ಕೈ-ದಳ ಕೋಟೆಯಲ್ಲಿ ಕಮಲ ಅರಳಿಸಲು ಯತ್ನ: ಕೋಲಾರ 6 ಕ್ಷೇತ್ರಗಳು
Team Udayavani, Feb 4, 2023, 6:25 AM IST
ರಾಜ್ಯಕ್ಕೆ ಮೊದಲ ಸಿಎಂ ಕೊಟ್ಟ ಕೋಲಾರ ರಾಜಕೀಯವಾಗಿ ಸದಾ ಸುದ್ದಿಯಲ್ಲಿರುತ್ತದೆ. ಈಗಂತೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುತ್ತಾರೆ ಎಂಬ ಕಾರಣಕ್ಕಾಗಿ ರಾಜ್ಯದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಫೈಟ್ ಕಂಡು ಬಂದಿದೆ. ಅಲ್ಲಲ್ಲಿ ಬಿಜೆಪಿ ಕಾಣಿಸಿಕೊಂಡಿದ್ದರೂ ಹೆಚ್ಚಿನ ಪ್ರಭಾವವಿಲ್ಲ. ಈ ಹಿಂದೆ ಮಾಲೂರಿನಲ್ಲಿ ಕೃಷ್ಣಯ್ಯ ಶೆಟ್ಟಿ ಬಿಜೆಪಿಯನ್ನು ಎರಡು ಬಾರಿ ಗೆಲ್ಲಿಸಿದ್ದರು. ಉಳಿದಂತೆ ಕಾಂಗ್ರೆಸ್, ಜೆಡಿಎಸ್‌ನದ್ದೇ ಅಬ್ಬರ.
ಕೋಲಾರ: ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರನ್ನು ಕೊಟ್ಟ ಹೆಗ್ಗಳಿಕೆ ಕೋಲಾರ ಜಿಲ್ಲೆಗಿದೆ. ಈ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುತ್ತಾರೆಂಬ ಕಾರಣಕ್ಕೆ ಜಿಲ್ಲಾ ರಾಜಕಾರಣ ರಾಜ್ಯದ ದೇಶದ ಗಮನ ಸೆಳೆಯುತ್ತಿದೆ.
ಜಿಲ್ಲೆಯ ಮೊದಲ ಏಳು ಮತ್ತು ಈಗಿನ ಆರು ಕ್ಷೇತ್ರಗಳಲ್ಲಿ ಪಕ್ಷ ರಾಜಕಾರಣಕ್ಕಿಂತಲೂ ವ್ಯಕ್ತಿಗತ ರಾಜಕಾರಣಕ್ಕೆ ಅಗ್ರಪೀಠ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಯಾವುದೇ ಅಲೆಗಳಿಗೆ ಕೋಲಾರ ಕಿವಿ ಕೊಟ್ಟಿದ್ದು ಸ್ಪಂದಿಸಿದ್ದು ತೀರಾ ಕಡಿಮೆ. ಇಂದಿರಾ ಗಾಂಧಿ ಅಲೆ ಪ್ರಬಲವಾಗಿದ್ದಾಗ ಜನತಾ ಪರಿವಾರದ ಸಂಸ ದರು, ಶಾಸಕರನ್ನು° ಗೆಲ್ಲಿಸಿಕೊಟ್ಟಿದ್ದು ಕೋಲಾರ. ಹಾಗೆಯೇ ಖುದ್ದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ ಹೋದರೂ ಬಿಜೆಪಿಗೆ ಶೂನ್ಯ ಸಂಪಾದನೆಯಾಗಿದ್ದು ಕೋಲಾರ ಜಿಲ್ಲೆಯಲ್ಲೇ.
