World Cup: ಅನುಭವ, ಯುವಶಕ್ತಿಯೊಂದಿಗೆ ಕಣಕ್ಕಿಳಿಯಲಿದೆ ಭಾರತ

ಇಲ್ಲಿದೆ ಏಕದಿನ ವಿಶ್ವಕಪ್‌ ಕೂಟದಲ್ಲಿ ಭಾರತ ತಂಡದ ಪರಿಸ್ಥಿತಿಯ ವಿಶ್ಲೇಷಣೆ...

Team Udayavani, Oct 3, 2023, 11:07 PM IST

team india

10 ತಂಡಗಳು ಭಾಗವಹಿಸಲಿರುವ ಏಕದಿನ ವಿಶ್ವಕಪ್‌ ಕೂಟ ಅ.5ರಿಂದ ನ.19ರವರೆಗೆ ನಡೆಯಲಿದೆ. ಪೂರ್ಣ ಭಾರತದ ಆತಿಥೇಯತ್ವದಲ್ಲೇ ನಡೆಯುತ್ತಿರುವ ಮೊದಲ ಏಕದಿನ ವಿಶ್ವಕಪ್‌ ಇದು. ಎಲ್ಲ ತಂಡಗಳು ದೊಡ್ಡದೊಂದು ಸವಾಲಿಗೆ ಸಿದ್ಧವಾಗಿವೆ. ಈ ಪೈಕಿ ಆತಿಥೇಯ ದೇಶವಾದ ಭಾರತ ಕಪ್‌ ಗೆಲ್ಲುವ ಮೆಚ್ಚಿನ ತಂಡಗಳಲ್ಲೊಂದು. ಈ ಹಿನ್ನೆಲೆಯಲ್ಲಿ ಭಾರತ ತಂಡದ ಪರಿಸ್ಥಿತಿಯ ವಿಶ್ಲೇಷಣೆ ಇಲ್ಲಿದೆ.

ಅಂಕಿಗಳ ಆಧಾರದಲ್ಲಿ ಬ್ಯಾಟಿಂಗ್‌ ಪ್ರಬಲ!
ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಅವರಿರುವ ಬ್ಯಾಟಿಂಗ್‌ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಮೇಲ್ನೋಟಕ್ಕಂತೂ ಈ ಬ್ಯಾಟಿಂಗ್‌ ಪಡೆಯನ್ನು ಭೇದಿಸುವುದು ಜಗತ್ತಿನ ಯಾವುದೇ ಬೌಲಿಂಗ್‌ ಬಳಗಕ್ಕೂ ಸವಾಲಿನ ಕೆಲಸವಾಗಿದೆ. ಹಾಗಂತ ದೊಡ್ಡದೊಡ್ಡ ಹೆಸರುಗಳಿದ್ದ ತತ್‌ಕ್ಷಣ ಕೆಲಸ ಸರಾಗವಾಗುತ್ತದೆ, ಎಲ್ಲವೂ ತಂತಾನೆ ನಡೆದುಬಿಡುತ್ತದೆ ಎನ್ನಲು ಸಾಧ್ಯವಿಲ್ಲ. ಅವರ ವರ್ತಮಾನದ ಸ್ಥಿತಿಯನ್ನು ಗಮನಿಸಬೇಕಾಗುತ್ತದೆ. ಇಲ್ಲಿನ ಅಂಕಿಗಳು ಬೇರೆಯ ಸಂಗತಿಯನ್ನೇ ಹೇಳುತ್ತವೆ.

