6,000 ಮಂದಿ ಭೂಸಮಾಧಿ: ಟರ್ಕಿ, ಸಿರಿಯಾದಲ್ಲಿ ಮತ್ತೆ ಮತ್ತೆ ಭೂಕಂಪ
ಸಂತ್ರಸ್ತ ಪ್ರದೇಶಕ್ಕೆ ಭಾರತದ 4 ರಕ್ಷಣ ವಿಮಾನ ರವಾನೆ
Team Udayavani, Feb 8, 2023, 7:10 AM IST
ಇಸ್ತಾಂಬುಲ್/ಹೊಸದಿಲ್ಲಿ: ಭೂ ಕಂಪದಿಂದ ಜರ್ಝರಿತವಾಗಿರುವ ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಭಾರತ ಸಹಾಯ ಹಸ್ತ ಚಾಚಿದ್ದು, ಭಾರತೀಯ ವಾಯುಸೇನೆಯ ನಾಲ್ಕು ವಿಮಾನಗಳಲ್ಲಿ ಸಂಚಾರಿ ಆಸ್ಪತ್ರೆ, ವೈದ್ಯಕೀಯ ಸಿಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡದ ಸಿಬಂದಿ ತೆರಳಿ ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಟರ್ಕಿ ಮತ್ತು ಸಿರಿಯಾದಲ್ಲಿ ಇದುವರೆಗೆ ನಾಲ್ಕು ಪ್ರಬಲ ಭೂಕಂಪಗಳು ಮತ್ತು ಹಲವು ಪಶ್ಚಾತ್ ಕಂಪನಗಳಾಗಿವೆ. ಮಂಗಳವಾರವೂ ಒಂದು ಬಾರಿ ಭೂಮಿ ಕಂಪಿಸಿದ್ದು, ಜನರು ಸಾವಿನ ಭೀತಿಯಿಂದಲೇ ದಿನ ದೂಡುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ಸೇರಿ ಈವರೆಗೆ 6,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಜಗತ್ತಿನ ನಾನಾ ದೇಶಗಳ ರಕ್ಷಣ ತಂಡಗಳು ಟರ್ಕಿ ಮತ್ತು ಸಿರಿಯಾ ತಲುಪಿವೆ. ಟರ್ಕಿಯ ವಿಪತ್ತು ನಿರ್ವಹಣ ಮಂಡಳಿಯ ಪ್ರಕಾರ ವಿವಿಧ ದೇಶಗಳ 24,400 ತುರ್ತು ಸಿಬಂದಿ ರಕ್ಷಣೆಯಲ್ಲಿ ತೊಡಗಿದ್ದಾರೆ.
ಟರ್ಕಿಯಲ್ಲಿ ಒಟ್ಟು 6 ಸಾವಿರಕ್ಕೂ ಅಧಿಕ ಕಟ್ಟಡಗಳು ಧರಾಶಾಯಿಯಾಗಿವೆ. ಈ ಮಧ್ಯೆ ಗಾಯದ ಮೇಲೆ ಉಪ್ಪು ಸುರಿದಂತೆ ರಕ್ಷಣ ಕಾರ್ಯಾಚರಣೆಗೆ ತೀವ್ರ ಚಳಿ ಅಡ್ಡಿ ಮಾಡುತ್ತಿದೆ. ಹಿಮ ಮಳೆ ಸುರಿಯುತ್ತಿದ್ದು, ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವುದೇ ಹರಸಾಹಸವಾಗಿದೆ. ಆಗಾಗ್ಗೆ ಉಂಟಾಗುತ್ತಿರುವ ಪಶ್ಚಾತ್ ಕಂಪನಗಳು ಕೂಡ ಅಡ್ಡಿಯಾಗಿವೆ.
