ಅಂಡಮಾನ್‌ನಲ್ಲಿ ಚೀನ ಬೇಹುಗಾರಿಕಾ ಬಲೂನು?
Team Udayavani, Feb 7, 2023, 7:35 AM IST
ಪೋರ್ಟ್‌ಬ್ಲೇರ್: ಇತ್ತೀಚೆಗೆ ಅಮೆರಿಕ ಸೇನೆಯು ತನ್ನ ಗಡಿಯೊಳಗೆ ಸಂಚರಿಸುತ್ತಿದ್ದ ಚೀನ ಬೇಹಾಗಾರಿಕಾ ಬಲೂನ್ ಹೊಡೆದುರುಳಿಸಿದ ಹಿನ್ನೆಲೆಯಲ್ಲಿ ಭಾರತದ ಮಟ್ಟಿಗೂ ಇಂತಹದ್ದೊಂದು ಘಟನೆ ನಡೆದಿತ್ತು ಎಂಬ ಸುದ್ದಿ ಬೆಳಕಿಗೆ ಬಂದಿದೆ.
2021ರ ಡಿಸೆಂಬರ್ ಕೊನೆಯ ವಾರದಲ್ಲಿ ಭಾರತೀಯ ಸೇನೆಯ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನಾಯು ಜಂಟಿಯಾಗಿ ಸಮಾರಾಭ್ಯಾಸ ನಡೆಸಿತ್ತು. ಈ ವೇಳೆ ಇದೇ ರೀತಿಯ ಬಲೂನ್ ಒಂದು ಆಗಸದಲ್ಲಿ ಹಾರುತ್ತಿತ್ತು. ಪೋರ್ಟ್‌ಬ್ಲೇರ್‌ನಲ್ಲಿ ಹಾರಾಡುತ್ತಿದ್ದ ಈ ಬಲೂನ್ ಅನ್ನು ಸ್ಥಳೀಯರು ಸೆರೆಹಿಡಿದು 2022ರ ಜನವರಿ ಮೊದಲ ವಾರದಲ್ಲಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದು ಚೀನ ಹಾರಿಸಿದ್ದ ಬೇಹುಗಾರಿಕಾ ಬಲೂನ್ ಇದ್ದಿರಬಹುದು ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಭಾರತೀಯ ಸೇನೆಯ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.