
ಕುಟುಂಬ ಮಾದರಿಯಂತಿದ್ದ ಚುನಾವಣ ವ್ಯವಸ್ಥೆ
Team Udayavani, Feb 9, 2023, 6:30 AM IST

ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು
ಅದು 1980ರ ದಶಕ. ಈಗ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವವರು ಖರ್ಚು ಮಾಡುವಷ್ಟು ಹಣವೂ ಅಂದು ವಿಧಾನಸಭೆ ಚುನಾವಣೆಯ ಕಣದಲ್ಲಿ ಖರ್ಚಾಗುತ್ತಿರಲಿಲ್ಲ. ಕಾರ್ಯಕರ್ತರು ಮಧ್ಯಾಹ್ನ ಸಾಮೂಹಿಕ ಗಂಜಿಯೂಟ ಬಿಟ್ಟರೆ ಬೇರೇನೂ ನಿರೀಕ್ಷೆ ಮಾಡುತ್ತಿರಲಿಲ್ಲ. ಬಹುತೇಕ ಕಾರ್ಯಕರ್ತರು ಸ್ವಂತ ಹಣ ಖರ್ಚು ಮಾಡಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹಣ ಬಲಕ್ಕಿಂತ ಜನ ಬಲವೇ ಅಂದಿನ ಚುನಾವಣೆಯ ಆಸ್ತಿಯಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ನಾಯಕರು, ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ನಡುವೆ ಪ್ರೀತಿ, ವಾತ್ಸಲ್ಯ, ನಂಬಿಕೆ ಇತ್ತು. ಹೀಗಾಗಿಯೇ ಚುನಾವಣೆ ಬಂದಾಗಲೆಲ್ಲ ಊರುಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು.ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದು ಶಾಸಕನಾಗಿ ಆಯ್ಕೆಯಾದಾಗ ಸಚಿವನಾಗಿಯೂ ಸೇವೆ ಸಲ್ಲಿಸುವ ಅವಕಾಶ ದೊರೆತ ಕೆಲವೇ ಕೆಲವು ಅದೃಷ್ಟಶಾಲಿ ರಾಜಕಾರಣಿಗಳಲ್ಲಿ ನಾನೂ ಒಬ್ಬ.
ಸಾಮೂಹಿಕ ಗಂಜಿ ಊಟವೇ ಶಕ್ತಿ
1985ರಲ್ಲಿ ಜನತಾ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಆಗ ಬ್ರಹ್ಮಾವರ ವಿಧಾನಸಭಾ ಕ್ಷೇತ್ರವಿತ್ತು. ಈಗ ಅದು ಉಡುಪಿ, ಕುಂದಾಪುರ ವಿಧಾನಸಭಾ ಕ್ಷೇತ್ರದೊಂದಿಗೆ ವಿಲೀನವಾಗಿದೆ. ಜನತಾ ಪಾರ್ಟಿಯಿಂದ ಟಿಕೆಟ್ ಸಿಕ್ಕ ಸಂದರ್ಭದಲ್ಲಿ ಬ್ರಹ್ಮಾವರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದೆ. ಮನೆ ಮುಂದೆ ಶಾಮಿಯಾನ ಹಾಕಿಸಿದ್ದೆವು. ನಿತ್ಯವೂ ಪ್ರಚಾರಕ್ಕೆ ಹೋಗುವ ಮೊದಲು ಕಾರ್ಯಕರ್ತರು ಶಾಮಿಯಾನದಡಿ ಸೇರುತ್ತಿದ್ದರು. ಒಟ್ಟಾಗಿ ಗಂಜಿ ಊಟ ಮಾಡಿ ಪ್ರಚಾರಕ್ಕೆ ಹೊರಡುತ್ತಿದ್ದೆವು. ಬಹುತೇಕ ದಿನಗಳಲ್ಲಿ ಪ್ರಚಾರಕ್ಕೆ ಹೋದಾಗ ಮಧ್ಯಾಹ್ನದ ಊಟ ಕಾರ್ಯಕರ್ತರ ಮನೆ ಯಲ್ಲೇ ಆಗುತ್ತಿತ್ತು. ಈಗಿನಂತೆ ಪ್ರಚಾರಕ್ಕೆ ಬಂದವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಇರಲಿಲ್ಲ. ರಾತ್ರಿ ಊಟ ಕಾರ್ಯಕರ್ತರು ತಮ್ಮ ಮನೆಗೆ ಹೋಗಿ ಮಾಡುತ್ತಿದ್ದರು. ಮನೆಯಿಂದ ಮನೆಗೆ ಅವೆಷ್ಟೋ ಕಿ.ಮೀ. ನಡೆದುಕೊಂಡೇ ಹೋಗಿದ್ದುಂಟು.