ಕೋಲಾರ ಜಿಲ್ಲೆಯ ಒಂದೊಂದು ಕ್ಷೇತ್ರವೂ ಒಂದೊಂದು ರೀತಿಯ ರಾಜಕಾರಣಕ್ಕೆ ಪ್ರಸಿದ್ಧಿ. ಕೆಜಿಎಫ್ ಕ್ಷೇತ್ರದಲ್ಲಿ ತಮಿಳು ನಾಡಿನ ಪ್ರಭಾವ ಸಿಪಿಎಂ, ಡಿಎಂಕೆ, ಅಣ್ಣಾ ಡಿಎಂಕೆ, ಆರ್‌ಪಿಐ ಶಾಸಕರು ಗೆದ್ದಿದ್ದೇ ಹೆಚ್ಚು. ಹಾಗೆಯೇ ಮುಳಬಾಗಿಲು ಸಿಪಿಎಂ ಶಾಸಕರನ್ನು ಗೆಲ್ಲಿಸಿಕೊಂಡಿತ್ತು. ಕೋಲಾರ, ಮಾಲೂರು, ಬಂಗಾರಪೇಟೆ ಕಾಂಗ್ರೆಸ್ ಜನತಾ ಪರಿವಾರದ ಜಿದ್ದಾಜಿದ್ದಿನ ಕ್ಷೇತ್ರ. ಶ್ರೀನಿವಾಸಪುರ ಇಬ್ಬರೇ ನಾಯಕರನ್ನು ಹೊತ್ತು ಮೆರೆಸುತ್ತಿರುವ ಕ್ಷೇತ್ರ. ಇಲ್ಲಿ ನಾಯಕರೇ ಸರ್ವಸ್ವ. ಪಕ್ಷ ರಾಜಕೀಯಕ್ಕೆ ಇಲ್ಲಿ ತಿಲಾಂಜಲಿ. ಬೈರೇಗೌಡರು ಸತತವಾಗಿ ಗೆಲ್ಲುತ್ತಿದ್ದ ವೇಮಗಲ್ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ವಿಲೀನಗೊಂಡಿದೆ.
ಕೋಲಾರ ಜಿಲ್ಲೆ ಮೊದಲು ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿತ್ತು. ಕ್ಷೇತ್ರಗಳ ಪುನರ್ ವಿಂಗಡಣೆಯ ಅನಂತರ ಒಂದು ಕ್ಷೇತ್ರ ಕಡಿಮೆಯಾಗಿ ಆರು ವಿಧಾನಸಭಾ ಕ್ಷೇತ್ರಗಳಿಗೆ ಮಿತಿಗೊಂಡಿತು. 1967ರಲ್ಲಿ ಸೃಷ್ಟಿಯಾದ ವೇಮಗಲ್ ಕ್ಷೇತ್ರ 2008ರಲ್ಲಿ ಕ್ಷೇತ್ರಗಳ ಪುನರ್‌ವಿಂಗಡನೆಯಾದಾಗ ವೇಮಗಲ್ ಕ್ಷೇತ್ರವನ್ನು ಕೋಲಾರ ಮತ್ತು ಚಿಂತಾಮಣಿಗೆ ಸೇರ್ಪಡೆ ಮಾಡಲಾಯಿತು. ಬೇತಮಂಗಲ ಹೆಸರಿನ ಕ್ಷೇತ್ರವನ್ನು ಬಂಗಾರಪೇಟೆ ಕ್ಷೇತ್ರವನ್ನಾಗಿ ಮಾರ್ಪಡಿಸಲಾಯಿತು.