ಸಿರಾಜ್‌, ಕುಲದೀಪ್‌ ಮೇಲೆ ನಿರೀಕ್ಷೆ
ವೇಗಿ ಮೊಹಮ್ಮದ್‌ ಸಿರಾಜ್‌, ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಏಷ್ಯಾ ಕಪ್‌ನಲ್ಲಿ ಮಿಂಚಿದ್ದಾರೆ. ಹೀಗಾಗಿ ಈ ಇಬ್ಬರು ಬುಮ್ರಾ ಜತೆ ಬೌಲಿಂಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅನುಭವಿ ವೇಗಿ ಮೊಹಮ್ಮದ್‌ ಶಮಿ, ಇನ್ನೊಬ್ಬ ವೇಗಿ ಶಾರ್ದೂಲ್‌ ಠಾಕೂರ್‌ ಕಣಕ್ಕಿಳಿಯುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಂಡದ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಇತರೆ ಆಟಗಾರರ ಲಯ, ಪಿಚ್‌ ಪರಿಸ್ಥಿತಿ, ಗಾಯಾಳುಗಳ ಸ್ಥಿತಿಯನ್ನೆಲ್ಲ ಗಮನಿಸಿ ನಿರ್ಧರಿಸಲಾಗುತ್ತದೆ. ಹೀಗೆ ನೋಡಿದರೆ ಲಯದಲ್ಲಿರುವ ಸಿರಾಜ್‌, ಕುಲದೀಪ್‌ ಆಯ್ಕೆ ಖಚಿತ. ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಕುಲದೀಪ್‌ ತಂಡದ ಪ್ರಮುಖ ಅಸ್ತ್ರ. ಪಂದ್ಯದ ಮಧ್ಯಾವಧಿಯಲ್ಲಿ ಇವರ ಪಾತ್ರ ನಿರ್ಣಾಯಕವಾಗುತ್ತದೆ.

ರೋಹಿತ್‌, ಕೊಹ್ಲಿ, ರಾಹುಲ್‌ ಅಸ್ಥಿರ ಆಟ
ಪ್ರಸ್ತುತ ಏಕದಿನ ವಿಶ್ವ ರ್‍ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮ 11, ವಿರಾಟ್‌ ಕೊಹ್ಲಿ 9ನೇ ರ್‍ಯಾಂಕಿಂಗ್‌ನಲ್ಲಿದ್ದಾರೆ. ಕೆ.ಎಲ್‌.ರಾಹುಲ್‌ 33ನೇ ಸ್ಥಾನದಲ್ಲಿದ್ದಾರೆ. 2019ರ ವಿಶ್ವಕಪ್‌ ಹೊತ್ತಿಗೆ ಇವರೆಲ್ಲ ಅಗ್ರಸ್ಥಾನದಲ್ಲಿದ್ದರು. ಇದು ಅಂದಿಗೂ, ಇಂದಿಗೂ ಬ್ಯಾಟಿಂಗ್‌ನಲ್ಲಿ ಆಗಿರುವ ವ್ಯತ್ಯಾಸವನ್ನು ಸೂಚಿಸುತ್ತದೆ. ರೋಹಿತ್‌, ಕೊಹ್ಲಿ ಈ ಹಿಂದಿನಂತೆ ಸ್ಥಿರವಾದ ಬ್ಯಾಟಿಂಗ್‌ ಮಾಡುತ್ತಿಲ್ಲ. ಇತ್ತೀಚೆಗೆ ನಡೆದ ಏಷ್ಯಾಕಪ್‌, ಆಸೀಸ್‌ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಈ ಇಬ್ಬರೂ ಕೆಲವು ಉತ್ತಮ ಇನಿಂಗ್ಸ್‌ ಆಡಿದ್ದಾರೆ. ಹಾಗಂತ ಎಲ್ಲ ಪಂದ್ಯಗಳಲ್ಲೂ ಅವರಿಂದ ಅದು ಸಾಧ್ಯವಾಗಿಲ್ಲ. ಪ್ರಸ್ತುತ ವಿಶ್ವಕಪ್‌ನಲ್ಲೂ ಇವರ ಸ್ಥಿರ/ಅಸ್ಥಿರವಾದ ಆಟ ತಂಡದ ಪರಿಸ್ಥಿತಿಯನ್ನೇ ಬದಲಿಸುತ್ತದೆ. ಏಷ್ಯಾಕಪ್‌ನಲ್ಲಿ ರೋಹಿತ್‌ 194, ಕೊಹ್ಲಿ 129 ರನ್‌ ಗಳಿಸಿದ್ದಾರೆ. ರಾಹುಲ್‌ ಗಾಯದಿಂದ ಚೇತರಿಸಿಕೊಂಡ ಮೇಲೆ ಉತ್ತಮ ಎನ್ನುವಂತೆ ಕಾಣಿಸುತ್ತಿದ್ದಾರೆ. ಖಚಿತವಾಗಿ ಹೀಗೆಯೇ ಆಡುತ್ತಾರೆ ಎನ್ನುವ ಸ್ಥಿತಿಯಲ್ಲಿ ಮೂವರೂ ಇಲ್ಲ.