ಅಂದಿನ ಚುನಾವಣೆ ವ್ಯವಸ್ಥೆಯೆಂದರೆ ಕುಟುಂಬ ವ್ಯವಸ್ಥೆಯಂತೆ ಪ್ರೀತಿ, ವಾತ್ಸಲ್ಯ, ನಂಬಿಕೆ ಎಲ್ಲವೂ ಇತ್ತು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜನ ಪ್ರತಿನಿಧಿಗಳು ಕಾರ್ಯಕರ್ತರನ್ನು ಬದಲು ಮಾಡಿದ್ದಾರೆ. ಅಂದು ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳ ನಡುವೆ ಇರುತ್ತಿದ್ದ ಪ್ರೀತಿ, ವಿಶ್ವಾಸ ಇಂದು ಕಾಣಲು ಸಾಧ್ಯವೇ ಇಲ್ಲ.
“ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ, ಹೀಗಾಗಿ ಹಣ ಮಾಡಲಿ ಅಥವಾ ರಾಜಕೀಯದಲ್ಲಿ ಹಣ ಮಾಡಿದ್ದಾರೆ ಚುನಾವಣೆಯಲ್ಲಿ ಖರ್ಚು ಮಾಡಲಿ’ ಎಂಬ ವ್ಯವಸ್ಥೆ ಬಂದು ಬಿಟ್ಟಿದೆ ಮತ್ತು ಸರಿಮಾಡಲಾಗದ ಸ್ಥಿತಿಗೆ ಬಂದು ತಲುಪಿದೆ.
ಹಬ್ಬದ ವಾತಾವರಣ
ಚುನಾವಣೆ ಪ್ರಚಾರಕ್ಕೆ ಈಗಿನ ರೀತಿಯಲ್ಲಿ ರಾಷ್ಟ್ರ ನಾಯಕರು ಮೇಲಿಂದ ಮೇಲೆ ಬರುತ್ತಿರಲಿಲ್ಲ. ಬ್ರಹ್ಮಾವರ ಕ್ಷೇತ್ರಕ್ಕೆ ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ.ದೇವೇಗೌಡ ಅವರು ಪ್ರಚಾರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಇಡೀ ಊರಿನಲ್ಲಿ ಹಬ್ಬದ ವಾತಾ ವರಣ ಮನೆಮಾಡಿತ್ತು. ಈಗಿನಷ್ಟು ಫ್ಲೆಕ್ಸ್, ಬ್ಯಾನರ್, ಬಂಟಿಂಗ್‌ಗಳ ಹಾವಳಿ ಇರಲಿಲ್ಲ. ಕೈಬರಹದಬಟ್ಟೆಯ ಬ್ಯಾನರ್‌ಗಳ ಸ್ವಾಗತ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ.