ಕೋಲಾರ
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ 16 ಚುನಾವಣೆ ನಡೆದಿದೆ. ಕಾಂಗ್ರೆಸ್ 4, ಜನತಾಪಕ್ಷ 4 ಬಾರಿ, ಜೆಡಿಎಸ್ 1 ಬಾರಿ, ಪಕ್ಷೇತರ 5 ಬಾರಿ ಗೆಲುವು ಸಾಧಿಸಿದೆ. 1952ರ ಮೊದಲ ಚುನಾವಣೆಯಲ್ಲಿಯೇ ಪಟ್ಟಾಭಿರಾಮನ್ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್‌ಗೆ ಬಂಡಾಯ ಎದ್ದಿದ್ದರು. ಅನಂತರ ಪಿ.ವೆಂಕಟಗಿರಿಯಪ್ಪ ಎರಡು ಬಾರಿ ಪಕ್ಷೇತರ ಶಾಸಕರಾಗಿದ್ದರು. ಜನತಾ ಪರಿವಾರದ ಕೆ.ಶ್ರೀನಿವಾಸಯ್ಯ 2 ಬಾರಿ, 2008ರಲ್ಲಿ ಜಿಲ್ಲೆಗೆ ಕಾಲಿಟ್ಟ ವರ್ತೂರು ಪ್ರಕಾಶ್ ಎರಡು ಬಾರಿ ಪಕ್ಷೇತರ ಶಾಸಕರಾದರು. ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ವಿವಿಧ ಪಕ್ಷಗಳಲ್ಲಿ ನಾಲ್ಕು ಬಾರಿ ಚುನಾವಣೆ ಗೆದ್ದಿದ್ದಾರೆ. ಈ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದರೂ ಕಾಂಗ್ರೆಸ್ ಸೇರಿ ಸಿದ್ದರಾಮಯ್ಯರಿಗೆ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಸ್ಪರ್ಧೆಯಿಂದ ಕ್ಷೇತ್ರ ರಂಗೇರಿದೆ. ಪಕ್ಷೇತರರಾಗಿ 2 ಬಾರಿ ಗೆಲುವು ಸಾಧಿಸಿದ್ದ ವರ್ತೂರು ಪ್ರಕಾಶ್ ಒಂದು ಬಾರಿ ಸೋತಿದ್ದಾರೆ. ಈಗ ಬಿಜೆಪಿ ಅಭ್ಯರ್ಥಿಯಾಗುವ ತಯಾರಿ ನಡೆಸಿದ್ದಾರೆ. ಸಿ.ಎಂ.ಆರ್. ಶ್ರೀನಾಥ್ ಜಾತ್ಯತೀತ ಜನತಾದಳದ ಘೋಷಿತ ಅಭ್ಯರ್ಥಿಯಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.
ಕೆಜಿಎಫ್
ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ 16 ಬಾರಿ ಚುನಾವಣೆ ನಡೆದಿದೆ. ಆರಂಭದ 1952ರ ಚುನಾವಣೆಯಲ್ಲಿ ಬೇತಮಂಗಲ ಕೆಜಿಎಫ್ ದ್ವಿಸದಸ್ಯತ್ವ ಕ್ಷೇತ್ರವಾಗಿತ್ತು. 1967ರಲ್ಲಿ ಸ್ವತಂತ್ರ ಕ್ಷೇತ್ರವಾಗಿ ಹೊರ ಹೊಮ್ಮಿತು. ಕಾಂಗ್ರೆಸ್‌ನಿಂದ ಎನ್.ರಾಜಗೋಪಾಲ್ ಗೆದ್ದಿದ್ದರು. 1972ರಲ್ಲಿ ಆರ್ಮುಗಂ ಪಕ್ಷೇತರರಾಗಿ ಗೆದ್ದಿದ್ದರು. ಈ ಕ್ಷೇತ್ರ ಸಾಂಪ್ರದಾಯಿಕ ಕಾಂಗ್ರೆಸ್, ಜೆಡಿಎಸ್ ಹೊರತಾಗಿ ಸಿಪಿಐ, ಸಿಪಿಎಂ, ಡಿಎಂಕೆ, ಅಣ್ಣಾಡಿಎಂಕೆ, ಆರ್‌ಪಿಐ ಹೀಗೆ ವಿಭಿನ್ನ ಪಕ್ಷಗಳಿಂದ ಶಾಸಕರಾಗಿ ಗೆದ್ದಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಬೇತಮಂಗಲ ಕೆಜಿಎಫ್ ಕ್ಷೇತ್ರಕ್ಕೆ ಸೇರ್ಪಡೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಮೂಲಕ ವೈ.ಸಂಪಂಗಿ ಇಲ್ಲಿ ಗೆದ್ದಿದ್ದರು. ಅನಂತರ ಅವರ ತಾಯಿ ವೈ.ರಾಮಕ್ಕ ಶಾಸಕರಾಗಿದ್ದರು. ಹಾಲಿ ಕಾಂಗ್ರೆಸ್‌ನಿಂದ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಕಲಾ ಶಾಸಕರಾಗಿದ್ದಾರೆ. ಮರು ಆಯ್ಕೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿಯಿಂದ ವೈ.ಸಂಪಂಗಿ ಅಥವಾ ಅವರ ಕುಟುಂಬದಿಂದ ಒಬ್ಬರು ಸ್ಪರ್ಧಿಯಾಗಬಹುದು. ಜೆಡಿಎಸ್‌ನಿಂದ ರಮೇಶ್‌ಬಾಬು ಘೋಷಿತ ಅಭ್ಯರ್ಥಿಯಾಗಿದ್ದಾರೆ.