ಬಲಿಷ್ಠ ಆಲ್‌ರೌಂಡರ್‌ಗಳು
ಭಾರತ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಆರ್‌.ಅಶ್ವಿ‌ನ್‌ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬರುತ್ತಾರೆ. ಈ ಪೈಕಿ ಹಾರ್ದಿಕ್‌, ಜಡೇಜ ಪಕ್ಕಾ ಆಲ್‌ರೌಂಡರ್‌ಗಳು. ಆರ್‌.ಅಶ್ವಿ‌ನ್‌ ಬ್ಯಾಟಿಂಗ್‌ ಮಾಡಬಲ್ಲರಾದರೂ ಅವರನ್ನು ಆಯ್ಕೆ ಮಾಡಿದ್ದು ಬೌಲಿಂಗ್‌ಗಾಗಿಯೇ! ಅದೂ ಗಾಯಾಳು ಅಕ್ಷರ್‌ ಪಟೇಲ್‌ ಜಾಗದಲ್ಲಿ. ಅವರು ಹತ್ತಿರಹತ್ತಿರ 2 ವರ್ಷದ ಅನಂತರ ಏಕದಿನವಾಡಿದ್ದಾರೆ. ಈ ಮೂವರೂ ಈ ಹಿಂದೆ ಸಾಕಷ್ಟು ಬಾರಿ ಅನಿವಾರ್ಯ ಸಂದರ್ಭಗಳಲ್ಲಿ ತಂಡದ ಕೈಹಿಡಿದ್ದಾರೆ. ಈಗ ತಮ್ಮ ಆಲ್‌ರೌಂಡ್‌ ಸಾಮರ್ಥ್ಯವನ್ನು ಪೂರ್ಣವಾಗಿ ಹೊರ ತೆಗೆಯಬೇಕಾ ಗಿದೆ. ಇವರ ಆಟ ನಿರ್ಣಾಯಕವಾಗಿದೆ. ಇವರು ಬ್ಯಾಟರ್‌, ಬೌಲರ್‌ಗಳ ಮೇಲಿನ ಹೊರೆಯನ್ನು ತಗ್ಗಿಸಲಿದ್ದಾರೆ.

ಬುಮ್ರಾ ನಿರ್ಣಾಯಕ, ಆದರೆ…
ತಮ್ಮ ವಿಶಿಷ್ಟ ಬೌಲಿಂಗ್‌ ಶೈಲಿಯಿಂದಾಗಿ ಜಸ್‌ಪ್ರೀತ್‌ ಬುಮ್ರಾ ವಿಶ್ವ ಕ್ರಿಕೆಟ್‌ನ ಪ್ರಮುಖ ವೇಗಿಯಾಗಿದ್ದಾರೆ. ಆದರೆ ಅದೇ ವಿಶಿಷ್ಟ ಶೈಲಿಯಿಂದಾಗಿ ಸೊಂಟದ ನೋವಿಗೆ ಸಿಲುಕಿ ಹಲವು ತಿಂಗಳು ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ವಿಶ್ವಕಪ್‌ ಹೊತ್ತಿಗೆ ಏಷ್ಯಾಕಪ್‌, ಆಸೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದಾರೆ. ಇಲ್ಲಿ ಅವರಿಗೆ ಅಭ್ಯಾಸ ಸಿಕ್ಕಿದೆ. ಆದರೆ ವಿಕೆಟ್‌ಗಳು ಸಿಕ್ಕಿಲ್ಲ. ಇವರು ತಂಡದ ಪ್ರಮುಖ ಬೌಲಿಂಗ್‌ ಅಸ್ತ್ರ. ನಿರ್ಣಾಯಕ ಹಂತದಲ್ಲಿ ಇವರ ತೀಕ್ಷ್ಣ ಯಾರ್ಕರ್‌ಗಳು ಎದುರಾಳಿಗಳನ್ನು ಕಂಗಾಲಾಗಿಸುತ್ತವೆ. ಪ್ರಸ್ತುತ ಭಾರತಕ್ಕೆ ಇಂತಹ ಪ್ರದರ್ಶನ ಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಬಂದೇ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಭಾರತದಲ್ಲಿ ಬ್ಯಾಟಿಂಗ್‌ ಸ್ನೇಹಿ ಪಿಚ್‌ಗಳಿರುವುದೇ ಇದಕ್ಕೆ ಕಾರಣ.

