ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ವಿರಾಟ್ ಕೊಹ್ಲಿ, ಪಂತ್, ಬುಮ್ರಾ
Team Udayavani, Jan 20, 2022, 6:20 AM IST
ದುಬಾೖ: ನೂತನ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಜಸ್‌ಪ್ರೀತ್ ಬುಮ್ರಾ ಪ್ರಗತಿ ಸಾಧಿಸಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ 79 ಹಾಗೂ 29 ರನ್ ಹೊಡೆದ ವಿರಾಟ್ ಕೊಹ್ಲಿ ಎರಡು ಸ್ಥಾನದ ಪ್ರಗತಿಯೊಂದಿಗೆ ಏಳಕ್ಕೆ ಏರಿದರು. ಇದೇ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಬಾರಿಸಿದ ರಿಷಭ್ ಪಂತ್ 10 ಸ್ಥಾನ ಮೇಲೇರುವಲ್ಲಿ ಯಶಸ್ವಿಯಾದರು. ಅವರೀಗ 24ನೇ ಸ್ಥಾನದಿಂದ 14ಕ್ಕೆ ಬಂದಿದ್ದಾರೆ.
ಕೇಪ್‌ಟೌನ್ ಟೆಸ್ಟ್‌ನಲ್ಲಿ 6 ವಿಕೆಟ್ ಉಡಾಯಿಸಿದ ಜಸ್‌ಪ್ರೀತ್ ಬುಮ್ರಾ ಮರಳಿ ಟಾಪ್-10 ಯಾದಿಯಲ್ಲಿ ಕಾಣಿಸಿಕೊಂಡರು. ಅವರೀಗ 10ನೇ ಸ್ಥಾನದಲ್ಲಿದ್ದಾರೆ. ಆರ್. ಅಶ್ವಿನ್ ದ್ವಿತೀಯ ಸ್ಥಾನ ಕಾಯ್ದುಕೊಂಡಿದ್ದಾರೆ.
ಕೇಪ್‌ಟೌನ್ ಟೆಸ್ಟ್ ಪಂದ್ಯದ ಬ್ಯಾಟಿಂಗ್ ಹೀರೋ ಕೀಗನ್ ಪೀಟರ್‌ಸನ್ ಅವರದು ಭರ್ಜರಿ 68 ಸ್ಥಾನಗಳ ನೆಗೆತ. ಅವರೀಗ 33ನೇ ಸ್ಥಾನ ಅಲಂಕರಿಸಿದ್ದಾರೆ. ಪ್ರತಿಯೊಂದು ಟೆಸ್ಟ್ ಪಂದ್ಯದ ಬಳಿಕವೂ ಅವರು ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಕಾಣುತ್ತ ಹೋದರು.
ಸರಣಿಯ ಆರಂಭಕ್ಕೂ ಮುನ್ನ ಪೀಟರ್‌ಸನ್ 158ನೇ ಸ್ಥಾನದಲ್ಲಿದ್ದರು.
ಆ್ಯಶಸ್ ಸರಣಿಯಲ್ಲಿ 357 ರನ್ ಬಾರಿಸಿ ಮಿಂಚಿದ ಆಸ್ಟ್ರೇಲಿಯದ ಟ್ರ್ಯಾವಿಸ್ ಹೆಡ್ ಜೀವನಶ್ರೇಷ್ಠ 5ನೇ ಸ್ಥಾನ ಅಲಂಕರಿಸಿದ್ದಾರೆ.