ಬಂಗಾರಪೇಟೆ
ಬಂಗಾರಪೇಟೆ ವಿಧಾನಸಭಾ ಕ್ಷೇತ್ರವು 1952ರಲ್ಲಿ ಕೆ.ಚಂಗಲರಾಯರೆಡ್ಡಿ ಮೂಲಕ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟಿತ್ತು. ಅನಂತರ ಎರಡು ಚುನಾವಣೆಯಲ್ಲಿ ಜಿ.ನಾರಾಯಣಗೌಡ ಪಕ್ಷೇತರರಾಗಿ ಗೆದ್ದಿದ್ದರು. 1967ರಲ್ಲಿ ಇದು ಬೇತಮಂಗಲ ಕ್ಷೇತ್ರವಾಗಿ ಮಾರ್ಪಟ್ಟಿತು. ಬೇತಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 11 ಚುನಾವಣೆ ನಡೆದಿತ್ತು. ಜಿ.ನಾರಾಯಣಗೌಡ 1967 ಕಾಂಗ್ರೆಸ್‌ನಿಂದ ಗೆದ್ದಿದ್ದರು. 1972ರ ಚುನಾವಣೆಯಲ್ಲಿ ಕೆ.ಎಂ.ದೊರೆಸ್ವಾಮಿ ನಾಯ್ಡು ಪಕ್ಷೇತರರಾಗಿ ಗೆದ್ದಿದ್ದರು. ಬಿಜೆಪಿ 1 ಬಾರಿ ಪಕ್ಷೇತರ 3 ಕಾಂಗ್ರೆಸ್ 4 ಜೆಡಿಎಸ್ 3 ಬಾರಿ ಗೆದ್ದಿತ್ತು. 2008ರಲ್ಲಿ ಕ್ಷೇತ್ರವು ಬದಲಾವಣೆಯಾಗಿ ಬಂಗಾರಪೇಟೆ ಕ್ಷೇತ್ರವಾಗಿ ಮಾರ್ಪಟ್ಟಿತು. ಬಂಗಾರಪೇಟೆ ಕ್ಷೇತ್ರವಾದ ಮೇಲೆ 2008ರಲ್ಲಿ ಕಾಂಗ್ರೆಸ್‌ನಿಂದ ಎಂ.ನಾರಾಯಣಸ್ವಾಮಿ, ಆಪರೇಶನ್ ಕಮಲದ ಅನಂತರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ 2011ರಲ್ಲಿ ಗೆದ್ದಿದ್ದರು. 2013ರ ಚುನಾವಣೆಯಲ್ಲಿ ಸೋತಿದ್ದರು. ಎಸ್.ಎನ್.ನಾರಾಯಣಸ್ವಾಮಿ ಆಗಿನಿಂದ ಸತತವಾಗಿ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಂಪಾದಿಸಿದ್ದಾರೆ. ಈ ಬಾರಿಯೂ ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಘೋಷಿತ ಅಭ್ಯರ್ಥಿಯಾಗಿ ಮಲ್ಲೇಶ್‌ಬಾಬು, ಬಿಜೆಪಿಯಿಂದ ಬಿ.ಪಿ.ಮಹೇಶ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಶ್ರೀನಿವಾಸಪುರ