ಗೆಲ್ಲಲು ಅದೃಷ್ಟವೂ ಬೇಕು!
ವಿಶ್ವಕಪ್‌ ಸಿಂಹಾಸನ ಏರಲು ಎಲ್ಲ ತಂಡಗಳು ಹಾತೊರೆಯುತ್ತವೆ. ಜಾಗತಿಕ ಕ್ರಿಕೆಟಿನ ಈ ಪರಮೋಚ್ಚ ಗೌರವ ಸಂಪಾದಿಸುವುದೇ ಕ್ರಿಕೆಟ್‌ ತಂಡಗಳ ಹೆಗ್ಗುರಿ ಹಾಗೂ ಕನಸು. ಒಮ್ಮೆ ಈ ಕನಸು ಸಾಕಾರಗೊಳ್ಳದೇ ಹೋದರೆ ಮತ್ತೆ 4 ವರ್ಷಗಳ ಸುದೀರ್ಘ‌ ಕಾಯುವಿಕೆ ಅನಿವಾರ್ಯ. ಹೀಗಾಗಿ ಪ್ರತಿಯೊಂದು ತಂಡವೂ ಈ ವಿಶ್ವ ಸಮರದ ವೇಳೆ ಪಕ್ವಗೊಂಡಿರುತ್ತದೆ; ಹುರಿಗೊಂಡಿರುತ್ತವೆ. ಆದರೆ ವಿಶ್ವಕಪ್‌ ಗೆಲುವಿಗೆ ಸಾಧನೆಯೊಂದೇ ಮಾನದಂಡವಲ್ಲ, ಇಲ್ಲಿ ಅದೃಷ್ಟದ ಪಾತ್ರವೂ ಮುಖ್ಯ. ಇಡೀ ತಂಡಕ್ಕೆ ಅಲ್ಲದೇ ಹೋದರೂ ನಾಯಕನಾಗಿದ್ದವನಿಗೆ ಲಕ್‌ ಇರಲೇಬೇಕು.

ಸಾಧಕ ತಂಡಗಳು: ಕೇವಲ ಸಾಧನೆಯ ಬಲದಿಂದ ವಿಶ್ವಕಪ್‌ ಗೆದ್ದ ತಂಡಗಳನ್ನು ಹೆಸರಿಸುವುದಾದರೆ ಆಸ್ಟ್ರೇಲಿಯಕ್ಕೆ ಅಗ್ರಸ್ಥಾನ ಮೀಸಲು. ಅದು ತನ್ನ 5 ವಿಶ್ವಕಪ್‌ಗ್ಳಲ್ಲಿ ನಾಲ್ಕನ್ನು ವೀರೋಚಿತ ಹಾಗೂ ಅಧಿಕಾರಯುತವಾಗಿಯೇ ಗೆದ್ದಿತ್ತು. ಮೊದಲ ಸಲ ಇಂಗ್ಲೆಂಡಿನ ಎಡವಟ್ಟಿನ ಲಾಭ ಗಳಿಸಿತ್ತು, ಅಷ್ಟೇ. ಹಾಗೆಯೇ ಮೊದಲೆರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸನ್ನೂ ಈ ಸಾಲಿಗೆ ಸೇರಿಸಬಹುದು. ಅಂದಿನ ಕ್ಲೈವ್‌ ಲಾಯ್ಡ ಪಡೆ ಅಜೇಯ ಸಾಧನೆಯೊಂದಿಗೆ ವಿಶ್ವಕಪ್‌ ಜಯಿಸಿತ್ತು.

ಭಾರತದ ಅನಿರೀಕ್ಷಿತ ಸಾಧನೆ: ಭಾರತದ ವಿಷಯಕ್ಕೆ ಬರುವುದಾದರೆ, 1983ರ ವಿಶ್ವಕಪ್‌ ಒಲಿದದ್ದು ಅನಿರೀಕ್ಷಿತ. ಇಲ್ಲಿ ಅದೃಷ್ಟಕ್ಕಿಂತ ಸಾಧನೆಯ ಪ್ರಮಾಣ ದೊಡ್ಡ ಮಟ್ಟದಲ್ಲಿತ್ತು. ಅದೊಂದು ಸರ್ವಾಂಗೀಣ ಯಶಸ್ಸು. ಹಾಗೆಯೇ ಭಾರತದ 2011ರ ಪರಾಕ್ರಮ. ಇಲ್ಲಿ ಸಾಧನೆಯ ಜತೆಗೆ ನಾಯಕನ ಅದೃಷ್ಟದ ಬಲವೂ ಇತ್ತು. ಧೋನಿ ಕೇವಲ ಭಾರತದ್ದಲ್ಲ, ವಿಶ್ವ ಕ್ರಿಕೆಟಿನ ಅತ್ಯಂತ ಅದೃಷ್ಟದ ನಾಯಕ. ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದ ಕಾಲವದು. ಆದರೆ ಇದೇ ಅದೃಷ್ಟ ಸೌರವ್‌ ಗಂಗೂಲಿ ಹೊಂದಿರಲಿಲ್ಲ. ಇದ್ದಿದ್ದೇ ಆದರೆ ಭಾರತ 2003ರಲ್ಲೇ ದ್ವಿತೀಯ ವಿಶ್ವಕಪ್‌ ಎತ್ತುತ್ತಿತ್ತು.

ಪಾಕ್‌ಗೂ ಅದೃಷ್ಟ: ಅದೃಷ್ಟದ ಬಲದಿಂದ ವಿಶ್ವಕಪ್‌ ಎತ್ತಿದ ಮೊದಲ ತಂಡ ಪಾಕಿಸ್ತಾನ. 1992ರ ಲೀಗ್‌ ಹಂತದಲ್ಲಿ ಇಂಗ್ಲೆಂಡ್‌ ವಿರುದ್ಧ 74 ರನ್ನಿಗೆ ಉರುಳಿ ಸೋತು ಹೋಗಬೇಕಿದ್ದ ತಂಡವದು. ಆದರೆ ಪಂದ್ಯ ಮಳೆಯಿಂದ ಕೊಚ್ಚಿ ಹೋಯಿತು. ಅಂಕ ಹಂಚಿಕೊಂಡಿತು. ಈ ಒಂದು ಅಂಕವನ್ನು ಹಿಡಿದುಕೊಂಡೇ ಇಮ್ರಾನ್‌ ಪಡೆ ನಾಕೌಟ್‌ ಸುತ್ತಿಗೆ ಏರಿತು. ಇಲ್ಲವಾದರೆ ಈ ಸ್ಥಾನ ಆಸ್ಟ್ರೇಲಿಯದ ಪಾಲಾಗುತ್ತಿತ್ತು. ಅಂದು ಈ ತಂಡಗಳ ನಡುವೆ ಇದ್ದದ್ದು ಕೇವಲ ಒಂದು ಅಂಕದ ವ್ಯತ್ಯಾಸ. ರನ್‌ರೇಟ್‌ನಲ್ಲಿ ಆಸ್ಟ್ರೇಲಿಯವೇ ಮುಂದಿತ್ತು. 1996ರ ಚಾಂಪಿಯನ್‌ ಶ್ರೀಲಂಕಾ ಕೂಡ ಸದೃಢ ತಂಡವನ್ನು ಹೊಂದಿತ್ತು. ಆದರೆ ಆಸ್ಟ್ರೇಲಿಯ ಮತ್ತು ವೆಸ್ಟ್‌ ಇಂಡೀಸ್‌ ಲೀಗ್‌ ಪಂದ್ಯವನ್ನು ಬಿಟ್ಟುಕೊಟ್ಟದ್ದು ಲಂಕೆಗೆ ಲಾಭವಾಗಿ ಪರಿಣಮಿಸಿತ್ತು.

ನತದೃಷ್ಟ ತಂಡಗಳು: ವಿಶ್ವಕಪ್‌ ಇತಿಹಾಸದ ಅತ್ಯಂತ ನತದೃಷ್ಟ ತಂಡಗಳೆಂದರೆ ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ. ಇಂಗ್ಲೆಂಡ್‌ಗೆ ಅದೃಷ್ಟ ಇದ್ದಿದ್ದೇ ಆದರೆ ಅದು ಮೊದಲ ಕಪ್‌ ಎತ್ತಲು 2019ರ ತನಕ ಕಾಯಬೇಕಿರಲಿಲ್ಲ. ಕಳೆದ ಸಲ ಮಾರ್ಗನ್‌ ಪಡೆ ಉತ್ತಮ ಹೋರಾಟ ನೀಡಿತ್ತಾದರೂ ಅದು ಚಾಂಪಿಯನ್‌ ಆದ ರೀತಿ ಮಾತ್ರ ತೀರಾ ವಿವಾದಕ್ಕೆಡೆ ಮಾಡಿತ್ತು. ಆರಕ್ಕೇರದ, ಮೂರಕ್ಕಿಳಿಯದ ನ್ಯೂಜಿಲ್ಯಾಂಡ್‌ಗೆ ಸತತ 2 ಸಲ ಫೈನಲ್‌ ತಲುಪಿಯೂ ಟ್ರೋಫಿ ಎತ್ತಲಾಗಲಿಲ್ಲ. ದಕ್ಷಿಣ ಆಫ್ರಿಕಾಕ್ಕೆ ಸೆಮಿಫೈನಲ್‌ ಮುಂದಿನ ಹಾದಿ ಹೇಗಿದೆ ಎಂಬುದೇ ತಿಳಿದಿಲ್ಲ!

