ಮಂಗಳೂರು: “ಸಂದೇಶ ಪ್ರಶಸ್ತಿ’ ಪ್ರದಾನ
Team Udayavani, Feb 8, 2023, 12:37 AM IST
ಮಂಗಳೂರು: ಸಾಧಕರು ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಅವರ ಜೀವನಗಾಥೆ ಯುವ ಪೀಳಿಗೆಗೆ ದಾರಿದೀಪವಾಗಬೇಕು. ಈ ಮೂಲಕ ಸಾಧಕರ ಸಾಧನೆಯ ಹೆಜ್ಜೆಗಳು ಬದುಕಿಗೆ ಕೈಗನ್ನಡಿಯಾಗುವಂತಾಗಲಿ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು.
ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ-ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ನಂತೂರು ಸಂದೇಶ ಪ್ರತಿಷ್ಠಾನದಲ್ಲಿ ನಡೆದ “ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಜನರ ಉದ್ಧಾರಕ್ಕಾಗಿ ಹಾಗೂ ಕಷ್ಟದಲ್ಲಿರುವ ಶೋಷಿತರ ಪರವಾಗಿ ತಮ್ಮನ್ನು ತೊಡಗಿಸಿಕೊಂಡು ಬದುಕಿದವರಿಗೆ ಸಂದೇಶ ಪ್ರಶಸ್ತಿ ಸಿಗುತ್ತಿರುವುದು ಸಂತಸದ ಸಂಗತಿ. ಪ್ರಶಸ್ತಿ ಪಡೆದವರ ವಿಚಾರಧಾರೆಗಳು ಬದುಕಿಗೆ ಹೊಸ ಭರವಸೆ ಮೂಡಿಸಲಿವೆ ಎಂದರು.
ಅರಿವಿನ ಕೊರತೆ ಸಮಸ್ಯೆಗೆ ಕಾರಣ
ಮುಖ್ಯ ಅತಿಥಿಯಾಗಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಸಮಾಜ, ಧರ್ಮ ಸೇರಿದಂತೆ ಸೇವಾ ಮನೋಭಾವ ಪರಿಕಲ್ಪನೆಯೇ ಈಗ ಬದಲಾಗುತ್ತಿದೆ. ಧರ್ಮ ಮತ್ತು ಮತಕ್ಕೆ ಇರುವ ವ್ಯತ್ಯಾಸವೇ ಗೊತ್ತಿಲ್ಲದೇ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಧರ್ಮ ಮತ್ತು ಮತಕ್ಕೆ ಇರುವ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಮಾಜ ಉತ್ತಮವಾಗಿ ನಡೆಯುತ್ತದೆ ಎಂದರು.
ಸಂದೇಶ ಸಂಸ್ಥೆಯು ಕಳೆದ 32 ವರ್ಷಗಳಿಂದ ಸಾಮಾಜಿಕ ಸಾಮರಸ್ಯ, ಮೌಲ್ಯಗಳಿಗೆ ಆದ್ಯತೆ ನೀಡುತ್ತ ಸಾಧಕ ರಿಗೆ ಸಮ್ಮಾನದ ಗೌರವ ಸಲ್ಲಿರುವುದು ಶ್ಲಾಘನೀಯ. ಈ ಮೂಲಕ ಸುಂದರ ಸಮಾಜ ಕಟ್ಟುವ ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಬಳ್ಳಾರಿ ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅಧ್ಯಕ್ಷತೆ ವಹಿಸಿ ಶುಭಾಶಯ ಸಲ್ಲಿಸಿದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ| ಸುದೀಪ್ ಪೌಲ್, ಟ್ರಸ್ಟಿಗಳಾದ ರೋಯ್ ಕ್ಯಾಸ್ತಲಿನೊ ಮತ್ತು ವಂ| ಐವನ್ ಪಿಂಟೊ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ| ವಲೇರಿಯನ್ ರಾಡ್ರಿಗಸ್ ಉಪಸ್ಥಿತರಿದ್ದರು. ಐರಿನ್ ರೆಬೆಲ್ಲೋ ನಿರೂಪಿಸಿದರು.
ಸಾಧಕರಿಗೆ ಸಂದೇಶ ಪ್ರಶಸ್ತಿ ಪ್ರದಾನ
ಸಂದೇಶ ಸಾಹಿತ್ಯ ಪ್ರಶಸ್ತಿಯ ಪೈಕಿ ಕನ್ನಡದಲ್ಲಿ ರಾಘವೇಂದ್ರ ಪಾಟೀಲ್, ಕೊಂಕಣಿಯಲ್ಲಿ ಆ್ಯಂಡ್ರೂ ಎಲ್. ಡಿ’ಕುನ್ಹಾ ಮತ್ತು ತುಳು ವಿಭಾಗದ ಪ್ರಶಸ್ತಿಯನ್ನು ಡಾ| ಚಿನ್ನಪ್ಪ ಗೌಡ ಅವರಿಗೆ ಪ್ರದಾನಿಸಲಾಯಿತು. ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಶಿವಾಜಿ ಗಣೇಶನ್, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಯನ್ನು ಜೋಯ್ಸ ಒಝಾರಿಯೋ, ಸಂದೇಶ ಕಲಾ ಪ್ರಶಸ್ತಿಯನ್ನು ಎಂ.ಎಸ್.ಮೂರ್ತಿ, ಸಂದೇಶ ಶಿಕ್ಷಣ ಪ್ರಶಸ್ತಿಯನ್ನು ಕೋಟಿ ಗಾನಹಳ್ಳಿ ರಾಮಯ್ಯ ಅವರಿಗೆ ನೀಡಲಾಯಿತು. ಪ್ರೇರಣಾ ಟ್ರಸ್ಟ್‌ಗೆ ಸಂದೇಶ ವಿಶೇಷ ಪ್ರಶಸ್ತಿ ಹಾಗೂ ಡಾ| ಸಬಿಹಾ ಭೂಮಿಗೌಡ ಅವರಿಗೆ ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನಿಸಲಾಯಿತು.