ಕಾಸರಗೋಡು ಜಿಲ್ಲೆ: ಒಬ್ಬರಿಗೆ ಸೋಂಕು ದೃಢ
Team Udayavani, May 1, 2020, 5:35 AM IST
ಸಾಂದರ್ಭಿಕ ಚಿತ್ರ.
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಒಬ್ಬರಿಗೆ ಕೋವಿಡ್-19 ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ ಕಾಂಞಂಗಾಡ್‌ನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಇದು ವರೆಗೆ 179 ಮಂದಿಗೆ ಕೋವಿಡ್-19 ಸೋಂಕು ಬಾಧಿಸಿದ್ದು, 167 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಧಿಕಾರಿ ನಿಗಾದಲ್ಲಿ
ಕೋವಿಡ್-19 ಬಾಧಿಸಿದ ದೃಶ್ಯ ಮಾಧ್ಯಮ ವರದಿಗಾರನೊಂದಿಗಿನ ಸಂಪರ್ಕದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ನೇತೃತ್ವ ನೀಡಿದ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು, ಐ.ಜಿ.ಗಳಾದ ಅಶೋಕ ಯಾದವ್, ವಿಜಯ್ ಸಖಾರೆ ಅವರನ್ನು ಕ್ವಾರಂಟೈನ್‌ಗೊಳಿಸಲಾಗಿದೆ. ಜಿಲ್ಲಾಧಿಕಾರಿಯ ಗನ್‌ಮ್ಯಾನ್ ಹಾಗೂ ಚಾಲಕರನ್ನೂ ನಿಗಾದಲ್ಲಿಡಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಡಾ| ಸಜಿತ್ ಬಾಬು ಅವರ ಗಂಟಲದ್ರವ ಮಾದರಿ ತಪಾಸಣೆಯ ಫಲಿತಾಂಶ ನೆಗೆಟಿವ್ ಬಂದಿದೆ.
ಕೇರಳ: 14 ಮಂದಿ ಗುಣಮುಖ
ಕಾಸರಗೋಡು ಮತ್ತು ಮಲಪ್ಪುರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೇರಿದಂತೆ ಕೇರಳ ರಾಜ್ಯದಲ್ಲಿ ಗುರುವಾರ ಇಬ್ಬರಿಗೆ ಕೋವಿಡ್-19 ಬಾಧಿಸಿದೆ. ಇದೇ ಸಂದರ್ಭದಲ್ಲಿ 14 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಇನ್ನೊಬ್ಬರಿಗೆ ಸಂಪರ್ಕದಿಂದ ಬಂದಿದೆ.