ವೆಸ್ಟ್‌ ಇಂಡೀಸ್‌ ಇಲ್ಲದ ಕೂಟ!
ಒಂದು ಕಾಲದ ದೈತ್ಯ ತಂಡವಾದ ವೆಸ್ಟ್‌ ಇಂಡೀಸ್‌ ಇಲ್ಲದ ವಿಶ್ವಕಪ್‌ ಪಂದ್ಯಾವಳಿ ಇದೆಂಬುದನ್ನು ನಂಬಲಾಗುತ್ತಿಲ್ಲ. ಇದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಇದಕ್ಕೇನು ಕಾರಣ? ಐಸಿಸಿಯ ಅಸ್ಥಿರ ಮಾದರಿಯೇ? ಅಥವಾ ಕೆರಿಬಿಯನ್‌ ಕ್ರಿಕೆಟಿನ ಅಧಃಪತನವೇ? ಎರಡೂ ಹೌದು. 1975ರಲ್ಲಿ ಆರಂಭಗೊಂಡ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಇಂದಿಗೂ ನಿರ್ದಿಷ್ಟ ಮಾದರಿ ಹೊಂದಿಲ್ಲದಿರುವುದು ವಿಪರ್ಯಾಸ. ಹಾಗೆಯೇ ಇಲ್ಲಿ ಎಷ್ಟು ತಂಡಗಳನ್ನು ಆಡಿಸಬೇಕೆಂಬ ಸ್ಪಷ್ಟತೆ ಇಲ್ಲದಿರುವುದೂ ಇನ್ನೊಂದು ಎಡವಟ್ಟು. ಪದೇಪದೆ ಮಾದರಿಯನ್ನು ಬದಲಾಯಿಸಲಾಯಿತು. ಕೆಲವು ಕೂಟಗಳಿಂದ ರ್‍ಯಾಂಕಿಂಗ್‌ ಕಳಪೆಯಿರುವ ತಂಡಗಳು ಅರ್ಹತಾಸುತ್ತಿನಲ್ಲಿ ಆಡಬೇಕಾದ ನಿಯಮ ಮಾಡಲಾಗಿದೆ. ಇಲ್ಲಿ ವಿಂಡೀಸ್‌ ವಿಫ‌ಲವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ತೀವ್ರ ಆರ್ಥಿಕ ದುಸ್ಥಿತಿಗೆ ತಲುಪಿದೆ. ಹಾಗಾಗಿ ಅಲ್ಲಿನ ಕ್ರಿಕೆಟಿಗರು ದೇಶದ ಪರವಾಗಿ ಆಡುವುದನ್ನು ನಿಲ್ಲಿಸಿದ್ದಾರೆ. ಬದಲಿಗೆ ವಿಶ್ವದ ಟಿ20 ಲೀಗ್‌ಗಳಲ್ಲಿ ಆಡುತ್ತಾರೆ. ಇವೆಲ್ಲದರ ಪರಿಣಾಮ ಅಲ್ಲೀಗ ಪ್ರೇಕ್ಷಕರ ಅಭಿಮಾನವೂ ಕಡಿಮೆಯಾಗಿದೆ.

ಗಿಲ್‌ ಅತ್ಯುತ್ತಮ, ಅಯ್ಯರ್‌, ಸೂರ್ಯ, ಕಿಶನ್‌ ಅನುಮಾನ
ತಂಡದಲ್ಲಿರುವ ಶುಭಮನ್‌ ಗಿಲ್‌ ಏಕದಿನ ರ್‍ಯಾಂಕಿಂಗ್‌ನಲ್ಲಿ ವಿಶ್ವ ನಂ.2 ಆಟಗಾರ. ಏಷ್ಯಾ ಕಪ್‌ನಲ್ಲಿ 302, ಆಸೀಸ್‌ ವಿರುದ್ಧದ ಸರಣಿಯಲ್ಲಿ 178 ರನ್‌ ಗಳಿಸಿದ್ದಾರೆ. ಇನ್ನೂ 23 ವರ್ಷದ ಇವರು ತಂಡದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಏಕೈಕ ಬ್ಯಾಟರ್‌. ಶ್ರೇಯಸ್‌ ಅಯ್ಯರ್‌ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಬಂದಿದ್ದಾರೆ, ಆಸೀಸ್‌ ವಿರುದ್ಧ ಅಬ್ಬರಿಸಿದ್ದಾರೆ. ಸೂರ್ಯಕುಮಾರ್‌ ಕೂಡ ಆಸೀಸ್‌ ವಿರುದ್ಧ ಸಿಡಿದಿದ್ದಾರೆ. ಆದರೆ ಏಕದಿನದಲ್ಲಿ ಸೂರ್ಯ ಬ್ಯಾಟಿಂಗ್‌ ಬಹುತೇಕ ಬಾರಿ ಕೈಕೊಟ್ಟಿದೆ. ಇದೊಂದು ಆತಂಕದ ವಿಚಾರ. ಎಲ್ಲಕ್ಕಿಂತ ಮುಖ್ಯವೆಂದರೆ ಆಡುವ ಬಳಗದಲ್ಲಿ ಇವರು ಸ್ಥಾನ ಸಂಪಾದಿಸುವುದು ಅನುಮಾನ. ಇನ್ನು ಕಿಶನ್‌ ಕೂಡ ಹೆಚ್ಚುವರಿ ಆಟಗಾರನಾಗಿಯೇ ಇರಲಿದ್ದಾರೆ.

