟೆಲ್ ಪ್ಯಾರಾಡಿಸೊ ಸೊಸೈಟಿಯ ಫ್ಲ್ಯಾಟ್ ಒಂದರ ರೂಫ್ ಕುಸಿದ ಅವಘಡ ಸಂಭವಿಸಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. 3-4 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸಂಜೆ 6.30 ರ ವೇಳೆಗೆ ಸೊಸೈಟಿಯ ಡಿ ಟವರ್ ನ ಎಂಟನೇ ಮಹಡಿಯಲ್ಲಿ ಕಾಮಗಾರಿ ನಡೆಯುತ್ತಿತ್ತು, ಈ ವೇಳೆ ಏಕಾಏಕಿ ಏಳನೇ ಮಹಡಿಯಿಂದ ಮೊದಲ ಮಹಡಿಯ ಸೀಲಿಂಗ್ ಮತ್ತು ನೆಲ ಕುಸಿದಿದೆ ಎನ್ನಲಾಗಿದೆ. ಅಂದರೆ ಏಳು ಅಂತಸ್ತಿನ ಮೇಲ್ಛಾವಣಿ ಒಡೆದು ಮೊದಲ ಅಂತಸ್ತಿನ ಫ್ಲಾಟ್ ಗೆ ಬಂದಿತ್ತು.
ಆರನೇ ಮಹಡಿಯ ಛಾವಣಿಯು ಮೊದಲು ಮುರಿದುಹೋಯಿತು, ಅಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಎನ್ಡಿಆರ್ಎಫ್ನ 8ನೇ ಬೆಟಾಲಿಯನ್ ಅನ್ನು ಘಾಜಿಯಾಬಾದ್ನಿಂದ ರಕ್ಷಣಾ ಕಾರ್ಯಕ್ಕೆ ಕರೆಸಿಕೊಳ್ಳಲಾಗಿದೆ.
ಅವಘಡದಲ್ಲಿ ಮಹಿಳೆ ಸಾವನ್ನಪ್ಪಿದ ನಂತರ ಗುರುಗ್ರಾಮ್ ಪೊಲೀಸರು ಬಿಲ್ಡರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಮೃತರನ್ನು 31 ವರ್ಷದ ಏಕ್ತಾ ಭಾರದ್ವಾಜ್ ಎಂದು ಗುರುತಿಸಲಾಗಿದೆ.