ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್
Team Udayavani, Feb 8, 2023, 9:46 PM IST
ತೆಹ್ರಾನ್: ಇರಾನ್ ತನ್ನ ಮೊದಲ ಭೂಗತ ವಾಯುಪಡೆ ನೆಲೆಯನ್ನು ಅನಾವರಣಗೊಳಿಸಿದೆ. ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ, ಈ ಕುರಿತು ಫೋಟೋಗಳನ್ನು ಬಿಡುಗಡೆಗೊಳಿಸಿದೆ.
ಫೋಟೋದಲ್ಲಿ ಇರಾನ್ ವಾಯುಪಡೆ ಸಿಬ್ಬಂದಿಯು ಅಮೆರಿಕ ನಿರ್ಮಿತ ಎಫ್-4ಇ ಫ್ಯಾಂಟಾಮ್ 2 ಯುದ್ಧ ವಿಮಾನದ ಎದುರು ನಿಂತಿದ್ದಾರೆ. ಈ ವಾಯುನೆಲೆಗೆ ಇರಾನ್ “ಓಗಾಬ್ 44′(ಪರ್ಶಿಯಾದಲ್ಲಿ ಹದ್ದು) ಎಂದು ನಾಮಕರಣ ಮಾಡಿದೆ. ಈ ವಾಯುನೆಲೆ ಇರುವ ಸ್ಥಳವನ್ನು ಇರಾನ್ ಬಹಿರಂಗಪಡಿಸಿಲ್ಲ.
ಆದರೆ ಬೆಟ್ಟದ ಕೆಳಗೆ ನೂರಾರು ಮೀಟರ್ ಅಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ವಾಯು ನೆಲೆ ಮೂಲಕ ದೀರ್ಘ ಶ್ರೇಣಿಯ ಕ್ಷಿಪಣಿಗಳು ಹೊಂದಿರುವ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಕಾರ್ಯ ನಿರ್ವಹಿಸಲಿವೆ ಎಂದು ಐಆರ್‌ಎನ್‌ಎ ತಿಳಿಸಿದೆ.
“ಇಸ್ರೇಲ್ ಸೇರಿದಂತೆ ಶತ್ರು ರಾಷ್ಟ್ರಗಳ ದಾಳಿಗೆ “ಈಗಲ್ 44′ ಸೇರಿದಂತೆ ಇರಾನ್‌ನ ವಾಯು ನೆಲೆಗಳಿಂದ ನಮ್ಮ ವಾಯುಪಡೆ ತಕ್ಕ ಪ್ರತ್ಯುತ್ತರ ನೀಡಲಿವೆ,’ ಎಂದು ಇರಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಘೇರಿ ತಿಳಿಸಿದ್ದಾರೆ.