ಪಿಜಿಇಟಿ ವೈದ್ಯಕೀಯ ಕೋರ್ಸು: ಜ.21ರ ವರೆಗೆ ದಾಖಲೆ ಪರಿಶೀಲನೆ
Team Udayavani, Jan 19, 2022, 10:15 PM IST
ಬೆಂಗಳೂರು: ಪಿಜಿಇಟಿ-2021ರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಜ.21ರ ವರೆಗೆ ದಾಖಲೆ ಪರಿಶೀಲನೆ ಮುಂದುವರಿಯಲಿದೆ.
ಕೊರೊನಾ ಸೋಂಕು, ಸಂಚಾರ ನಿಷೇಧ, ಎನ್‌ಆರ್‌ಐ, ವಿವಿಧ ಕೊರೊನಾ ಕಾರಣಗಳಿಂದ ದಾಖಲೆ ಪರಿಶೀಲನೆಗೆ ಕೆಇಎ ಬೆಂಗಳೂರು ಕಚೇರಿಗೆ ಹಾಜರಾಗಲು ಸಾಧ್ಯವಾಗದಿರುವವರು ಮೂಲ ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬಹುದು. ಈ ಸಂಬಂಧ ಕೆಇಎ ವೆಬ್‌ಸೈಟ್‌ನಲ್ಲಿ ಲಿಂಕ್ ನೀಡಲಾಗಿದೆ.
ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಿರುವ ತಮ್ಮ ಮಾಹಿತಿ ಅನುಸಾರ ಎಲ್ಲ ಮೂಲ ದಾಖಲೆಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್‌ನಲ್ಲಿ ಜ.21ರ ಸಂಜೆ 5 ಗಂಟೆಯೊಳಗೆ ಸಲ್ಲಿಸುವಂತೆ ಕೆಇಎ ಸೂಚಿಸಿದೆ.
ಇದನ್ನೂ ಓದಿ:ಕುರುಗೋಡು : ಏರಂಗಳ್ಳಿ ಮೊರಾರ್ಜಿ ವಸತಿ ನಿಲಯದ 46 ಮಕ್ಕಳಿಗೆ ಕೋವಿಡ್ ಸೋಂಕು ದೃಢ
24ರಂದು ಯುಜಿ ನೀಟ್ ದಾಖಲೆ ಪರಿಶೀಲನೆ
ಯುಜಿನೀಟ್-2021ಕ್ಕೆ ಅರ್ಜಿ ಸಲ್ಲಿಸಿ ವಿವಿಧ ಕಾರಣಗಳಿಂದ ದಾಖಲೆ ಪರಿಶೀಲನೆಗೆ ಹಾಜರಾಗಲು ಸಾಧ್ಯವಾಗದಿರುವವರು ಜ.24ರಂದು ಕೆಇಎ ಬೆಂಗಳೂರು ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಹಾಜರಾಗಬಹುದು. ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ ಅನುಸಾರ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.