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ 15 ಚುನಾವಣೆ ನಡೆದಿದೆ. ಮೊದಲ 1852ರ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದೊಂದಿಗೆ ದ್ವಿಸದಸ್ಯತ್ವದ ಕ್ಷೇತ್ರವಾಗಿತ್ತು. 1962ರಲ್ಲಿ ಸ್ವತಂತ್ರ ಕ್ಷೇತ್ರವಾಯಿತು. 1967ರಲ್ಲಿ ಪಕ್ಷೇತರರಾಗಿ ಬಿ.ಎಲ್. ನಾರಾಯಣಸ್ವಾಮಿ ಗೆದ್ದಿದ್ದರು. 1972ರಲ್ಲಿ ಬಚ್ಚಿರೆಡ್ಡಿ ಗೆದ್ದಿದ್ದು ಬಿಟ್ಟರೆ 1978ರಿಂದ ರಮೇಶ್‌ಕುಮಾರ್ ಗೆಲ್ಲುತ್ತಾರೆ. 1983ರಲ್ಲಿ ರಮೇಶ್‌ಕುಮಾರ್ ವಿರುದ್ಧ ಜಿ.ಕೆ.ವೆಂಕಟಶಿವಾರೆಡ್ಡಿ ಗೆಲ್ಲುತ್ತಾರೆ. ಆಗಿನಿಂದ ಈವರೆಗೂ ಹತ್ತು ಚುನಾವಣೆಗಳಲ್ಲಿ ಒಮ್ಮೆ ಅವರು ಒಮ್ಮೆ ಇವರು ಗೆದ್ದು ಸೋಲುತ್ತಿದ್ದಾರೆ. 2018ರಲ್ಲಿ ರಮೇಶ್‌ಕುಮಾರ್ ಸತತ ಗೆಲ್ಲುವ ಮೂಲಕ ಸೋಲಿನ ಸರಪಳಿ ಮುರಿದಿದ್ದರು. ಈಗ ಜಿ.ಕೆ.ವೆಂಕಟಶಿವಾರೆಡ್ಡಿ ಜೆಡಿಎಸ್‌ನಿಂದ, ರಮೇಶ್‌ಕುಮಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.
ಮಾಲೂರು
ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ 16 ಬಾರಿ ಚುನಾವಣೆ ನಡೆದಿದೆ. ಕಾಂಗ್ರೆಸ್ 10 ಬಾರಿ ಗೆಲುವು ಸಂಪಾದಿಸಿ ಪ್ರಾಬಲ್ಯ ಮೆರೆದಿದೆ. 1962ರಲ್ಲಿ ಎಸ್.ವಿ. ರಾಮೇಗೌಡ ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. ಜನತಾ ಪಕ್ಷ, ಜಾತ್ಯತೀತ ಜನತಾದಳ 3 ಬಾರಿ ಹಾಗೂ ಬಿಜೆಪಿ 2 ಬಾರಿ ಗೆದ್ದಿದೆ. ಕೃಷ್ಣಯ್ಯ ಶೆಟ್ಟಿ ಈ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿದ್ದರು. ಕೃಷ್ಣಯ್ಯಶೆಟ್ಟಿ ಅನಂತರ ಮಂಜುನಾಥ ಗೌಡ ಜಾತ್ಯತೀತ ಜನತಾದಳದಿಂದ ಗೆದ್ದಿದ್ದರು. ಅನಂತರ ಕೆ.ವೈ.ನಂಜೇಗೌಡ ಕಾಂಗ್ರೆಸ್ ಶಾಸಕರಾಗಿದ್ದಾರೆ. ಈಗ ಕೆ.ವೈ.ನಂಜೇಗೌಡ ಕಾಂಗ್ರೆಸ್‌ನಿಂದ ಪುನರಾಯ್ಕೆ ಬಯಸಿದ್ದಾರೆ. ಮಾಜಿ ಶಾಸಕ ಮಂಜುನಾಥಗೌಡ ಮತ್ತು ಹೂಡಿ ವಿಜಯಕುಮಾರ್ ಬಿಜೆಪಿಯಿಂದ ಸ್ಪರ್ಧೆಗೆ ಪೈಪೋಟಿ ನಡೆಸುತ್ತಿದ್ದಾರೆ. ಜೆಡಿಎಸ್‌ನಿಂದ ರಾಮೇಗೌಡ ಅಭ್ಯರ್ಥಿಯಾಗಿ ಘೋಷಿತರಾಗಿದ್ದಾರೆ.