ಭರವಸೆಗಳು
ರೋಹಿತ್‌ ಶರ್ಮ, ಕೊಹ್ಲಿ, ಅಶ್ವಿ‌ನ್‌, ಬುಮ್ರಾ, ರಾಹುಲ್‌ ಇವರೆಲ್ಲ ಅತ್ಯಂತ ಅನುಭವಿಗಳು. ಇವರನ್ನೆಲ್ಲ ಹಿಂದಿನ ಪ್ರದರ್ಶನದ ಆಧಾರದಲ್ಲೇ ಆಯ್ಕೆ ಮಾಡಿರುವುದು. ಈ ಅನುಭವವೇ ದೊಡ್ಡ ಶಕ್ತಿಯಾಗಿದೆ.
ತಂಡದ ಆಲ್‌ರೌಂಡ್‌ ವಿಭಾಗ ಹಾರ್ದಿಕ್‌, ಜಡೇಜ ಹಾಜರಿಯೊಂದಿಗೆ ಬಲಿಷ್ಠವಾಗಿದೆ. ಇವರು ಸಕಾಲದಲ್ಲಿ ಮಿನುಗಬೇಕಷ್ಟೇ.
ಸೂರ್ಯಕುಮಾರ್‌, ಗಿಲ್‌, ಕಿಶನ್‌ ಅಸಾಮಾನ್ಯ ಪ್ರತಿಭಾವಂತರು. ಅದರಲ್ಲಿ ಅನುಮಾನವೇ ಇಲ್ಲ.
ಬೌಲಿಂಗ್‌ನಲ್ಲಿ ಬುಮ್ರಾ, ಸಿರಾಜ್‌, ಕುಲದೀಪ್‌ ಪ್ರಬಲ ಅಸ್ತ್ರಗಳಾಗಿದ್ದಾರೆ.

ಸಂದೇಹಗಳು
ತಂಡದಲ್ಲಿ ರೋಹಿತ್‌, ಕೊಹ್ಲಿ, ಅಶ್ವಿ‌ನ್‌ರಂತಹ ಅನುಭವಿಗಳಿದ್ದರೂ ಇವರು ಸ್ಥಿರವಾಗಿ ಆಡುತ್ತಾರೆಂಬ ಬಗ್ಗೆ ನಂಬಿಕೆ ಇಲ್ಲ.
ಸೂರ್ಯಕುಮಾರ್‌ ಅದ್ಭುತ ಆಟಗಾರನೇ ಆದರೂ, ಏಕದಿನದಲ್ಲಿ ಇವರ ಸಾಧನೆ ಕಳಪೆ. ಕಿಶನ್‌ಗೆ ಸ್ಥಾನ ಸಿಕ್ಕುವುದೇ ಕಷ್ಟ.
ಬೌಲಿಂಗ್‌ನಲ್ಲಿ ಬುಮ್ರಾ ಮೇಲೆ ಬಹಳ ಒತ್ತಡವಿದೆ. ಸಿರಾಜ್‌ ಅದನ್ನು ಕಡಿಮೆ ಮಾಡುವ ಶಕ್ತಿ ಹೊಂದಿದ್ದಾರಾ ಎಂಬ ಪ್ರಶ್ನೆಗಳಿವೆ.
ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿಭಾರತೀಯ ಬೌಲರ್‌ಗಳಿಂದ ಬಹಳ ನಿರೀಕ್ಷಿಸಲು ಕಷ್ಟವಿದೆ. ಅಂತಿಮ ಓವರ್‌ಗಳಲ್ಲಿ ಇವರ ಪ್ರದರ್ಶನ ನಿರ್ಣಾಯಕವಾಗಲಿದೆ. ಅಲ್ಲಿ ಏನು ಮಾಡುತ್ತಾರೆ ಎಂಬುದು ಈಗಿನ ವಿಚಾರ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.