ಇದುವರೆಗೆ 10 ಪ್ರಾಂತಗಳಲ್ಲಿ 7,800 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಎಲ್ಲ 10 ಪ್ರಾಂತಗಳಲ್ಲಿಯೂ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಕಟ್ಟಡಗಳ ಕೆಳಗೆ ಸಿಲುಕಿರುವ ಕುಟುಂಬಸ್ಥರನ್ನು ಬದುಕಿಸಲು ಜನರು ಒದ್ದಾಡುತ್ತಿದ್ದಾರೆ. ನುರ್ಗುಲ್ ಅಟಾಯ್ ಎಂಬಾಕೆಯ ಮನೆ ಕುಸಿದು ಬಿದ್ದಿದ್ದು, ಅದರಡಿ ಅವರ ತಾಯಿ ಸಿಲುಕಿದ್ದಾರೆ. ಆಕೆಯ ರೋದನ ಕೇಳುತ್ತಿದೆ, ಆದರೆ ರಕ್ಷಣೆ ಮಾಡಲಾಗುತ್ತಿಲ್ಲ ಎಂದು ಅಟಾಯ್ ನೋವು ತೋಡಿಕೊಂಡಿದ್ದಾರೆ.
ಸಿರಿಯಾದಲ್ಲೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಲ್ಲಿ ಸುಮಾರು 800 ಮಂದಿ ಅಸುನೀಗಿದ್ದು, 2,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಲ್ಲಿಯೂ ಸಾವಿನ ಸಂಖ್ಯೆ ಗಣನೀಯವಾಗಿ ಏರಬಹುದು ಎಂದು ಹೇಳಲಾಗುತ್ತಿದೆ.
ಧನ್ಯವಾದ ಹೇಳಿದ ಟರ್ಕಿ, ಸಿರಿಯಾ|
ಭೂಕಂಪವಾದ ಕೆಲವೇ ತಾಸುಗಳಲ್ಲಿ ಭಾರತ ನೆರವಿಗೆ ಧಾವಿಸಿದೆ. ಭಾರತವೇ ನಿಜವಾದ “ದೋಸ್ತ್’ ಎನ್ನುವುದು ಇದಕ್ಕೇ ಎಂದು ಭಾರತದಲ್ಲಿರುವ ಟರ್ಕಿಯ ರಾಯಭಾರಿ ಹೇಳಿದ್ದಾರೆ. ಇನ್ನೊಂದೆಡೆ ಸಿರಿಯಾ ಕೂಡ ಭಾರತಕ್ಕೆ ಧನ್ಯವಾದ ತಿಳಿಸಿದೆ.
ಕಿಡಿಗೇಡಿ ಪಾಕ್
ಪಾಕಿಸ್ಥಾನ ಆರ್ಥಿಕ ಹಿಂಜರಿತದಲ್ಲಿ ಮುಳುಗೇಳುತ್ತಿದ್ದರೂ ಅದಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮಂಗಳವಾರ ಬೆಳಗ್ಗೆ ರಕ್ಷಣ ಸಾಮಗ್ರಿ ಮತ್ತು ರಾಷ್ಟ್ರೀಯ ವಿಪತ್ತು ದಳದ ಸಿಬಂದಿಯೊಂದಿಗೆ ಟರ್ಕಿಗೆ ಹೊರಟಿದ್ದ ಭಾರತೀಯ ವಾಯು ಸೇನಾ ವಿಮಾನಕ್ಕೆ ಪಾಕ್ ತನ್ನ ವಾಯು ಪ್ರದೇಶ ಪ್ರವೇಶ ನಿರ್ಬಂಧಿಸಿದೆ. ಹೀಗಾಗಿ ಐಎಎಫ್ ವಿಮಾನ ಬೇರೊಂದು ಮಾರ್ಗದಲ್ಲಿ ಟರ್ಕಿ ತಲುಪಿತು.
ಎರಡು ವಿಮಾನ ರವಾನೆ
ಟರ್ಕಿಯಲ್ಲಿ ರಕ್ಷಣ ಕಾರ್ಯಾಚರಣೆಗಾಗಿ ಭಾರತದಿಂದ ನಾಲ್ಕು ಯುದ್ಧ ವಿಮಾನಗಳಲ್ಲಿ ಪರಿಹಾರ ಸಾಮಗ್ರಿಗಳು, ಶ್ವಾನಗಳ ಜತೆಗೆ ಎನ್‌ಡಿಆರ್‌ಎಫ್ ಸಿಬಂದಿ ತೆರಳಿ ಕೆಲಸ ಆರಂಭಿಸಿದ್ದಾರೆ. ಐಎಎಫ್ನ ಸಿ-17 ಸಾರಿಗೆ ವಿಮಾನವು ಶೋಧ ಮತ್ತು ಪರಿಹಾರ ಸಿಬಂದಿ, ವಿಶೇಷವಾಗಿ ತರಬೇತಿ ಪಡೆದಿರುವ ಶ್ವಾನಗಳ ತಂಡ, ಡ್ರಿಲ್ಲಿಂಗ್ ಯಂತ್ರ, ಪರಿಹಾರ ಸಾಮಗ್ರಿ, ಔಷಧಗಳನ್ನು ಹೊತ್ತೂಯ್ದಿದೆ.
ಇನ್ನೊಂದು ಐಎಎಫ್- ಎಂಸಿಸಿ ಸಿ-17 ಯುದ್ಧ ವಿಮಾನವು ಸೇನಾ ವೈದ್ಯಕೀಯ ಸಿಬಂದಿಯ ಜತೆಗೆ ಇತರ ಪರಿಹಾರ ಕಾರ್ಯಾಚರಣೆ ವಸ್ತುಗಳೊಂದಿಗೆ ತೆರಳಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಭಾರತದಿಂದ ಒಟ್ಟು 99 ಮಂದಿಯ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ.
ಸಹಾಯವಾಣಿ ಸ್ಥಾಪಿಸಿದ ಕರ್ನಾಟಕ
ಟರ್ಕಿಯಲ್ಲಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರಕಾರ ಸಹಾಯವಾಣಿ ಸ್ಥಾಪಿಸಿದೆ. ಟರ್ಕಿಯಲ್ಲಿರುವವರ ಕುರಿತಂತೆ ಯಾವುದಾದರೂ ಮಾಹಿತಿ ಇದ್ದರೆ ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿಕೊಂಡಿದೆ.
0801070,08022340676
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 19 ಮಂದಿ ಮೃತ್ಯು: 4 ದಿನದಲ್ಲಿ 5ನೇ ಘಟನೆ
ವಾಟ್ಸಾಪ್ ನಲ್ಲಿ ಧರ್ಮನಿಂದನೆ ಬಗ್ಗೆ ಪೋಸ್ಟ್ ಹಾಕಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ
ಅಮೆರಿಕಾದಲ್ಲಿ ಭಾರತೀಯ ಪತ್ರಕರ್ತನ ಮೇಲೆ ಖಲಿಸ್ತಾನಿ ಬೆಂಬಲಿಗರ ಹಲ್ಲೆ, ನಿಂದನೆ
ಟ್ರಂಪ್ ವಿರುದ್ಧ ಶೀಘ್ರ ಬಂಧನ ಆದೇಶ? ಅಶ್ಲೀಲ ನಟಿ ಜತೆಗಿನ ಸಂಬಂಧ ಮುಚ್ಚಿಟ್ಟ ಆರೋಪ
ಗೋಧಿಗಾಗಿ ಮುಗಿಬಿದ್ದ ಜನ ಪಾಕ್‌ನಲ್ಲಿ 4 ಮಂದಿ ಸಾವು !
MUST WATCH
ಹೊಸ ಸೇರ್ಪಡೆ
ಚಿಕ್ಕಮಗಳೂರಿನಲ್ಲಿ ಹಿಂದುತ್ವ ಹಾಗೂ ಅಭಿವೃದ್ದಿಯೇ ಗೆಲ್ಲುವುದು: ಸಿ.ಟಿ.ರವಿ
ಬಂಧಿಸಿರುವ ಮಹಾರಾಷ್ಟ್ರದ ಹಸುಕರುಗಳ ಬಿಡುಗಡೆ ಮಾಡಲು ಮನವಿ
ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…
ಗೋರ್ಟಾ (ಬಿ) ಗ್ರಾಮದಲ್ಲಿ ಪಟೇಲ್ ಪ್ರತಿಮೆ ಮತ್ತು 103 ಅಡಿ ಧ್ವಜ ಸ್ತಂಭ ಲೋಕಾರ್ಪಣೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾ ಮರುಸ್ಥಾಪನೆ : ಡಿಕೆಶಿ