ಮುಳಬಾಗಿಲು
ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ 16 ಚುನಾವಣೆ ನಡೆದಿದೆ. ಆರಂಭದ 1952ರ ಚುನಾವಣೆಯಲ್ಲಿ ಟಿ.ಚನ್ನಯ್ಯಮತ್ತು ಜಿ.ನಾರಾಯಣಗೌಡ ಶ್ರೀನಿವಾಸಪುರ ಮುಳಬಾಗಿಲು ದ್ವಿಸದಸ್ಯತ್ವದ ಶಾಸಕರಾಗಿದ್ದರು. ಅನಂತರ ಕಾಂಗ್ರೆಸ್ 8 ಬಾರಿ ಗೆದ್ದಿದೆ. 1972ರಲ್ಲಿ ಪಿ.ಮುನಿಯಪ್ಪ ಪಕ್ಷೇತರರಾಗಿ ಗೆದ್ದಿದ್ದರು. ಸಿಪಿಎಂ 1 ಬಾರಿ, ಜೆಡಿಎಸ್ 2 ಬಾರಿ, ಪಕ್ಷೇತರರು 4 ಬಾರಿ ಗೆದ್ದಿದ್ದಾರೆ. ಎಂ.ವಿ.ಕೃಷ್ಣಪ್ಪ, ಎಂ.ವಿ.ವೆಂಕಟಪ್ಪ, ಆರ್.ವೆಂಕಟರಾಮಯ್ಯ, ಆಲಂಗೂರು ಶ್ರೀನಿವಾಸ್ ಇಲ್ಲಿನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಈಗ ಕಾಂಗ್ರೆಸ್‌ಗೆ ಇನ್ನೂ ಅಭ್ಯರ್ಥಿ ಘೋಷಿತವಾಗಿಲ್ಲ. ಹಾಲಿ ಶಾಸಕ ಪಕ್ಷೇತರರಾಗಿ ಗೆದ್ದಿದ್ದ ಎಚ್. ನಾಗೇಶ್ ಕ್ಷೇತ್ರ ಬಿಡುವ ತಯಾರಿಯಲ್ಲಿದ್ದಾರೆ. ಈಗ ಜೆಡಿಎಸ್ ಅಭ್ಯರ್ಥಿಯಾಗಿ ಸಮೃದ್ಧಿ ಮಂಜುನಾಥ್ ಘೋಷಿತರಾಗಿದ್ದಾರೆ. ಬಿಜೆಪಿಗೆ ಇಲ್ಲಿ ಬಲವಾದ ಹಿನ್ನೆಲೆ ಇಲ್ಲವಾಗಿದ್ದರಿಂದ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಬೇಡಿಕೆ ಇಲ್ಲವಾಗಿದೆ.
ವೇಮಗಲ್ ಕ್ಷೇತ್ರ ಈಗ ಅಸ್ತಿತ್ವದಲ್ಲಿ ಇಲ್ಲ
ವೇಮಗಲ್ ವಿಧಾನಸಭಾ ಕ್ಷೇತ್ರದಲ್ಲಿ 9 ಚುನಾವಣೆ ನಡೆದಿದೆ. 1967ರಲ್ಲಿ ಕ್ಷೇತ್ರವನ್ನು ರಚಿಸಲಾಯಿತು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಿ.ನಾರಾಯಣಗೌಡ, 1972ರಲ್ಲಿ ಸಿ.ಬೈರೇಗೌಡ ಪಕ್ಷೇತರರಾಗಿ ಮೊದಲಬಾರಿ ಗೆದ್ದಿದ್ದರು. ಅನಂತರ ಜನತಾಪಕ್ಷ, ಸಂಯುಕ್ತ ಜನತಾದಳ, ಪಕ್ಷೇತರರಾಗಿ ಸಿ.ಬೈರೇಗೌಡ ಸತತವಾಗಿ ಆರು ಬಾರಿ ಗೆದ್ದಿದ್ದರು. ಕಾಂಗ್ರೆಸ್‌ನಿಂದ ಗೋವಿಂದಗೌಡ 1978ರಲ್ಲಿ ಶಾಸಕರಾಗಿದ್ದರು. ಬೈರೇಗೌಡರು 2003ರಲ್ಲಿ ನಿಧನ ಹೊಂದಿದ ಅನಂತರ ಅವರ ಪುತ್ರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅನಂತರ 2004ರ ಚುನಾವಣೆಯಲ್ಲಿ ಕೃಷ್ಣಬೈರೇಗೌಡ ಗೆದ್ದಿದ್ದರು. 2008ರ ವೇಳೆಗೆ ಕ್ಷೇತ್ರವು ಪುನರ್‌ವಿಂಗಡಣೆ ಪ್ರಕ್ರಿಯೆಯಲ್ಲಿ ಕೋಲಾರ, ಚಿಂತಾಮಣಿ ಕ್ಷೇತ್ರಗಳಿಗೆ ಹಂಚಿಕೆಯಾಗಿ ಮಾಯವಾಯಿತು.
ಎರಡು ಉಪ ಚುನಾವಣೆ
ಈವರೆಗೂ ಕೋಲಾರ ಜಿಲ್ಲೆಯಲ್ಲಿ 11 ಸಾರ್ವತ್ರಿಕ ಚುನಾವಣೆಗಳು ವಿಧಾನಸಭೆಗೆ ನಡೆದಿವೆ. ವೇಮಗಲ್ ಕ್ಷೇತ್ರದಲ್ಲಿ ಸಿ.ಬೈರೇಗೌಡರ ನಿಧನದಿಂದ 2003 ರಲ್ಲಿ ಉಪ ಚುನಾವಣೆ ನಡೆಯಿತು. 2011 ರಲ್ಲಿ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಂ.ನಾರಾಯಣಸ್ವಾಮಿ ಆಪರೇಶನ್ ಕಮಲಕ್ಕೆ ತುತ್ತಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆದಿತ್ತು. ಈಗ ಕೋಲಾರ ಜಿಲ್ಲೆಯು ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ ಮತ್ತು ಮಾಲೂರು ಕ್ಷೇತ್ರಗಳನ್ನೊಳಗೊಂಡಿದೆ.
-ಕೆ.ಎಸ್.ಗಣೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರುಣಾ- ಕೋಲಾರ.. ಕ್ಷೇತ್ರ ಯಾವುದಯ್ಯಾ? ಮತ್ತಷ್ಟು ಗೊಂದಲ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ
ಈಶ್ವರಪ್ಪಗೆ 35 ವರ್ಷ ಅವಕಾಶ ಕೊಟ್ಟಾಯ್ತು, ಈ ಬಾರಿ ನನಗೆ ಕೊಡಲಿ: ಆಯನೂರು ಮಂಜುನಾಥ್
ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !
ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!
ಶಿವಮೊಗ್ಗದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್; ಈಶ್ವರಪ್ಪಗೆ ಆಯನೂರು ಮಂಜುನಾಥ್ ಟಾಂಗ್