ಟಿಕೆಟ್ ಹಂಚಿಕೆ ಪ್ರಕ್ರಿಯೆಯೂ ತುಂಬ ಚೆನ್ನಾಗಿತ್ತು. ಈಗಿನ ರೀತಿಯಲ್ಲಿ ಟಿಕೆಟ್‌ಗಾಗಿ ದುಂಬಾಲು ಬೀಳುವುದು ಅಥವಾ ವರಿಷ್ಠರ ಮನವೊಲಿಸಲು ನಾನಾ ರೀತಿಯ ಕಸರತ್ತು ಮಾಡಬೇಕೆಂದಿರಲಿಲ್ಲ. ವರಿಷ್ಠರು ಹೆಸರನ್ನು ಅಂತಿಮಗೊಳಿಸಿ ಕಳುಹಿಸುತ್ತಿದ್ದರು. ಅದರಂತೆ ಕಾರ್ಯಕರ್ತರ ಜತೆ ಸೇರಿ ಅಭ್ಯರ್ಥಿಯೂ ಚುನಾವಣೆ ಪ್ರಚಾರ ಮಾಡುತ್ತಿದ್ದರು. ಬ್ರಹ್ಮಾವರ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಅಭ್ಯರ್ಥಿಗಳು ಇಲ್ಲ ಎಂಬ ಕಾರಣಕ್ಕೆ ನನಗೆ ಟಿಕೆಟ್ ಸಿಕ್ಕಿದ್ದು ಉಂಟು. ತಂದೆಯವರು ನ್ಯಾಯಾಧೀಶರಾಗಿದ್ದರಿಂದ ಅವರ ಹೆಸರಿನ ಪ್ರಭಾವವೂ ಚುನಾವಣೆಯಲ್ಲಿ ಹೆಚ್ಚು ಸಹಕಾರಿಯಾಗಿತ್ತು. ವಕೀಲನಾಗಿ ಸೇವೆ ಆರಂಭಿಸಿ, ರಾಜಕೀಯದಲ್ಲಿ ಮುಂದುವರಿಯುವಂತಾಯಿತು.
1994ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಜಯ ಸಾಧಿಸಿ ವಿಧಾನಸಭೆ ಪ್ರವೇಶ ಮಾಡಿದೆ. ಮೊದಲ ಬಾರಿಗೆ ಶಾಸಕನಾಗಿ, ಸಚಿವನಾಗಿಯೂ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು. ಮೀನುಗಾರಿಕೆ ಮತ್ತು ಬಂದರು ಸಚಿವನಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಚಾರ ಮಾಡಿದ ನೆನಪುಗಳು ಸದಾ ಹಸುರಾಗಿವೆ. ಸಚಿವನಾಗಿ ಮೊದಲ ಬಾರಿಗೆ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಉಪ್ಪಿನಂಗಡಿಯಿಂದ ಕುಂದಾಪುರದ ವರೆಗೂ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂ ಡುದುದು, ಕಾರ್ಯಕರ್ತರೊಂದಿಗೆ ಹತ್ತಾರು ಕಿ.ಮೀ. ನಡೆದುಕೊಂಡು ಸಾಗಿದುದೆಲ್ಲವೂ ಸ್ಮತಿಪಟಲದಲ್ಲಿ ಅಚ್ಚಾಗಿ ಉಳಿದಿದೆ.
-ರಾಜು ಖಾರ್ವಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಸಂಕಷ್ಟ; ಬಂಧಿಸುವಂತೆ ಕೋರ್ಟ್ ಆದೇಶ

ಮರಳಿ ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್

ಗೆದ್ದಮೇಲೆ ಬೆಂಗಳೂರಿನಲ್ಲಿ ಕುಳಿತು ದುಡ್ಡು ಮಾಡುವ ವ್ಯಕ್ತಿಗೆ ಮತಹಾಕಬೇಡಿ: ಹೊರಟ್ಟಿ

ಮಿಸ್ಟರ್ ಹಾಲಪ್ಪ… ಅಭಿವೃದ್ಧಿ ಸಂಬಂಧ ಬಹಿರಂಗ ಚರ್ಚೆ; ಬೇಳೂರು ಸವಾಲು