ಕೇರಳ ಮಾದರಿ ಪ್ಯಾಕೇಜ್‌ಗೆ ಎಚ್‌ಡಿಕೆ ಒತ್ತಾಯ
Team Udayavani, Mar 21, 2020, 3:05 AM IST
ಬೆಂಗಳೂರು: ಕೊರೊನಾ ವೈರಸ್‌ನಿಂದ ಹದಗೆಟ್ಟಿರುವ ಆರ್ಥಿಕತೆಗೆ ಚೈತನ್ಯ ನೀಡಲು ಕೇರಳ ಸರ್ಕಾರ ಅಲ್ಲಿನ ಜನರಿಗೆ 20 ಸಾವಿರ ಕೋಟಿ ರೂ.ಪ್ಯಾಕೇಜ್ ಘೋಷಿಸಿದ್ದು, ಅದೇ ಮಾದರಿಯ ಪರಿಹಾರವನ್ನು ಕರ್ನಾಟಕದಲ್ಲೂ ಯಾಕೆ ಘೋಷಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಿಸಿರುವ ಪರಿಹಾರದಲ್ಲಿ ಆರೋಗ್ಯ ಸೇವೆ, ಸಾಲಕ್ಕೆ ನೆರವು, ಮಾಸಾಶನ, ನರೇಗಾ ಅನುದಾನ, ಉಚಿತ ದಿನಸಿ, ಕಡಿಮೆ ದರದಲ್ಲಿ ಊಟ, ಬಾಕಿ ಮರು ಪಾವತಿ, ಪರಿಹಾರ ಮೊತ್ತಗಳು ಸೇರಿವೆ. ಆ ನಡೆ ನಮಗೆ ಮಾದರಿಯಾಕೆ ಆಗಬಾರದು ಎಂದು ಹೇಳಿದ್ದಾರೆ. ಕೇರಳದಲ್ಲಿ 26 ಕೊರೊನಾ ಪ್ರಕರಣ ವರದಿಯಾಗಿದ್ದರೆ ಕರ್ನಾಟಕದಲ್ಲಿ 15 ಪ್ರಕರಣಗಳು ವರದಿಯಾಗಿವೆ.
ಅಂದರೆ ರಾಜ್ಯದಲ್ಲಿ ಮಹಾಮಾರಿ ಬಗೆಗಿನ ಆತಂಕ, ಭೀತಿ ಕೇರಳಕ್ಕಿಂತಲೂ ಭಿನ್ನವೇನೂ ಇಲ್ಲ. ಇದು ರಾಜ್ಯದ ಆರ್ಥಿಕತೆಗೂ ಪೆಟ್ಟು ನೀಡುತ್ತಿದೆ. ಸದ್ಯ ಬಡ ವರ್ಗದ ಮೇಲೆ ಇದು ನೇರ ಪರಿಣಾಮ ಬೀರುತ್ತದೆ. ರಾಜ್ಯವೂ ಕೇರಳ ಮಾದರಿ ನಿರ್ಧಾರಕ್ಕೆ ಬರಬೇಕು. ಆರ್ಥಿಕತೆಗೆ ಚೈತನ್ಯ ತುಂಬಬೇಕು. ಕೊರೊನಾ ವೈರಸ್ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಳಿಸಬೇಕು ಎಂದು ತಿಳಿಸಿದ್ದಾರೆ.